Sunday, August 31, 2008

ಭೂತ ಗೀತ

ನಮ್ಮನ್ನೂ ಸೇರಿಸಿ ಅನೇಕರು ಮಾತನಾಡುವಾಗ ಸುಮ್ಮನೆ ಗಮನಿಸಿ; ಮಾತನ್ನು 'ಆಡುವಾಗ' ಪದಗಳ ಬಳಕೆ ಮಜಾ ಕೊಡುತ್ತದೆ.
ನಿಮ್ದು ಊಟ ಗೀಟ ಆಯಿತಾ? ಅಂತ ಕೇಳುತ್ತಾರೆ.
ಊಟ ಸರಿ. ಇದೆಂತಾ ಮಾರಾಯರೆ, ಗೀಟಾ?!
ತಿಂಡಿ ಗಿಂಡಿ ತಿಂದ್ರಾ? ಕಾಫಿ ಗೀಫಿ ಏನಾದ್ರೂ ಬೇಕಾ? ಅಂತೆಲ್ಲ ಕೇಳುವಾಗ ನಾವೂ ವಾಪಾಸು ಕೇಳಬಹುದೇನೋ?
ತಿಂಡಿ ಕೊಡಿ. ತಿಂದದ್ದು ಹೆಚ್ಚಾದರೆ ಬೇಕಾಗುತ್ತದೆ, ಗಿಂಡಿ(ಚೆಂಬು).
ಇವತ್ತು ಸ್ಟ್ರೈಕು ಗಿಯ್ಕು ಉಂಟಾ? ಬಸ್ಸು ಗಿಸ್ಸು ಇಲ್ದಿದ್ರೆ ಕಷ್ಟ ಅಲ್ವಾ? ಹೀಗೆ ಸಾಗುತ್ತದೆ ಮಾತು.
ಒಂದು ಜೋಕು ಇಂತಹ ಪದಗಳ ಬಳಕೆಯಿಂದಾಗಿಯೇ ಚಾಲ್ತಿಯಲ್ಲಿದೆ;
ರಾತ್ರಿ ಹೋಗುವಾಗ ಭೂತ ಗೀತ ಬಂದ್ರೆ ಏನು ಮಾಡ್ತೀಯಾ ಅಂತ ಒಬ್ಬ ಕೇಳಿದನಂತೆ. ಅದಕ್ಕೆ ಇನ್ನೊಬ್ಬ, ಭೂತ ಬಂದ್ರೆ ಏನು ಮಾಡ್ತೀನಂತ ಗೊತ್ತಿಲ್ಲ, ಆದ್ರೆ ಗೀತ ಬಂದ್ರೆ ಆಚೆ ಕರೆದುಕೊಂಡು ಹೋಗ್ತೇನೆ!
ಅವ ದುಡ್ಡು 'ಗಿಡ್ಡು' ಖರ್ಚು ಮಾಡುವುದಕ್ಕೆ ಹಿಂದು ಮುಂದು ನೋಡೋದಿಲ್ಲ. ಆದ್ರೆ ಅವ ಹೇಳಿದ ಕೆಲ್ಸ ಗಿಲ್ಸ ಆಗಿಲ್ಲಾಂದ್ರೆ ಕೋಪ ಗೀಪ ಮಾಡಿಕೊಂಡ್ರೆ ಅಬ್ಬಬ್ಬಾ!
ಅವ ತುಂಬ ಜಾಣ; ಸಂಮಾನ ಗಿಂಮಾನ ಮಾಡಿ ನಿಮ್ಮನ್ನು ಓಲೈಸಿ ಗೀಲೈಸಿ ಎಲ್ಲೈಸಿ ಪಾಲಿಸಿ ಮಾಡಿಬಿಟ್ಟಾನು!
ನೀವೂ ಇಂತಹ ಪದಗಳನ್ನು ಗಮನಿಸಿ ನನ್ಗೂ ಕಳಿಸಿ ಆಯ್ತಾ...
ತುಂಬ ಕಳುಹಿಸಿಕೊಟ್ರೆ ಫ್ರೈಜು ಗಿಯ್ಜು ಗ್ಯಾರಂಟಿ!

Saturday, August 23, 2008

ಯಾರಲ್ಲಿ ಕೇಳಲಿ?

ಕೈಗಾರಿಕೆ ಬರುತ್ತದೆ. ಉದ್ಯೋಗ ಸಿಗುತ್ತದೆ. ಹಳ್ಳಿ ಪೇಟೆಯಾಗಿ ಜನರಲ್ಲಿ ದುಡ್ಡಾಗುತ್ತದೆ...
ಸರಿ, ನಮ್ಮ ಜಮೀನು ಕೊಡುತ್ತೇವೆ. ಆದರೆ ಪರಿಹಾರ ಕೊಡಿ.
ಎಸ್ಇಝಡ್ ನವರು ಎಕರೆಗೆ ಎಂಟು ಲಕ್ಷ ಕೊಡ್ತಾರಂತೆ! ಒಳ್ಳೇ ರೇಟು. ಆದರೆ ಪಕ್ಕದೂರಿನಲ್ಲಿ ಒಂದು ಫ್ಲಾಟ್ ಕೊಳ್ಳೋಣವೆಂದರೆ ಮಿನಿಮಮ್ ಹದಿನೈದು ಲಕ್ಷ ಬೇಕು! ಮಂಗಳೂರಿನಂತಹ ನಗರದಲ್ಲಿ ಕನಿಷ್ಟ ಇಪ್ಪತ್ತೈದು!
ಆದರೂ ನಮಗೆ ಪರಿಹಾರ ಸಿಕ್ಕರೆ ಲಾಭವೇ. ಇಲ್ಲದಿದ್ದರೆ ಸರಕಾರ ಕಾನೂನು ಮಾಡಿದರೆ ನಮ್ಮ ಜಾಗ ಹೋಗುವುದು ಗ್ಯಾರಂಟಿ. (ಜಾಗ ಇದ್ದಲ್ಲೇ ಇರುತ್ತದೆ. ಹೋಗುವುದು ನಾವು !)
ಎಲ್ಲ ಸರಿ ಮಾರಾಯರೇ, ನಮ್ಮ ಜಮೀನು, ವಾಸಸ್ಥಳ ನಮ್ಮ ಕೈತಪ್ಪಿ ಹೋಗುವಾಗ ಒಂದಿಷ್ಟು ಪರಿಹಾರವಾದರೂ ಸಿಗುತ್ತದೆ. ಆದರೆ ಕೈಗಾರಿಕೆ ಬರುವಾಗ ನೂರಾರು ಮರಗಳು ಸತ್ತು ಹೋಗುತ್ತವಲ್ಲಾ? ಗುಡ್ಡಗಳು ಅಡ್ಡಡ್ಡ ಮಲಗುತ್ತದಲ್ಲಾ?
ಅವುಗಳಲ್ಲಿ ವಾಸವಾಗಿರುವ ಗಿಳಿ, ಪಾರಿವಾಳ, ನವಿಲು, ಕಾಗೆ, ಗೂಬೆಯಂತಹ ಸಾವಿರಾರು ಹಕ್ಕಿಗಳು ಎಲ್ಲಿಗೆ ಹೋಗಬೇಕು?
ಮುಂಗುಸಿ, ಹಾವು, ಮೊಲಗಳಂತಹ ನೂರಾರು ಪ್ರಾಣಿಗಳು ತಮಗೆ ಪುನರ್ವಸತಿಯನ್ನು ಯಾರಲ್ಲಿ ಕೇಳಬೇಕು?
ಅವುಗಳಿಗೆ ಪರಿಹಾರ ನೀಡುವವರಾರು? ಅವುಗಳು ಪ್ರೆಸ್ಮೀಟ್ ಕರೆದು ಪರಿಹಾರ ಕೊಡಿ ಅಂತ ಕೇಳಲಿಕ್ಕಾಗುತ್ತದಾ? ಪ್ರತಿಭಟನೆ ನಡೆಸುವುದಾದರೂ ಹೇಗೆ? ಪಾಪ ಅವುಗಳಿಗೆ ಸಂಘಗಳೇನಾದರೂ ಇವೆಯಾ? ಪ್ರಾಣಿ ಪಕ್ಷಿಗಳ ಹೆಸರಿನಲ್ಲಿ ಇಲಾಖೆ, ಸಂಘಗಳು ಇರಬಹುದು, ಆದರೆ ಅವರಾರೂ ಪುನರ್ವಸತಿ ಕಲ್ಪಿಸಿ ಅಂತ ಕೇಳುವುದಿಲ್ಲವಲ್ಲ!
ಕೈಗಾರಿಕೆಗಳಿಗಾಗಿ ಕೊಲೆಯಾಗುವ ಮರಗಳಿಗೆ ಪರಿಹಾರ ಸಿಗದಿದ್ದರೂ, ಅವು ಪ್ರತಿಭಟಿಸಿ, ಮನವಿ ನೀಡಲು ಆಗದಿರುವುದರಿಂದ ತಮಗಾಗುವ ಅನ್ಯಾಯವನ್ನು ಯಾರಲ್ಲಿ ಕೇಳಬೇಕು?

ನಿನ್ನೆ ನನ್ನ ಕನಸಲ್ಲಿ ಒಂದಷ್ಟು ಮರಗಳು, ಪಕ್ಷಿಗಳು, ಪ್ರಾಣಿಗಳು ನನ್ನ ಮನೆಯ ಮುಂದೆ ಪ್ರತಿಭಟಿಸಿದಂತಾಯಿತು!
ಅವುಗಳ ಪ್ರಶ್ನೆಗಳಿಗೆ ನನ್ನಲ್ಲಿ ಉತ್ತರವಿರಲಿಲ್ಲ, ನಿಮ್ಮಲ್ಲಿ ಇವೆಯಾ?!Wednesday, August 20, 2008

ಸಿಗದೆ ಹೋದವಳು


ಪಕ್ಕನೆ ಸಿಕ್ಕವಳು ನಕ್ಕಳು; ಅದ್ಭುತವಾಗಿ!
'ನಕ್ಕು ಬಿಡಿ' ಜೋಕ್ಸ್ ಪುಸ್ತಕ ತರುತ್ತೀಯಾ...ಅಂತ ಗೆಳತಿ ಹೇಳಿದಳೆಂದು ಆ ನಗೆ ಹನಿಗಾಗಿ ಪುಸ್ತಕದ ಅಂಗಡಿಗಳನ್ನು ಹುಡುಕಿಕೊಂಡು ಹೊರಟವನಿಗೆ ರಸ್ತೆಯ ಆ ಬದಿಯಲ್ಲಿ ಹೋಗುತ್ತಿದ್ದವಳು ಕಣ್ಣಿಗೆ ಕಂಡಳು; ಅದೇ ಅದ್ಭುತ ನಗುವಿನವಳು! ನಾನು ನೋಡುತ್ತಿದ್ದಂತೇ ಅವಳೂ ನೋಡಿದಳು, ನಕ್ಕಳು.
ಅರೆ ಇವಳ್ಯಾರು? ಈ ಹಿಂದೆ ನೋಡಿದ ನೆನಪಾಗುತ್ತಿಲ್ಲ. ಆದರೂ ನಕ್ಕಳಲ್ಲ; ನನ್ನನ್ನು ನೋಡಿ ನಗಬೇಕಾದರೆ ಪರಿಚಯಸ್ಥಳೇ ಇರಬೇಕು.ಬಹುಶಃ ನನ್ನ ಪರಿಚಯ ಇರಬೇಕು. ಅಥವಾ ನಾನು ಸುರಸುಂದರಾಂಗನಲ್ಲವೇ?! ಹಾಗಾಗಿ ಲೈನ್ ಹೊಡೆದಿರಬೇಕು! ಅಥವಾ ಬೇರೆ ಯಾರಿಗೋ ನಕ್ಕಿರಬೇಕು. ನಾನು, ನನ್ನನ್ನು ನೋಡಿ ನಕ್ಕಿದ್ದೆಂದು ತಪ್ಪಾಗಿ ತಿಳಿದುಕೊಂಡಿರಬಹುದು. ಅವಳು ನನ್ನನ್ನು ನೋಡಿಯೇ ನಗಾಡಿದ್ದೆಂದು ಹೇಗೆ ಖಾತರಿಯಾಗುವುದು ಎಂದು ತೀರ್ಮಾನಿಸಲು ಹಿಂತಿರುಗಿ ನೋಡಿದರೆ ಆ ಬದಿಯಲ್ಲಿ ಮುಂದಕ್ಕೆ ಹೋಗಿರುವ ಅವಳೂ ಹಿಂತಿರುಗಿ ನೋಡುತ್ತಿದ್ದಾಳೆ ಮತ್ತು ನಗುತ್ತಿದ್ದಾಳೆ; ಮತ್ತಷ್ಟು ಅದ್ಭುತವಾಗಿ!ವಾಹ್, ಹೊಡಿ ಮಗ ಹೊಡಿ ಮಗಾ ಲೈನ್ ಹೊಡಿ ಮಗ, ಬಿಡಬೇಡ ಅವಳ್ನ ಅಂತ ಮನಸ್ಸಿನಲ್ಲೇ ಅಂದುಕೊಳ್ಳುವಷ್ಟರಲ್ಲಿ ನಾನು ಸಾಕಷ್ಟು ಮುಂದಕ್ಕೆ ನಡೆದು ಹೋಗಿಯಾಗಿತ್ತು. ಮತ್ತೆ ಹಿಂತಿರುಗಿ ನೋಡಿದರೆ ಅವಳು ಮಾಯ!
ಶ್ಶೆ,ನಕ್ಕು ಹುಚ್ಚು ಹಿಡಿಸಿದವಳು ಎಲ್ಲಿ ಮಾಯವಾದಳು ಎಂದು ತಲೆ ಎಬೌಟರ್ನ್ ಆಗಿ ವಾಪಾಸು ನಡೆಯತೊಡಗಿದೆ, ಆಕೆಯನ್ನು ಹುಡುಕುತ್ತ! ಊಹು ಅವಳು ಕಾಣಿಸುತ್ತಿಲ್ಲ. ಅಯ್ಯೋ ಇಲ್ಲಿ ಮೂರು ಕವಲುಗಳು; ಆ ದಾರಿಯಲ್ಲಿ ಹೋದಳೋ, ಈ ಮಾರ್ಗದಲ್ಲಿದ್ದಾಳೋ, ಆ ರಸ್ತೆಯಲ್ಲಿ ಹೋಗಿದ್ದಾಳೋ ತಲೆ ಕೆಡತೊಡಗಿತು.ನಗೆ ಹನಿ ಪುಸ್ತಕ ಹುಡುಕುವುದನ್ನು ಮರೆತು ನಗುವಿನ ಹುಡುಗಿಯನ್ನು ಹುಡುಕುವುದೇ ಕೆಲಸವಾಯಿತಲ್ಲ ಛೆ. ಸಾಮಾನ್ಯವಾಗಿ ಹುಡುಗಿಯರು ಯಾವ ಅಂಗಡಿಗೆ ಹೋಗುತ್ತಾರೆ? ಬಟ್ಟೆ ಅಂಗಡಿಗೆ. ಹಾಗಾದರೆ ಈ ಸಾಲಿನಲ್ಲಿ ಬಟ್ಟೆ ಅಂಗಡಿಗಳು ತುಂಬ ಇವೆಯಲ್ಲ, ಅಂತ ಆ ಕಡೆ ಈ ಕಡೆ ಇಣುಕುತ್ತ, ನೋಡುತ್ತ, ಹುಡುಕುತ್ತ ಹಾದಿ ಸಾಗಿದ್ದೇ ಗೊತ್ತಾಗಲಿಲ್ಲ. ಆ ಬಟ್ಟೆ ಅಂಗಡಿಗಳಲ್ಲಿ ಹುಡುಗಿಯರು ಇದ್ದರು, ಉದ್ದ ಜಡೆಯವರು, ಅರ್ಧ ಲಂಗದವರು, ಟೈಟು ಪ್ಯಾಂಟು ತೊಟ್ಟವರು, ಅಂಗಡಿಗಳಲ್ಲಿದ್ದ ಸೇಲ್ಸ್ ಗರ್ಲ್ಸ್.
ಆದರೆ ನನ್ನನ್ನು ನೋಡಿ ಅದ್ಭುತವಾಗಿ ನಕ್ಕ ಆ ಗುಲಾಬಿ ಬಣ್ಣದ ಚೂಡಿದಾರದ ಹುಡುಗಿ ಕಾಣಸಿಗಲಿಲ್ಲ. ಬಹುಶಃ ಫ್ಯಾನ್ಸಿ ಅಂಗಡಿಯಲ್ಲಿರಬಹುದು ಎಂದು ಮತ್ತೊಂದು ಹಾದಿಯಲ್ಲಿ ಹುಡುಕುತ್ತ ಆಸೆ ಕಣ್ಣುಗಳೊಂದಿಗೆ ಹೊರಟವನಿಗೆ ಮತ್ತೆ ನಿರಾಸೆ. ಹೋಗಲಿ, ಹಾಳಾಗಿ ಹೋಗಲಿ ಎಂದು ಹುಳಿ ದ್ರಾಕ್ಷಿಯ ನೆನಪು ಮಾಡಿಕೊಂಡಾಗ ನಗೆ ಹನಿ ಪುಸ್ತಕವೂ ನೆನಪಾಯಿತು. ನಗುವಿನ ಹುಡುಗಿಯ ಚಿತ್ರ ಮನಸ್ಸಿನಲ್ಲಿ ಬ್ಲರ್ರ್ ಆಗತೊಡಗಿತು. ಮತ್ತೆ ಪುಸ್ತಕದ ಅಂಗಡಿ ಹುಡುಕುತ್ತ ಹುಡುಕುತ್ತ ಕೊನೆಗೆ ಸಿಕ್ಕಿತು. ಒಳ ಕಾಲಿಡುತ್ತಿದ್ದಂತೆ ಹೊರ ಬಂದದ್ದು ಅದೇ ಅದ್ಬುತ ನಗುವಿನ ಹುಡುಗಿ!ಮತ್ತೆ ನನ್ನನ್ನು ನೋಡಿ ನಕ್ಕಳಲ್ಲ,ವಾರೆವಾಹ್! ಅನ್ನುವಷ್ಟರಲ್ಲಿ ಆಕೆ ಅಲ್ಲಿಂದ ಹೊರಹೋಗಿಯಾಗಿತ್ತು....?
ಏನು ಬೇಕು?
ಹುಡುಗಿ! ಅಂದವನು ನಾಲಗೆ ಕಚ್ಚಿಕೊಂಡೆ!...ಏನು?...ಏನು ಹೇಳಿದಿರಿ? ಯಾವ ಪುಸ್ತಕ? ಕೇಳಿದರು ಅಂಗಡಿ ಯಜಮಾನರು. ಅದೇ ನಗು.. ನಗೆ ಹನಿ, ಜೋಕ್ಸ್...ಪುಸ್ತಕ...
ಆಕೆ ಮತ್ತೆ ಮಾಯವಾದಳೆಂಬ ಹತಾಶೆ, ನಿಂತು ಮಾತಾಡಿಸಬಹುದಿತ್ತಲ್ವ ಎಂಬ ಧೈರ್ಯ, ಆಸೆ, ದುರಾಸೆ!
ಒಂದೇ ಒಂದು ಪುಸ್ತಕ, ಈ...ಈಗ... ಹೋದರಲ್ವ, ಮೇಡಂ, ಅವರು ಕೊಂಡೊಯ್ದರು. ಇದ್ದ ಸ್ಟಾಕ್ ಮುಗಿದಿದೆ. ನಾಡಿದ್ದು ಬನ್ನಿ...ಅನ್ನುತ್ತಲೇ ಇದ್ದ ಪುಸ್ತಕದಂಗಡಿಯವ.
ನನಗೆ ಅರ್ಥವಾಗುತ್ತಿರಲಿಲ್ಲ...

Saturday, August 16, 2008

ದೇವರ ಹೆಸರು ಯಾಕೆ ಸ್ವಾಮೀ...


ದುರ್ಗಾ ಬಾರ್ ಎಂಡ್ ರೆಸ್ಟೋರೆಂಟ್, ಶ್ರೀ ಗಣೇಶ ವೈನ್ ಶಾಪ್, ಲಕ್ಷ್ಮೀ ನಾನ್‌ವೆಜ್ ಹೊಟೇಲ್, ಈಶ್ವರ ಪಾನ್‌ಶಾಪಿಗೆ ದೇವರ ಹೆಸರನ್ನೆಲ್ಲ ಬಾರು, ವೈನು ಶಾಪು, ಮಾಂಸದ ಹೊಟೇಲುಗಳಿಗೆ ಇಡುವುದು ಸರಿಯಾ ಹೇಳಿ ಸ್ವಾಮಿ?
ಆ ಹೊಟೇಲು, ಬಾರುಗಳ ಮಾಲಕರು ವಾದಿಸಬಹುದು; ನಾವು ಭಕ್ತಿಯಿಂದ ನಮ್ಮ ವ್ಯವಹಾರಕ್ಕೆ ಇಟ್ಟರೆ ತಪ್ಪೇನು ಅಂತ.
ಅವರ ವಾದ ಸರಿ ಅಂತಿಟ್ಟುಕೊಳ್ಳೋಣ. ಆದರೆ ಕುಡಿದು ತೂರಾಡುವವರನ್ನು ಸೃಷ್ಟಿಸುವ, ಮನೆ ಮುರಿಯುವ ಹೆಂಡದಂಗಡಿಗೆ ಹೀಗೆ ದೇವರ ಹೆಸರಿಡುವುದು ಸರಿ ಕಾಣುತ್ತದಾ?
ಬಸ್ಸುಗಳ ಹೆಸರೂ ಹಾಗೆಯೇ; ಶ್ರೀ ಗಣೇಶ ಟ್ರಾವೆಲ್ಸ್, ದುರ್ಗಾಂಬಾ ಮೋಟರ್ಸ್, ಶ್ರೀ ಕಟೀಲ್, ಶ್ರೀ ದುರ್ಗಿ, ಶ್ರೀ ಮಂಜುನಾಥ...
ಬಸ್ಸು ಅಫಘಾತವಾಗಿ ನಾಲ್ಕು ಮಂದಿ ಸತ್ತರೆ; ದೇವರ ಹೆಸರಿನ ಬಸ್ಸನ್ನು ಕುರಿತು ಜನ ಮಾತಾಡುವುದು ಹೇಗೆ ಗೊತ್ತಾ? ಅವ ಗಣೇಶದವ ಯಾವಾಗಲೂ ಹಾಗೆಯೇ, ಕುಡಿದು ಬಿಡುವುದು. ಮೊನ್ನೆ ಕೂಡ ಒಬ್ಬರ ಕಾಲು ತೆಗೆದಿದ್ದ....
ಬೇಕಾ, ಡ್ರೈವರನ ತಪ್ಪಿಗೆ ದೇವರ ಹೆಸರಿಗೆ ಬೈಯ್ಗುಳ.

Friday, August 15, 2008

ಸಭ್ಯತೆ


ನಗುವುದರಲ್ಲಿ ತಪ್ಪೇನಿದೆ?ದಾರಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಯಾರಾದರೂ ಸಿಕ್ಕರೆ ಒಂದು ಮುಗುಳ್ನಗೆ ಚೆಲ್ಲಿದರೆ ನಮ್ಮ ಗಂಟೇನೂ ಹೋಗುವುದಿಲ್ಲವಲ್ಲ?ಎದುರಿಗೆ ಸಿಕ್ಕವರು ನಕ್ಕರೆ ನಾವೂ ಮುಗುಳ್ನಗುವುದು ಸಭ್ಯತೆಯ ಲಕ್ಷಣ, ಏನಂತೀರಿ
ನೋಡಿ ಇವ್ರೇ, ಕಾಲೇಜಿಗೆ ಹೋಗುವ ಆ ಹುಡುಗಿಗೆ ಅದೆಷ್ಟು ಕೊಬ್ಬು ಅಂತೀರಾ? ನಾನು ಆಕೆಯ ಹಿಂದೆ ಮುಂದೆ ಹತ್ತಾರು ಸಲ ಹೋಗಿ, ಅಷ್ಟೆಲ್ಲ ನಕ್ಕರೂ ಆಕೆ ಮುಖವೆತ್ತಿ ನಗುವುದೇ ಇಲ್ಲ. ಅಬ್ಬಾ ಆಕೆಯ ಅಹಂಕಾರವೇ! ನಕ್ಕರೆ ವಾಪಾಸು ನಗಬೇಕು. ಅದು ಸಭ್ಯತೆಯ ಲಕ್ಷಣ ಅಂತ ಗೊತ್ತಿಲ್ಲವಾ?!

Thursday, August 14, 2008

ಫ್ಯಾನಿನ ಗಾಳಿಗೆ ದೀಪ ಆರಿ ಹೋದಾಗ


ನೀವು ಸಭೆ ಸಮಾರಂಭಗಳಲ್ಲಿ ಗಮನಿಸಿರಬಹುದು; ಕಾರ್ಯಕ್ರಮದ ಉದ್ಘಾಟನೆಗಾಗಿ ದೀಪ ಹೊತ್ತಿಸುವುದನ್ನು. ಅದುವರೆಗೂ ಸುತ್ತುತ್ತಿದ್ದ ಫ್ಯಾನನ್ನು, ಕ್ಯಾಂಡಲನ್ನೋ ಆರತಿಯನ್ನೋ ಹಿಡಿದ ಅಭ್ಯಾಗತ ದೀಪದ ಹತ್ತಿರ ತರುವ ಹೊತ್ತಿಗೆ ಎಲ್ಲರ ಗಮನ ಮೇಲೆ ತಿರುಗುವ ಫ್ಯಾನಿನೆಡೆಗೆ. ಸ್ವಿಚ್ಛ್ ಆಫ್ ಮಾಡಿ ಫ್ಯಾನಿನ ರೆಕ್ಕೆಗಳನ್ನು ನಿಲ್ಲಿಸಿ ದೀಪ ಹಚ್ಚಲಾಗುತ್ತದೆ. ವಾಪಾಸು ಫ್ಯಾನು ತಿರುಗುತ್ತದೆ. ಉದ್ಘಾಟಕರ ಭಾಷಣ ಮುಗಿಯುವ ಹೊತ್ತಿಗೆ ದೀಪ ಆರಿ ಹೋಗಿರುತ್ತದೆ! ಅಥವಾ ಫೋಟೋಕ್ಕಾಗಿ ನಡುವೆ ನಿಲ್ಲಿಸಿಲಾದ ದೀಪ ಮುಲೆ ಸೇರಿರುತ್ತದೆ. ಆದರೂ ಉದ್ಘಾಟಕರು ಈ ದೀಪದಂತೆ ಪ್ರಜ್ವಲಿಸಲಿ, ಬೆಳಕು ನೀಡಲಿ ಎಂದೆಲ್ಲ ಭಾಷಣ ಮಾಡಿರುತ್ತಾರೆ.ದೀಪ ಹೊತ್ತಿಸಿ ಉದ್ಘಾಟಿಸುವುದು ಒಳ್ಳೆಯ ಸಂಪ್ರದಾಯ ಅಂತ ವಾದಿಸುವುದಾದರೆ ಸರಿ; ಆದರೆ ವೈದ್ಯಕೀಯ ತಪಾಸಣೆಗೆ, ಪರಿಸರ ಸಂಘ ಉದ್ಘಾಟನೆಗೆ, ಪುಸ್ತಕ ಬಿಡುಗಡೆಗೆ, ಕಬಡ್ಡಿ, ವಾಲಿಬಾಲ್ ಉದ್ಘಾಟನೆಗೆ, ಸಾಲ, ವಿದ್ಯಾರ್ಥಿ ವೇತನ ವಿತರಣೆಗೆ ದೀಪ ಪ್ರಜ್ವಲಿಸುವುದು ಯಾಕೆ?
ಪತ್ರಿಕಾ ಛಾಯಾಗ್ರಾಹಕರೂ ಕೂಡ ಯಾಕೋ ದೀಪ ಹೊತ್ತಿಸುವಾಗಲೇ ಫೋಟೋಕ್ಕಾಗಿ ಮುಗಿ ಬೀಳುತ್ತಾರೆ.
ಉದ್ಘಾಟಕರೆಂದ ಮೇಲೆ ಮುಗಿಯಿತು; ಉದ್ಘಾಟಕರೇ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಬೇಕು. ನೀವು ನೋಡಿ, ಆ ಉದ್ಘಾಟಕ ಒಂದೇ ದೀಪ ಬೆಳಗಿಸುತ್ತಾನೆ. ಉಳಿದ ಐದೋ ಆರೋ ದೀಪಗಳನ್ನು ವೇದಿಕೆಯಲ್ಲಿದ್ದವರೆಲ್ಲ ಒಬ್ಬೊಬ್ಬರಾಗಿ ಹೊತ್ತಿಸತೊಡಗುತ್ತಾರೆ, ತಾವು ಹಾಕಿರುವ ಚಪ್ಪಲು, ಶೂಗಳನ್ನು ತೆಗೆದು!
ಕೆಲವೊಮ್ಮೆ ದೀಪ ಹಚ್ಚುವವರೊಳಗೇ ಚರ್ಚೆ ನಡೆಯಲಿಕ್ಕುಂಟು; ನೀವು ಹಚ್ಚಿ, ನೀವು ಮೊದಲು ಬೆಳಗಿಸಿ ಅಂತ.
ಈ ಮಧ್ಯೆ ಫೋಟೋಕ್ಕಾಗಿ ಒದ್ದಾಡುವವರದ್ದು ಅಯ್ಯೋ ದೇವಾ ಪರಮಾತ್ಮಾ... ಹೇಳಿ ಪ್ರಯೋಜನವಿಲ್ಲ, ಅವರ ಅವಸ್ಥೆ, ನಾಟಕ..

Wednesday, August 13, 2008

ರಾಜೀನಾಮೆ


ಎಲ್ಲೋ ಒಂದು ಕಡೆ ರೈಲು ಅಪಘಾತವಾಗುತ್ತದೆ. ವಿರೋಧ ಪಕ್ಷದವರು ಬೊಬ್ಬಿಡುತ್ತಾರೆ, ರೈಲ್ವೆ ಸಚಿವ ರಾಜೀನಾಮೆ ಕೊಡಲಿ ಅಂತ.

ಮೊನ್ನೆ ಮಂಗಳೂರಿನಲ್ಲಿ ಪ್ರತಿಭಟನಾಕಾರರ ಮೇಲೆ ಲಾಠಿ ಬೀಸಲಾಯಿತು. ಮೇಯರ್ ರಾಜೀನಾಮೆ ಬಿಸಾಕಲಿ ಅಂತ ಕೆಲವರು ಹೇಳಿದರು.

ರೈತರು ಗೋಲೀಬಾರ್ನಲ್ಲಿ ಸತ್ತರು. ಮುಖ್ಯಮಂತ್ರಿ ರಾಜೀನಾಮೆ ಕೊಡಲಿ ಎಂದರು.

ರಘುಪತಿ ಭಟ್ಟರ ಹೆಂಡ್ತಿ ಆತ್ಮಹತ್ಯೆ ಮಾಡಿಕೊಂಡರೆ ಗ್ರಹ ಸಚಿವರು ಯಾಕೆ ರಾಜೀನಾಮೆ ಕೊಡಬೇಕು?

ಹೀಗೆಲ್ಲ ಪ್ರಚಾರಕ್ಕೆ ಹೇಳಿಕೆ ಕೊಡುವವರು

ಮಳೆ ಜೋರು ಬಂದು ನೆರೆ ನುಗ್ಗಿ, ಬೆಳೆ ಹಾನಿಯಾಗಿ, ಜನ ಸತ್ತರೆ ಅಥವಾ ಮಳೆ ಬರದೆ ಬರ ಬಂದರೆ ನೀರಾವರಿ ಸಚಿವರ ರಾಜೀನಾಮೆ ಕೇಳುತ್ತಾರಾ? ಹೆಂಗೆ?

ಪೋನಿಗೆ ಹೋಗಲಿಕ್ಕೆ ಕಾಲುಗಳಿವೆಯಾ...


ಕೆಲವರು ಫೋನ್ ಮಾಡ್ಲಾ? ಅಂತ ಕೇಳುತ್ತಾರೆ.
ಮಾಡಲಿಕ್ಕಾಗುತ್ತದಾ? ಅದನ್ನು ಮಾಡಿಯೇ ಇರುತ್ತಾರೆ. ಆದರೂ ಇನ್ನೊಬ್ಬನಿಗೆ ಫೋನಾಯಿಸಬೇಕಾದರೆ ಫೋನ್ ಮಾಡಬೇಕಾ ಅಂತಲೇ ಕೇಳುತ್ತಾರೆ.
ಹಾಗೆ ಫೋನ್ ಮಾಡುವಾಗ ಆ ಕಡೆ ರಿಂಗ್ ಆಗದಿದ್ದರೆ ಫೋನ್ ಹೋಗ್ತಾ ಇಲ್ಲ ಅನ್ನುತ್ತಾರೆ. ಹಾಗೆ ಹೋಗಲು ಅದಕ್ಕೆ ಕಾಲುಗಳಿವೆಯಾ?
ಕೆಲವರು ಫೋನ್ ತಾಗ್ತಾ ಇಲ್ಲ ಅನ್ನುತ್ತಾರೆ. ತಾಗಿಸುವುದು ಹೇಗೆ? ಒಂದಕ್ಕೊಂದು ಟಚ್ ಮಾಡಿ ಚಿಯರ್ಸ್ ಅಂದ ಹಾಗೆ ತಾಗಿಸುವುದಾ? ಗೊತ್ತಿಲ್ಲ!
ಪೋನ್ ಮಾಡಿದೆ, ಆದರೆ ಅವರು ಸಿಗಲಿಲ್ಲ ಅನ್ನುತ್ತಾರಲ್ಲ? ಅನ್ನುವ ವಾಕ್ಯವನ್ನು ಮತ್ತೊಮ್ಮೆ ಹೇಳಿ, ಪ್ರಯೋಗ ಸರಿ ಅನಿಸುತ್ತದಾ?
ಇನ್ನು ಕೆಲವರು ಮಾತಾಡಿ ಮುಗಿದಾದ ಬಳಿಕ ಪೋನ್ ಬಿಡ್ಲಾ ಕೇಳುತ್ತಾರೆ! ಬಿಟ್ಟರೆ ತುಂಡಾದೀತು, ಮೆಲ್ಲನೆ ಇಡಿ ಅನ್ನಬೇಕಾಗುತ್ತದೆ! ರಿಸೀವರ್ ಇಡುವುದಾದರೆ ಸರಿ, ಪೋನ್ ಟೇಬಲ್ನಲ್ಲೆಲ್ಲೋ ಇರುತ್ತದೆ ಅಲ್ವಾ?
ಮೊಬೈಲನ್ನು ಇಟ್ಟು ಹೋಗುವುದೆಲ್ಲಿಗೆ? ಎಂಬುದು ಮತ್ತೆ ಕೇಳಬೇಕಾದ ಪ್ರಶ್ನೆ?
ರಿಂಗ್ ಆದ ತಕ್ಷಣ ಹಲೋ ಹಲೋ...ಲೋ..ಲೋ ಅಂತ ಬಾಯಿಬಡ್ಕೋಳುವವರು ಕೆಲವರಾದರೆ, ಆರ್ಎಸ್ಎಸ್ನವರದ್ದು ಆರಂಭದಲ್ಲಿ ಹರಿಃ ಓಂ ಹರಿ ಓಂ... ಕೊನೆಗೆ ರಾಮ್ ರಾಮ್ ಅಥವಾ ಜೈಶ್ರೀರಾಂ...
ಮಾತು ಮುಗಿದ ಮೇಲೆ ಹೇಳುವುದುಂಟು; ಫೋನ್ ಕಟ್ ಮಾಡ್ಲಾ? ಕಟ್ ಮಾಡಿದ್ರೆ ನಾಳೆ ಮಾತಾಡುವುದು ಹೇಗೆ? ಅಥವಾ ಅಷ್ಟು ಒಳ್ಳೆಯ ಫೋನನ್ನು ಕಟ್(ತುಂಡು) ಮಾಡುವುದು ಯಾಕೆ ಅಲ್ವಾ?!
ಹೀಗೆ ಫೋನ್ ಕಥೆ ಇನ್ನೂ ಇದೆ. ಇನ್ನೊಮ್ಮೆ ನೋಡೋಣ.

ಇಲ್ಲಿ ಕೆಲವರು ಅಂತ ಬರೆದುದರಿಂದ ಹಾಗೆ ಮಾತಾಡುವವರು ಬೇಜಾರು ಮಾಡ್ಕೋಬೇಡಿ, ಹ್ಹಿ, ಹ್ಹಿ ನಾನೂ ಹೀಗೇ ಮಾತಾಡೋಡು; ಫೋನ್ ಇಡ್ಲಾ, ಬಿಡ್ಲಾ, ಹೋಗಲಿಲ್ಲ, ತಾಗಲಿಲ್ಲ....ಹ್ಹಿ ಹ್ಹಿ!

Tuesday, August 12, 2008

ಹಾಯ್
ನಿನಾಯಕ ಭಟ್ಟ, ಮಂಜು, ವೇಣು, ರಾಜೇಶ್, ಶ್ರೀನಿಧಿ... ಹೀಗೆ ನನ್ನೆಲ್ಲ ಗೆಳೆಯರು ಬಂದಂತೆ ಬ್ಲಾಗ್ ಜಗತ್ತಿಗೆ ನಾನೂ ಬಂದಿದ್ದೇನೆ. ಹೆಂಗೆ?