Saturday, April 4, 2009

ನವರಸಗಳು
ನವರಸಗಳ ಚಿತ್ರ
ನಿಮಗಿಷ್ಟವಾದೀತೆಂದು...

Wednesday, April 1, 2009

ಜಾತ್ರೆ

ಆಚಾರ್ಯ ತಪಸಾಮ್ನಾಯ ಜಪೇನ
ನಿಯಮೇನ ಚ ಉತ್ಸವೇನಾನ್ನ ದಾನೇನ ಕ್ಷೇತ್ರ ವೃದ್ಧಿಸ್ತು ಪಂಚಧಾ
ದೇವಳದಲ್ಲಿ ಪ್ರತಿಷ್ಟೆ ಮಾಡಿದ ತಂತ್ರಿ, ಅರ್ಚಕರ ತಪೋಬಲದಿಂದ ವೇದಪಾರಾಯಣದಿಂದ, ನಿಯಮ ನಿಬಂಧನೆಗಳಿಂದ(ಸಂಪ್ರದಾಯ ಪಾಲನೆಯಿಂದ) ಉತ್ಸವ ಅನ್ನದಾನದಿಂದ ಈ ಐದು ಪ್ರಕಾರಗಳಿಂದ ಕ್ಷೇತ್ರ ವೃದ್ಧಿಯಾಗುತ್ತದೆ.ಆದ್ದರಿಂದ ಕ್ಷೇತ್ರದ ಅಭಿವೃದ್ಧಿಗೆ ಉತ್ಸವವೆನ್ನುವುದು ಅನಿವಾರ್ಯ. ಉತ್ಸವ ಅಥವಾ ಕನ್ನಡದ ಜಾತ್ರೆ ಯಾವ ರೀತಿಯಲ್ಲೂ ಮಾಡಬಹುದು.ಕೆಲವೆಡೆ ವಾರ್ಷಿಕ ದಿನವಾಗಿ, ಇನ್ನು ಕೆಲವೆಡೆ ಧ್ವಜಾರೋಹಣಗೈದು ಮೂರು, ಐದು, ಹತ್ತು ದಿನಗಳ ಕಾಲ, ಇನ್ನು ಕೆಲವೆಡೆ ಭಜನೆಗಳ ಮೂಲಕ ಉತ್ಸವ ನಡೆಸುತ್ತಾರೆ.
ಪ್ರತಿಷ್ಟಾ ವರ್ಧಂತಿ ರೂಪ ದಲ್ಲೂ ಉತ್ಸವ ಆಚರಣೆಯಾಗುತ್ತದೆ.ಉತ್ ಸವ ಎಂದರೆ ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯುವುದು ಎಂದರ್ಥ. ಧ್ವಜವೆಂದರೆ ಚಿಹ್ನೆ. ಆಯಾ ದೇವರ ವಾಹನದ ಚಿತ್ರವಿರುವ ಮೇಲಕ್ಕೇರಿಸಿ, ಧ್ವಜಾರೋಹಣದ ಮೂಲಕ ಇಡೀ ಜಗತ್ತಿಗೆ ಉತ್ಸವವನ್ನು ಸಾರುವ ಸೂಚನೆ. ಕೆಳಗಿನ ಲೋಕಗಳಾದ ಅತಲ, ವಿತಲ. ಸುತಲ, ನಿತಲ, ತಲಾತಲ, ರಸಾತಲ, ಪಾತಾಲ ಹಾಗೂ ಮೇಲಿನ ಭೂಃ, ಭುವ, ಸ್ವ, ಮಹಾ, ಜನಃ, ಸತ್ಯ ಲೋಕಗಳು ಅಂದರೆ ಹದಿನಾಲ್ಕು ಲೋಕಗಳ ದೇವತೆಗಳು ರಥಾರೋಹಣದ ಕಾಲದಲ್ಲಿ ದೇವ ರನ್ನು ನೋಡುತ್ತಾರೆ. ಅಷ್ಟೆಲ್ಲ ದೇವತೆಗಳ ಶಕ್ತಿಯಿರುವ ರಥವನ್ನು ಎಳೆಯುವುದು ಪುಣ್ಯದ ಕೆಲಸ. ರಥಾರೋಹಣ ನೋಡಿದರೆ ಪುನರ್ ಜನ್ಮವಿಲ್ಲ ಎಂಬ ನಂಬಿಕೆ, ಕಲ್ಪನೆಯಿದೆ.ಆ ಕಾರಣಕ್ಕಾಗಿ ಜಾತ್ರೆ ಸಂದರ್ಭ ಜನ ಸೇರುತ್ತಾರೆ. ಪರಿಣಾಮ ಕ್ಷೇತ್ರ ಅಭಿವೃದ್ಧಿಯಾಗುತ್ತದೆ.ನಮ್ಮ ಒಂದು ವರ್ಷ ದೇವರಿಗೆ ಒಂದು ದಿನ. ಪ್ರತಿ ವರ್ಷ ನಡೆಯುವ ಜಾತ್ರೆ ಅಂದರೆ ದೇವರಿಗೆ ಪ್ರತಿ ದಿನವೂ ಉತ್ಸವವೇ.ರಥವನ್ನು ಕಟ್ಟುವ ಕಾಯಕವೂ ಆ ಊರಿನ ಕೆಲ ಮನೆಯವರ ಪಾಲಿಗೆ ಸೇವೆ, ಕರ್ತವ್ಯ.ಪತಾಕೆ, ಸಿಂಹ, ಆನೆ, ಗರುಡ ಮುಂತಾದ ಕೆತ್ತನೆಗಳನ್ನು ಕಟ್ಟಿ ಸಿಂಗರಿಸುವ ಚೆಂದವೇ ಬೇರೆ.ರಥಗಳಲ್ಲೂ ಚಂದ್ರ ಮಂಡಲ, ಚಿಕ್ಕ ರಥ, ಬ್ರಹ್ಮ ರಥ, ಬೆಳ್ಳಿಯ ರಥ, ಚಿನ್ನದ ರಥ ಹೀಗೆ ವಿವಿಧ ವಿಧಗಳು. ರಥದಲ್ಲಿ ದೇವರನ್ನು ಗೋವಿಂದಾ ಅನ್ನಿ ಗೋವಿಂದ ಎಂದು ಕೂಗುತ್ತ ಎಳೆದು ಪುನೀತರಾಗಲು ನೂರಾರು ಮಂದಿ ಸೇರುತ್ತಾರೆ. ಹಾಗೆ ರಥ ಎಳೆಯುವುದನ್ನು ಕೈಮುಗಿದು ನೋಡಲು ಸಾವಿರಾರು ಮಂದಿ ಸೇರುತ್ತಾರೆ. ಪ್ರಸಿದ್ಧ ದೇಗುಲಗಳಲ್ಲಿ ಭಕ್ತರ ಸಂಖ್ಯೆ ಲಕ್ಷದ ಲೆಕ್ಕದಲ್ಲಿರುತ್ತದೆ. ದೇವರನ್ನು ಪಲ್ಲಕಿಯಲ್ಲಿ ಕುಳ್ಳಿರಿಸಿ ಸಂಭ್ರಮಿ ಸುವ ಜೊತೆಗೆ, ಆಯಾ ದೇಗುಲದ ಪರಿಸರದ ಊರುಗಳಿಗೂ ದೇವರನ್ನು ಸವಾರಿ ತರಲಾಗುತ್ತದೆ. ಇವತ್ತು ನಮ್ಮ ಊರಿಗೆ ದೇವರು ಬರುತ್ತಾರೆ ಅಂತ ಆಯಾ ಹಾದಿಗಳ ಮಂದಿ ಕಟ್ಟೆಗಳನ್ನು ನಿರ್ಮಿಸಿ, ಸಿಂಗರಿಸಿ ಪೂಜೆಗೆ ಅನುವು ಮಾಡಿಕೊಂಡಿರುತ್ತಾರೆ.ದೇಗುಲದ ಪಕ್ಕದಲ್ಲಿ ಒಬ್ಬನಿಗಂತೂ ಗರ್ನಲು ಬಿಡುವುದೇ ಕೆಲಸ. ವಾದ್ಯ, ಚೆಂಡೆ, ಡೋಲು ಬಡಿಯುವ ಕಾಯಕದ ತುಂಬ ಜನ ಸೇರುವುದೇ ಜಾತ್ರೆಯಲ್ಲಿ. ಜಾತ್ರೆ ಆ ಊರಿಗೆ ಹಬ್ಬದಂತೆ. ಪ್ರತಿ ಮನೆಗೂ ಸಂಭ್ರಮ. ನೆಂಟರು, ಅತಿಥಿಗಳು ಬರುತ್ತಾರೆ. ಮನೆ ಮಂದಿ ದೂರದೂರುಗಳಿಂದ ಬರುತ್ತಾರೆ. ಬಂಧುಗಳೆಲ್ಲ ಒಂದಾಗಲು ಮದುವೆಯಂತಹ ಶುಭ ಸಮಾರಂಭ ಬಿಟ್ಟರೆ ಉತ್ಸವದಂತಹ ಧಾರ್ಮಿಕ ನಂಬಿಕೆಯೇ ಒಂದು ನೆಪ. ಜಾತ್ರೆಗೆ ಬಟ್ಟೆ ಖರೀದಿ ಸುವುದು, ಜಾತ್ರೆಯ ಸಂತೆಯಲ್ಲಿ ವಸ್ತುಗಳನ್ನು ಕೊಳ್ಳುವುದು, ಊರವರೆಲ್ಲ ಸಿಗುವುದು ಇಂತಹ ಅನನ್ಯ ಅನುಭವಗಳು ಅನೇಕ. .ಅಂದಹಾಗೆ ಜಾನುವಾರು ಜಾತ್ರೆ, ಕೋಣಗಳ ಜಾತ್ರೆ ಅಂದರೆ ಅದು ಬೇರೆಯದೇ ಸ್ವರೂಪ!