ನಾವು ಒಂದಿಷ್ಟು ಗೆಳೆಯರು ಹೆಜಮಾಡಿಯಿಂದ ಕಾಪು ತನಕ ಹದಿನೈದು ಕಿ.ಮೀ.ಗಳಷ್ಟು ದೂರ ಕಡಲ ತೀರದಲ್ಲೇ ನಡೆದುಕೊಂಡು ಹೋದೆವು. ಅಮೇರಿಕಾದಿಂದ ಗೆಳೆಯರಾದ ಗಿಲ್ಬರ್ಟ್ ಡಿಸೋಜ ಪ್ರೀತಿಯಿಂದ ಕಳುಹಿಸಿದ ಕೆಮರಾದಿಂದ ಕ್ಲಿಕ್ಕಿಸಿದ ಬೀಚ್ ನಡಿಗೆಯ ಒಂದಿಷ್ಟು ಚಿತ್ರಗಳು ನಿಮಗಾಗಿ.
ನಮ್ಮ ಆರಂಭವಾದದ್ದು ಹೀಗೆ.
ಬೀಚ್ ಪಕ್ಕದಲ್ಲೊಂದು ಹೊಳೆ. ಕಾಮಿನಿ ಅಂತ. ಕಡಲ ಸೇರುವ ತವಕದಲ್ಲಿತ್ತು. ಅಲ್ಲೇ ದೋಣಿಯೊಂದಕ್ಕೆ ರಜೆ ಇತ್ತಾದರಿಂದ ನನ್ನ ಕೆಮರಾ ಕಣ್ಣಿಗೆ ಸಿಕ್ಕಿ ಬಿತ್ತು.
ಅದೇ ಹೊಳೆಯಲ್ಲಿ ಒಬ್ಬರು ಬಲೆ ಬೀಸಿ ಮೀನು ಹಿಡಿಯುತ್ತಿದ್ದರು.
ನೋಡಿ, ಆ ಕಡೆಯ ಕಡಲ ತೆರೆ ಈ ಕಡೆಯ ಹೊಳೆಯ ನೀರು ಒಂದಾಗುತ್ತಿದೆ. ಮಳೆ ಜೋರು ಬಂದರೆ ಬೀಚ್ ನಡಿಗೆ ಬಂದ್!
ಮಳೆ ಇಲ್ಲದಿದ್ದರೂ ಕಡಲ ಅಬ್ಬರಕ್ಕೇನೂ ಅಡ್ಡಿಯಿಲ್ಲ. ಒಂದರ ಹಿಂದೊಂದು ಎಂದು ತೆರೆಗಳು ಬರುತ್ತಲೇ ಇರುತ್ತವೆ. ಅವು ಸೋಲುವುದಿಲ್ಲ. ಮತ್ತೆ ಎದ್ದು ಬಂದು ದಡಕ್ಕೆ ಅಪ್ಪಳಿಸುತ್ತವೆ.
ಸಮುದ್ರ ಕಿನಾರೆಯಲ್ಲಿ ನಮ್ಮದು ಸಾವಿರ ಸಾವಿರ ಹೆಜ್ಜೆಗಳ ಪಯಣ! ನೋಡಿದಷ್ಟೂ ಮುಗಿದು ಹೋಗದ ಕಡಲರಾಶಿಯ ಪಕ್ಕದಲ್ಲಿ ನಾವೆಷ್ಟೆಂದರೂ ಅಷ್ಟೆ.
ಮನೆಯಲ್ಲಿ ಭೂತ ಪ್ರೇತ ದೈವಗಳ ಉಪಟಳವಿದ್ದಾಗ ಅವನ್ನು ಮಣಿಮಂಚದ ಸಮೇತ ಸಮುದ್ರಕ್ಕೆ ಬಿಸಾಡಿ ಉಚ್ಛಾಟಿಸುವ ನಂಬಿಕೆ ತುಳುನಾಡ ಕರಾವಳಿಯಲ್ಲಿದೆ. ಇದು ಹಾಗೆ ಬಿಟ್ಟು ಹೋದ ಅನಾಥ ಭೂತದ ಮಂಚ. ಇಂತಹ ನೂರಾರು ಮರದ ಆಸನ, ಮಂಚಗಳು ಕಡಲ ತಡಿಯಲ್ಲಿ ಕಾಣ ಸಿಕ್ಕವು.
ಬಾಟಲಿಗಂಟಿದ ಜೀವಂತ ಚಿಪ್ಪು ಪ್ರಾಣಿಯ ರಾಶಿ.
ಬೀಚ್ನಲ್ಲಿ ಬಾಟಲಿ, ಪ್ಲಾಸ್ಟಿಕ್, ಬಲ್ಬ್ ಮುಂತಾದ ವಸ್ತುಗಳು ರಾಶಿರಾಶಿ ಸಿಗುತ್ತಲೇ ಹೋಗುತ್ತವೆ.
ನಿಂತ ದೋಣಿಯಲ್ಲಿ ಕೂತು ಕೊಂಚ ವಿಶ್ರಾಂತಿ ಪಡೆದ ನಮಗೆ ಪ್ರಕ್ರತಿ ಎಂಬ ಖಾಸಗಿ ರೆಸಾರ್ಟ್ ನೋಡುವ ಅವಕಾಶವೂ ಸಿಕ್ಕಿತು.
ಗೆಳೆಯ ಯಶವಂತ ವಿಶ್ರಾಂತಿಗೆಂದು ಸುಮ್ಮನೆ ಕೂತು ಸಮುದ್ರದ ಫೊಟೋ ತೆಗೆಯುತ್ತಿದ್ದ. ಅದನ್ನು ನೋಡುತ್ತಿದ್ದ ನಾಯಿಯೊಂದು ಕೆಮರಾ ಮುಂದೆ ಬಂದು ನಿಂತು ನಗುತ್ತ ಫೋಸು ಕೊಟ್ಟದ್ದನ್ನು ನನ್ನ ಕೆಮರಾ ಕಂಡಿತು!
ಇನ್ನಷ್ಟು ನಡಿಗೆಯನ್ನು ಮುಂದಿನ ಕಂತಿನಲ್ಲಿ ಕೊಡುತ್ತೇನೆ.