Sunday, January 25, 2009

ವಾದ್ಯ


ವಾದ್ಯ ಊದುತ್ತ ತನ್ಮಯನಾದ ಕಲಾವಿದನೊಬ್ಬ ನನ್ನ ಕೆಮರಾ ಕಣ್ಣಿಗೆ ಸಿಕ್ಕಿದ್ದು ಹೀಗೆ.

ವಾದ್ಯದೊಳಗೆ ಗಾಳಿ ಹಾಕಿ ಊದುವುದೆಂದರೆ ಅದರಲ್ಲೂ ಸಂಗೀತ ಸ್ವರ ಹುಟ್ಟಿಸುವುದೆಂದರೆ ಅಷ್ಟು ಸುಲಭವಲ್ಲ. ಅಭ್ಯಾಸವಿರದ ಹೊರತು ಊದುತ್ತ ಕೂತರೆ ತಲೆನೋವು ಕೂಡ ಬರುತ್ತದೆ.

ಊದುವ ಫೋರ್ಸಿಗೆ ಕೆನ್ನೆ ಊದಿಕೊಂಡದ್ದು ನೋಡಿ ನಗು ಬಾರದಿರುತ್ತದೆಯೇ?

Monday, January 19, 2009

ಬಂಧನ!











ಮೊನ್ನೆ ಜನವರಿ 18ರ ಭಾನುವಾರ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಏರ್ಪಡಿಸಿದ ಅಧ್ಯಯನ ಪ್ರವಾಸದ ಸಂದರ್ಭ ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದ ನಿಟ್ಟಡೆ ಗ್ರಾಮದ ಫಡಿಂಜೆ ವಾಳ್ಯಕ್ಕೆ ಒಂದು ಸುತ್ತು ಹಾಕಿದಾಗ ನನಗೆ ಸಿಕ್ಕ ಕೆಲ ಚಿತ್ರಗಳಲ್ಲಿ ಇವು.




ಬಂಧನದ ಕಥೆ ಹೇಳುತ್ತಿವೆಯಾ ಇವು? ನನಗೆ ಗೊತ್ತಿಲ್ಲ! ಫೊಟೋ ತೆಗೆಯುವಾಗ ಆ ನೋಟ ಇರಲಿಲ್ಲ. ತೆಗೆದ ಫೊಟೋಗಳನ್ನು ಕಂಪ್ಯೂಟರ್ಗೆ ಇಳಿಸಿ, ಹೀಗೇ ಸುಮ್ಮನೆ ನೋಡುತ್ತಿರುವಾಗ ಬಂಧನ ಕಂಡಿತು. ನೀವೂ ನೋಡಿ ಅಂತ.....

Monday, January 12, 2009

ಇವರು ಚಾ ಕುಡಿಯುತ್ತಿದ್ದರು. ಅವನು ಬಸ್ಸು ಕೊಂಡೊಯ್ದ!




ಕಟೀಲು ಬಸ್ಸು ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್ಸೊಂದನ್ನು ಅರೆಹುಚ್ಚ ಯುವಕನೊಬ್ಬ ಏಕಾಏಕಿ ಕೊಂಡೊಯ್ದು, ಬೈಕೊಂದಕ್ಕೆ ಡಿಕ್ಕಿ ಹೊಡೆದು, ಅದರಲ್ಲಿದ್ದ ದಂಪತಿಗಳನ್ನು ಗಾಯಗೊಳಿಸಿ, ಕೊನೆಗೆ ಬಸ್ಸನ್ನು ಕಣಿವೆಗೆ ಹಾಕಿ ಪರಾರಿಯಾಗಿ ಕೊನೆಗೆ ಸಾರ್ವಜನಿಕರ ಕೈಗೆ ಸಿಕ್ಕ ಘಟನೆ ಸೋಮವಾರ ನಡೆದಿದೆ.ಸೋಮವಾರ ಬೆಳಿಗ್ಗೆ ಎಂದಿನಂತೆ ದುರ್ಗಾಪರಮೇಶ್ವರೀ ಬಸ್ಸನ್ನು ಕಟೀಲಿನ ಬಸ್‌ನಿಲ್ದಾಣದಲ್ಲಿ ನಿಲ್ಲಿಸಿ, ಡ್ರೈವರ್, ಕಂಡಕ್ಟರ್ ಚಾ ಕುಡಿಯಲು ಹೊಟೇಲಿಗೆ ಹೋಗಿದ್ದರು. ಈ ಸಂದರ್ಭ ಮಂಜರಪಲ್ಕೆಯ ಒಂಜರಕಟ್ಟೆಯ ಪ್ರಶಾಂತ(೧೮ವ.) ಎಂಬಾತ ಏಕಾಏಕಿ ಬಸ್ಸನ್ನು ಚಲಾಯಿಸಿಕೊಂಡು ಕಿನ್ನಿಗೋಳಿ ಕಡೆ ಹೊರಟ. ಬಸ್ಸನ್ನು ಅಡ್ಡಾದಿಡ್ಡಿ ಕೊಂಡೊಯ್ಯುವುದನ್ನು ನೋಡಿ ಬಸ್ಸಿನಲ್ಲಿದ್ದ ಇಬ್ಬರು ಬೊಬ್ಬೆ ಹಾಕಿದಾಗ ಆತ ನಿಲ್ಲಿಸಿದ. ಕೂಡಲೇ ಅವರಿಬ್ಬರು ಇಳಿದರು. ಅಲ್ಲಿಂದ ಮತ್ತೆ ವೇಗವಾಗಿ ಬಸ್ಸನ್ನು ಚಲಾಯಿಸಿಕೊಂಡು ಹೊರಟ ಪ್ರಶಾಂತ್, ಕಟೀಲು ಚರ್ಚ್ ಬಳಿಯ ತಿರುವಿನಲ್ಲಿ ಬೈಕೊಂದಕ್ಕೆ ಡಿಕ್ಕಿ ಹೊಡೆದು ಅದರಲ್ಲಿದ್ದ ದಂಪತಿಗಳಿಬ್ಬರ ಕಾಲುಗಳಿಗೆ ಗಂಭೀರ ಗಾಯವಾಗುವಂತೆ ಮಾಡಿದ.ಫಲಿಮಾರುವಿನ ಮನೆಯಿಂದ ಬೈಕಂಪಾಡಿಯಲ್ಲಿ ಉದ್ಯೋಗಿಯಾಗಿರುವ ಸಚಿನ್ ಕೋಟ್ಯಾನ್ ಹಾಗೂ ಅವರ ಪತ್ನಿ ಮಂಗಳೂರಿನಲ್ಲಿ ಉದ್ಯೋಗಿಯಾಗಿರುವ ಅಶ್ವಿತಾ ಜೊತೆಯಾಗಿ ಮಂಗಳೂರಿನ ಕಡೆ ಬೈಕಿನಲ್ಲಿ ಹೊರಟಿದ್ದರು. ಕಟೀಲು ಚರ್ಚ್ ಬಳಿ ಪ್ರಶಾಂತ ಚಲಾಯಿಸುತ್ತಿದ್ದ ಬಸ್ಸು, ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ದಂಪತಿಗಳಿಬ್ಬರ ಕಾಲುಗಳಿಗೆ ಗಂಭೀರ ಗಾಯಗಳಾದವು. ಅವರನ್ನು ಸ್ಥಳೀಯರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು.ಬೈಕಿಗೆ ಡಿಕ್ಕಿ ಹೊಡೆದ ಬಸ್ಸು ಮುಂದಕ್ಕೆ ಚಲಿಸಿ, ಮಾರಡ್ಕ ಮಹಮ್ಮಾಯೀ ದೇವಸ್ಥಾನದ ಬಳಿ ಕಣಿವೆಗೆ ಪಲ್ಟಿ ಹೊಡೆದು ಬಿತ್ತು. ಸ್ಥಳೀಯರು ಬಸ್ಸಿನ ಬಳಿ ಬರುತ್ತಿದ್ದಂತೆ ಬಿದ್ದ ಬಸ್ಸಿನ ಒಳಗಿನಿಂದ ಹೊರಬಂದ ಪ್ರಶಾಂತ್ ಒಳಗಡೆ ಮಕ್ಕಳಿದ್ದಾರೆ ಎಂದು ಸುಳ್ಳು ಹೇಳಿದ. ಸ್ಥಳೀಯರು ಬಸ್ಸಿನೊಳಗಡೆ ಪ್ರಯಾಣಿಕರಿದ್ದರೆಂದು ಒಳಗಡೆ ಹುಡುಕುವ ಹೊತ್ತಿಗೆ ಓಡಿ ತಪ್ಪಿಸಿಕೊಂಡ ಪ್ರಶಾಂತ್ ಬೆಳ್ಮಣ್ ಕಡೆ ಹೋದ.ಬಸ್ಸು ಪಲ್ಟಿ ಆದ ಸ್ಥಳದಲ್ಲಿ ದೊರೆತ ಮೊಬೈಲು ಫೋನಿನ ಆಧಾರದಲ್ಲಿ ಪ್ರಶಾಂತನನ್ನು ಪೋಲೀಸರು ಗುರುತಿಸಿದರು. ಅಷ್ಟು ಹೊತ್ತಿಗೆ ಬೆಳ್ಮಣ್ ಬಳಿ ಇಂಡಿಕಾ ಕಾರೊಂದಕ್ಕೆ ಕೀ ಹಾಕಿ ಸ್ಟಾರ್ಟ್ ಮಾಡಲು ಪ್ರಯತ್ನಿಸುತ್ತಿದ್ದ ಪ್ರಶಾಂತನನ್ನು ಹಿಡಿದ ಬಸ್ಸು ಸಿಬಂದಿಗಳು ಬಜಪೆ ಪೋಲಿಸು ಠಾಣೆಗೆ ತಂದೊಪ್ಪಿಸಿದರು. ಆತನ ಕೈಯಲ್ಲಿ ಒಂದಷ್ಟು ಕೀಗೊಂಚಲುಗಳಿದ್ದವು!ಮಾನಸಿಕವಾಗಿ ಸ್ವಲ್ಪ ಅಸ್ವಸ್ಥನಾಗಿರುವ ಪ್ರಶಾಂತ್ ಈ ತನಕ ಮನೆಯಲ್ಲಿ ಗಲಾಟೆ ಮಾಡುತ್ತಿದ್ದು, ಸೋಮವಾರ ಸಾರ್ವಜನಿಕವಾಗಿ ಹಾವಳಿಯಿಟ್ಟಿದ್ದಾನೆ. ಬಜಪೆ ಪೋಲೀಸರು ಕೇಸು ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.

Saturday, January 10, 2009

ಬೋರ್ಡು ಸೌಹಾರ್ದ


ಕಿನ್ನಿಗೋಳಿ ಹಿಂದೂ ಮುಸ್ಲಿಂ ಕ್ರೈಸ್ತ ಬಂಧುಗಳ ಸೌಹಾರ್ದದ ಊರು.

ಅದಕ್ಕೊಂದು ಉದಾಹರಣೆ ಈ ಫೊಟೋ.

ಕಿನ್ನಿಗೋಳಿ ಮಾರ್ಕೆಟ್ ಹತ್ತಿರ ಈ ರಸ್ತೆ ಫಲಕ ಕಾಣಬಹುದು.

ರಾಮ ರೆಸ್ಟೋರೆಂಟ್ ಹೊಟೇಲ್ ಬೋರ್ಡು ಪಕ್ಕದಲ್ಲೇ ಮದರ್ ತೆರೆಸಾ, ಜುಮ್ಮಾ ಮಸೀದಿ ಬೋರ್ಡು!

ಜೈ ಹಿಂದ್!

Saturday, January 3, 2009

ಸ್ವಾಮಿಯೇ ಶರಣಂ ಅಯ್ಯಪ್ಪ

ಶಬರಿಮಲೆಗೆ ಹೋಗುವ ಅಯ್ಯಪ್ಪ ಭಕ್ತನಿಂದ ಕೇರಳ ಸರಕಾರ ಒಂದು ತಲೆಗೆ ನೂರಿಪ್ಪತ್ತೈದು ರೂಪಾಯಿ ವಸೂಲು(ದರೋಡೆ) ಮಾಡುತ್ತದೆ ಅಂತ ಪ್ರತಿಭಟನೆ ನಡೆಯಿತು ಎಂಬ ಸುದ್ದಿಯನ್ನು ಪತ್ರಿಕೆಗಳಲ್ಲಿ ಓದಿದೆ. ನೀವೂ ಓದಿರಬಹುದು.
ಪ್ರತಿಯೊಂದಕ್ಕೂ ಸ್ವಾಮಿ ಶರಣಂ ಹೇಳುತ್ತ, ಗೋಪಾಲ ಸ್ವಾಮಿ, ಮಾಧವ ಸ್ವಾಮಿ, ಸತೀಶ್ ಸ್ವಾಮಿ ಎಂದೆಲ್ಲ ವ್ಯಕ್ತಿಗಳನ್ನು ಸ್ವಾಮಿ ಸ್ವಾಮಿ ಅಂತಲೇ ಕರೆಯುವ ಅಯ್ಯಪ್ಪ ಭಕ್ತರು ಕೊನೆಗೆ ಅಬ್ದುಲ್ ಸ್ವಾಮಿ, ಮಯ್ಯದ್ದಿ ಸ್ವಾಮಿ, ಆಲ್ವಿನ್ ಸ್ವಾಮಿ, ಡಿಸೋಜ ಸ್ವಾಮಿ ಎಂದು ಕ್ರಿಶ್ಚಿಯನ್, ಮುಸ್ಲಿಮರನ್ನೂ ಸ್ವಾಮಿ ಸ್ವಾಮಿ ಎಂದು ಕರೆಯುವಾಗ ಒಂಥರಾ ವಿಚಿತ್ರ ಅನ್ನಿಸುತ್ತದೆ. ನಾನು ಹೀಗೆ ತಮಾಷೆ ಮಾಡಿದೆ ಅಂತ ಅಯ್ಯಪ್ಪ ಭಕ್ತರಿಗೆ ಕೋಪ ಬಂದ್ರೆ ಸ್ವಾಮಿ ಶರಣಂ!
ಅಯ್ಯಪ್ಪ ಭಕ್ತರು ವ್ರತದಲ್ಲಿರುವಾಗ ಬಾಳೆ ಎಲೆಯಲ್ಲೇ ಊಟ, ತಿಂಡಿ ತಿನ್ನುತ್ತಾರೆ. ಚಪ್ಪಲು ಹಾಕುವುದಿಲ್ಲ, ಕಪ್ಪು, ಕೇಸರಿ ಮುಂಡು ಅಥವಾ ಕೊನೆಪಕ್ಷ ಬೈರಾಸು ಕಟ್ಟಿಕೊಳ್ಳುತ್ತಾರೆ, ಚಂದದ ಹುಡುಗಿಯರನ್ನು ನೋಡುವಂತಿಲ್ಲ. ನೋಡಿದರೆ ಸ್ವಾಮಿ ಶರಣಂ!
ಬ್ಯಾವರ್ಸಿ, ಗೀವರ್ಸಿ, ಹಲ್ಕಟ್ ಅಂತೆಲ್ಲ ಬೈಯುವಂತಿಲ್ಲ. ಬೈಯ್ದರೆ ಸ್ವಾಮಿ ಶರಣಂ ಅಂದ್ರೆ ಆಯಿತು!
ಶರಾಬು, ವಿಸ್ಕಿ ಇತ್ಯಾದಿ ಅಮಲು ಕುಡಿಯುವಂತಿಲ್ಲ. ಗುಟುಕಾ ನಿಷೇಧ. ಬೀಡಿ ಸಿಗರೇಟು ಬಿಡಬೇಕು. ಮಾಂಸ ತಿಂದರೆ ಪಾಪ! ಕೊನೇಗೆ ತಡೆಯಲಿಕ್ಕಾಗದೆ ಗುಟಕಾ ತಿಂದರೆ ಸ್ವಾಮಿ ಶರಣಂ!
ಹೀಗೆ ಕೆಟ್ಟ ಹಾದಿಯಿಂದ ಸರಿದಾರಿಗೆ ಬರುವ ಪ್ರಯತ್ನ ಮಾಡುವ ಅಯ್ಯಪ್ಪ ವ್ರತಧಾರಿ ಭಕ್ತರನ್ನು ಸುಲಿಯುವ ಕಮ್ಯುನಿಷ್ಟ್ ಸರಕಾರಕ್ಕೆ ಧಿಕ್ಕಾರ ಹೇಳದಿದ್ದರೆ ಹೇಗೆ?
ಮಕ್ಕಾ ಯಾತ್ರೆಗೆ ಹೋಗುವ ಭಕ್ತರಿಗೆ ಖರ್ಚಿಗೆ ಕೊಡುವ ಸರಕಾರಗಳಿಗೆ ಕಾಶಿ, ಮಥುರಾ, ಅಯೋಧ್ಯೆ, ಶಬರಿಮಲೆಗಳಿಗೆ ಹೋಗುವ ಭಕ್ತರಿಗೆ ಕೊಡಲು ದುಡ್ಡಿಲ್ಲ. ಬದಲಾಗಿ ಅಯ್ಯಪ್ಪ ಭಕ್ತರಿಂದಲೇ ಹೀಗೆ ಲೂಟಲು ಕೂರುತ್ತವೆ. ಈ ಹಿಂದೂ ದೇವರುಗಳೂ ಸರಿಯಿಲ್ಲ ಮಾರಾಯ್ರೇ. ಇಲ್ಲದಿದ್ದರೆ ಭಕ್ತರಿಂದ ತನ್ನ ಕಾಣಿಕೆ ದೋಚುವ ರಕ್ಕಸರನ್ನು ಕಷ್ಟಕ್ಕೆ ನೂಕಿ, ನಾಶ ಮಾಡಲು ಆಗುದಿಲ್ವಾ?!
ಇನ್ನೂ ಬರೆಯಲಿಕ್ಕಿದೆ. ಹೆಚ್ಚು ಊಊದ್ದದ ಬರೆಹಗಳನ್ನು ಓದುವವರು ಕಡಿಮೆ(ನನ್ನಂತೆ) ಆದುದರಿಂದ ಇಷ್ಟೇ ಸಾಕು.
ಸ್ವಾಮಿಯೇ ಶರಣಂ.