Monday, March 16, 2009

ಹಣೆಬರಹ

ಧಾರಾವಾಡದ ಕಾಲೇಜೊಂದರಲ್ಲಿ ಒಂದು ದಿನ ಶಿವರಾಮ ಕಾರಂತರ ಉಪನ್ಯಾಸ ಕಾರ್ಯಕ್ರಮ ಇತ್ತಂತೆ.ಶಿವರಾಮ ಕಾರಂತ ಮಾತನಾಡುತ್ತಿದ್ದಾಗ ಒಬ್ಬಾಕೆ ವಿದ್ಯಾರ್ಥಿನಿ ಕೀಟಲೆ ಮಾಡುತ್ತಲೋ, ಅಕ್ಕಪಕ್ಕದವರಲ್ಲಿ ಮಾತನಾಡುತ್ತಲೋ ಇದ್ದಳಂತೆ. ಕೊನೆಗೆ ಕಾರ್ಯಕ್ರಮ ಮುಗಿದ ಬಳಿಕ ಆಕೆ ಕಾರಂತರಲ್ಲಿ ಅಟೋಗ್ರಾಫ್ ಕೊಡಿ ಪ್ಲೀಸ್ ಎಂದು ಕೇಳಿದಾಗ ಕಾರ್ಯಕ್ರಮದುದಕ್ಕೂ ಆಕೆಯ ಚಟುವಟಿಕೆಯನ್ನು ಗಮನಿಸಿದ್ದ ಕಾರಂತರು ಬರೆದದ್ದು; 'ನನ್ನ ಕೈಬರೆಹದಿಂದ ನಿನ್ನ ಹಣೆ ಬರೆಹವನ್ನು ತಿದ್ದಲಾಗದು!'

ಬೈಕೊಳು ಹಾವೇ...


ಒಬ್ಬ ನಮ್ಮೂರ ಪೇಟೆಗೆ ಅರ್ಜೆಂಟಾಗಿ ಯಾವುದೋ ವಸ್ತುವೊಂದನ್ನು ಖರೀದಿಸಲು ಒಬ್ಬ ಎಂ 80 ದ್ವಿಚಕ್ರ ವಾಹನದಲ್ಲಿ ಬಂದಿದ್ದ. ಹಾಗೇ ಒಂದ್ಕಡೆ ಗಾಡಿ ನಿಲ್ಲಿಸಿ, ಅಂಗಡಿ ಒಳಗೆ ಹೋಗಿ ತನಗೆ ಬೇಕಾದ ವಸ್ತುವನ್ನು ಖರೀದಿಸಿ, ವಾಪಾಸು ಬಂದು ಗಾಡಿ ಹತ್ತಬೇಕು ಅನ್ನುವಷ್ಟರಲ್ಲಿ ಅಲ್ಲಿದ್ದವನೊಬ್ಬ ಹೇಳಿದ.

ಇದು ನಿಮ್ಮ ಗಾಡಿಯಾ? ಮಾರಾಯಾ... ಇದರೊಳಗೆ ಹಾವೊಂದು ಹೋದದ್ದನ್ನು ನಾನು ನೋಡಿದೆ. ಅದು ಸರ್ಪವೇ ಇರಬೇಕು!ಅರ್ಜೆಂಟಿಗೆಂದು ಬಂದು ಹೋಗಬೇಕಾಗಿದ್ದ ಅಸಾಮಿಗೆ ವಿನಾಕಾರಣ ರಗಳೆ ತಗುಲಿಕೊಂಡಾಯಿತು! ಶ್ಶೆ ಏನೀಗ ಮಾಡೂಡು? ಎಂದು ತಲೆ ಬಿಸಿ ಮಾಡಿಕೊಂಡು ಚಡಪಡಿಸತೊಡಗಿದಾಗ ಹಾವು ಗಾಡಿಯೊಳಗೆ ಹೋದದ್ದನ್ನು ನೋಡಿದಾತ ಕೈಮುಗಿದು ಪ್ರಾರ್ಥಿಸುವ ಎಂದು ಸಲಹೆ ನೀಡಿದ. ಬೈಕು ಸವಾರ ಕೈಮುಗಿದು ಪ್ರಾರ್ಥಿಸಿದ; ಸ್ವಾಮಿ ಸರ್ಪ ದೇವ, ನನ್ನಿಂದ ತಪ್ಪಾಗಿದ್ದರೆ ಕ್ಷಮಿಸು, ನಿನಗೆ ತಂಬಿಲ ಸೇವೆ ಕೊಡುತ್ತೇನೆ. ಒಮ್ಮೆ ಹೊರಗೆ ಬಾ ನಾಗಾ...ಊಹು, ಹಾವು ಹೊರಗೆ ಬರಲಿಲ್ಲ. ವಿಷಯ ಆಚೀಚೆ ಹೋಗುವವರಿಗೆ ಗೊತ್ತಾಗಿ ಬೈಕಿನ ಸುತ್ತ ಜನ ಸೇರತೊಡಗಿದರು. ಒಬ್ಬ ಅಂದ; ಅರಸಿನ ನೀರು ಹಾಕಿ, ಹಾವು ಹೊರಬರುತ್ತದೆ; ಒಂದು ಬಟ್ಟಲಲ್ಲಿ ನೀರು ಹಾಕಿ, ಅದಕ್ಕೆ ಅರಸಿನ ಹುಡಿ ಹಾಕಿ, ಆ ಹಳದಿ ನೀರನ್ನು ಗಾಡಿಯ ಸುತ್ತಲೂ ಚಿಮುಕಿಸಿ, ಕೈಮುಗಿದು ನಿಂತರೂ ಹಾವು ಹೊರಬರಲೊಲ್ಲದು.ಗಾಡಿಯನ್ನು ಅಡ್ಡ ಮಲಗಿಸಿ, ಹೋದರೆ ಹೋದೀತು ಅಂದದ್ದಕ್ಕೆ ಹಾಗೇ ಮಾಡಲಾಯಿತು. ಅಷ್ಟಾಗುವಾಗ ಮತ್ತಷ್ಟು ಜನ ಸೇರಿದರು. ವಾಹನಗಳಲ್ಲಿ ಹೋಗುತ್ತಿದ್ದವರು ಗಾಡಿ ನಿಲ್ಲಿಸಿ, ಅಡ್ಡ ಮಲಗಿಸಿದ ಎಂ80ಯನ್ನು ನೋಡಿ ಸಾವಿರ ಪ್ರಶ್ನೆ ಕೇಳಿ,ಹೋಗುವ ಹೊತ್ತಿಗೆ ರಸ್ತೆ ಬ್ಲಾಕ್ ಆಗಿ ಜೀಪಿನಲ್ಲಿ ಪೋಲೀಸರು ಬಂದರು.

ಜನ ಸೇರಿದ್ದನ್ನು ನೋಡಿ ಗುಂಪಿನೊಳಗೆ ನುಗ್ಗಿ ಏನು ಏನು ಎಂದು ವಿಚಾರಿಸಿದರು. ಬೈಕು ಅಡ್ಡ ಬಿದ್ದದ್ದನ್ನು ನೋಡಿ ಏನು? ಆಕ್ಸಿಡೆಂಟಾ? ಪೆಟ್ಟಾಗಿದಾ? ಅಂತ ಕೇಳುವಾಗ ಬೈಕಿನ ಓನರು; ಹಾವು, ಬೈಕಿನೊಳಗೆ ಹೋಗಿದೆ. ಹೊರಬರಲಿ ಅಂತ ಅಡ್ಡ ಮಲಗಿಸಿದ್ದೇವೆ ಅಂದ.ಸರಿ ಸರಿ, ಹೀಗೆ ದಾರಿ ಮಧ್ಯೆ ಮಲಗಿಸಬೇಡಿ. ರಸ್ತೆ ಬ್ಲಾಕ್ ಮಾಡಬೇಡಿ. ಹೋಗಿ, ಎಲ್ಲ ದೂರ ಹೋಗಿ ಅಂತ ಜನರನ್ನು ಪೋಲೀಸರು ಚದುರಿಸಿದರು.ಬೈಕನ್ನು ಇಬ್ಬರು ಹೆದರುತ್ತಲೇ ಎತ್ತಿಕೊಂಡು ರಸ್ತೆಯಾಚೆಗಿನ ಸ್ವಲ್ಪ ವಿಶಾಲ ಜಾಗಕ್ಕೆ ಕೊಂಡೊಯ್ದು ಮಲಗಿಸಿದರು. ಆದರೂ ಹಾವು ಹೊರಬರಲಿಲ್ಲ.

ಅಷ್ಟಾಗುವಾಗ ಒಬ್ಬ ಧೈರ್ಯಶಾಲಿ ಮೆಕಾನಿಕ್ ಎಂ80ಯನ್ನು ಬಿಚ್ಚತೊಡಗಿದ. ಹಿಂಬದಿಯ ಪ್ಲೇಟ್ ಬಿಚ್ಚುವ ಹೊತ್ತಿಗೆ ಒಳಗಿದ್ದ ಸಣ್ಣದಾದ ನಾಗರ ಹಾವು ಮತ್ತೂ ಒಳಕ್ಕೆ ಹೋಯಿತು. ಮೆಕಾನಿಕ್ ಬಿಚ್ಚುತ್ತ ಬಿಚ್ಚುತ್ತ ಹೋದಂತೆ ಹಾವು ಹಾಂಡಲ್ ಒಳ ತನಕ ಬಂದು ಕೂತಿತು.
ಮೆಲ್ಲ ಮಾರಾಯಾ ಗಾಡಿ ತಿರುಗಿಸಬೇಡ. ಮೊನ್ನೆ ಹೀಗೇ ಒಬ್ಬನ ಬೈಕಿನ ಒಳಗೆ ನಾಗರಹಾವು ಹೋಗಿ ಕೂತಿತ್ತು. ಆತ ಬೈಕ್ ಸ್ಟಾರ್ಟ್ ಮಾಡಿದ.ಚೈನಿನೊಳಗೆ ಸಿಕ್ಕಿ ಹಾವು ಸತ್ತೇ ಹೋಯಿತು.ಮರುದಿನ ಆತನ ಬೈಕ್ ಆಕ್ಸಿಡೆಂಟಾಗಿ ಕೆಎಂಸಿ ಆಸ್ಪತ್ರೆಯಲ್ಲಿದ್ದಾನೆ ಗೊತ್ತುಂಟಲ್ಲಾ....ಹಿರಿಯನೊಬ್ಬ ಮೆಕಾನಿಕ್ನಿಗೆ ಬುದ್ದಿವಾದ ಹೇಳಿದ. ಎಂ80ಯ ನಿಜವಾದ ಮಾಲಿಕ ಪಾಪ ಹೆದರುತ್ತ, ನಾಗದೇವರಿಗೆ ವಿವಿಧ ಹರಕೆಗಳನ್ನು ಹೇಳುತ್ತ ನಡುಗುತ್ತ ನಿಂತಿದ್ದ.ಸುತ್ತಲೂ ನೂರಾರು ಮಂದಿ ಕುತೂಹಲಿಗರು!ಎಡಕ್ಕೆ ಮಲಗಿಸಿ ಇಟ್ಟಿದ್ದ ಗಾಡಿಯನ್ನು ಈಗ ಬಲಕ್ಕೆ ಮಲಗಿಸಿ ಇಡಲಾಯಿತು. ಗಾಡಿಯನ್ನು ಸಾಧ್ಯವಾದಷ್ಟು ಬಿಚ್ಚಿದ್ದರೂ, ಹಾವು ಹ್ಯಾಂಡಲಿನ ಒಳಗೆ ಹೋಗಿ ಕೂತಿತ್ತು.ಬಾಲ ಮಾತ್ರ ಕಾಣುತ್ತಿತ್ತು.ಅಂತೂ ಇಂತೂ ಸುಮಾರು ನಾಲ್ಕೈದು ಗಂಟೆ ಕಳೆಯುವ ಹೊತ್ತಿಗೆ ಬಿಸಿಲೂ ಏರಿ, ಎಂ80 ಕೂಡ ಬಿಸಿಯಾಗಿ ಹಾವು ಮೆಲ್ಲನೆ ಹೊರ ಬಂದು ನಿಧಾನವಾಗಿ ಚರಂಡಿಯೊಳಗಿನ ಮಾಟೆ ಸೇರುವ ಹೊತ್ತಿಗೆ ಮಾಲಿಕನಿಗೆ ಅಯ್ಯಮ್ಮ ಅನಿಸಿತ್ತು.ಇದೇ ಹಾವು ಎರಡು ದಿನಗಳ ಹಿಂದೆ ಅಲ್ಲೇ ಪಕ್ಕದ ಹೊಟೇಲೊಂದರಲ್ಲಿ ಕಾಣಿಸಿಕೊಂಡಿತ್ತು.ಒಬ್ಬರು ಚಾ ಕುಡಿಯುತ್ತಿರಬೇಕಾದರೆ ಮತ್ತೊಬ್ಬರು, ಇಲ್ಲೊಂದು ಹಾವು ಹೋದ ಹಾಗೆ ಆಯಿತು ಅಂದರು. ಅಷ್ಟಾಗುವಾಗ ಚಾ ಕುಡಿಯುತ್ತಿದ್ದವರು, ಹೌದಾ, ಇನ್ನು ನನ್ನ ಚೀಲದೊಳಗೆ ಹೋಗುವುದು ಬೇಡ ಎಂದು ಚೀಲವನ್ನೆತ್ತಿ ಟೇಬಲಿನ ಮೇಲಿಟ್ಟು, ಲೋಟವನ್ನು ತುಟಿಗೆ ಹಿಡಿದು ಚಾ ಹೀರಬೇಕು ಎನ್ನುವಷ್ಟರಲ್ಲಿ ಚೀಲದೊಳಗಿಂದ ಅದೇ ಹಾವು ಹೆಡೆಯೆತ್ತಿ ಹೊರ ನೋಡಬೇಕಾ?...ಇವತ್ತಿಗೂ ಈ ಹೊಟೇಲಿನ ಆಸುಪಾಸಿನಲ್ಲಿ ಹಾವು ಬಂದು ಹೋಗುತ್ತಲೇ ಇರುತ್ತದೆ. ನಮಗೆಲ್ಲ ಇಂತಹ ಕಥೆಗಳು ಸಿಕ್ಕುತ್ತಲೇ ಇರುತ್ತವೆ.ಅಂದ ಹಾಗೆ ಇದು ಕಾಲ್ಪನಿಕ ಕಥೆಯಲ್ಲ.

Sunday, March 15, 2009

ದೇವರು

ದೇವರು ಕಾಣಿಸುವುದಿಲ್ಲ. ಹಾಗಾಗಿ ದೇವರಿಲ್ಲ ಎನ್ನುವ ನಾಸ್ತಿಕವಾದಕ್ಕೆ ಸ್ವಾಮೀಜಿಯೊಬ್ಬರು ಭಾಷಣದಲ್ಲಿ ಹೀಗೆ ವಾದಿಸುತ್ತಿದ್ದರು.
ನೋಡಿ, ಬಲ್ಬ್ ಇದೆ. ಅದರಲ್ಲಿ ಕರೆಂಟ್ ಇಲ್ಲದೆ ಉರಿಯದು. ಕರೆಂಟು ಕಣ್ಣಿಗೆ ಕಾಣುತ್ತದಾ? ಹಾಗಾದರೆ ಕಾಣದ ಶಕ್ತಿ ಬಲ್ಬಿಗೆ ಬಂದಾಗ ಬೆಳಕು ಉಂಟಾಗುತ್ತದೆ.
ನಮ್ಮ ಸುತ್ತಲೂ ಗಾಳಿಯಿದೆಯಾದರೂ ಕಣ್ಣಿಗೆ ಕಾಣುತ್ತದಾ? ಫ್ಯಾನು ತಿರುಗಿದಾಗ ಹೇಗೆ ಗಾಳಿ ಹುಟ್ಟಿಕೊಳ್ಳುತ್ತದೆ? ನಮ್ಮ ಅನುಭವಕ್ಕೆ ಬರುತ್ತದೆ? ಆದರೂ ಗಾಳಿ ಕಾಣಿಸದು.
ನೀವೇನಂತೀರಿ?

Saturday, March 14, 2009

ಡೋಲು






















ನೀವು ದೇಗುಲಗಳಲ್ಲಿ, ಉತ್ಸವ, ಮೆರವಣಿಗೆಗಳಲ್ಲಿ ನೋಡಿರಬಹುದು, ಕೇಳಿರಬಹುದು.
ಡೋಲು, ಡೋಲಕ, ಚೆಂಡೆ, ಮದ್ದಲೆ, ಥಾಸೆ, ತಾಳ, ಜಾಗಟೆ, ನಾಗಸ್ವರ, ಸ್ಯಾಕ್ಸೋಫೋನ್, ಕಟುವಾದ್ಯ, ಒಡುಕು, ಪಟಂ, ತಿವಿಲೆ. ನಗಾರಿ, ತಮ್ಮೇಳ, ಕೊಂಬು, ಕಹಳೆ, ರಣ ಕಹಳೆ... ವಾದ್ಯಗಳ ಪಟ್ಟಿ ಮಾಡುತ್ತ ಹೋಗಬಹುದು.
ಈಗೀಗ ಇವೆಲ್ಲ ವಾದ್ಯಗಳ ನಿನಾದಕ್ಕೆ ಹೊಡೆತ ಕೊಡುತ್ತಿರುವುದು ನಾಸಿಕ್ ಬ್ಯಾಂಡ್. ಎಲ್ಲೆಡೆಯೂ ಅದರದ್ದೇ ಅಬ್ಬರ.
ಮೆರವಣಿಗೆಗಳಲ್ಲಿ ನಾಸಿಕ್ ಬ್ಯಾಂಡ್ ಅಬ್ಬರಕ್ಕೆ ಯುವಕರು ಹುಚ್ಚೆದ್ದು ಕುಣಿಯುತ್ತಿದ್ದರೆ, ಚೆಂಡೆ ಬಾರಿಸುವವರು ತಮ್ಮ ಸದ್ದು ಜೋರಾಗಿ ಕೇಳಲಿ ಎಂದು ಹೆಚ್ಚು ಶಕ್ತಿ ಹಾಕಿ ಹೊಡೆಯುತ್ತಾರೆ. ಆದರೂ ವ್ಯರ್ಥ ಪ್ರಯತ್ನ. ನಾಸಿಕ್ ಬ್ಯಾಂಡಿಗೆ ಚೆಂಡೆ ಅಬ್ಬರಿಸುವುದಿಲ್ಲ. ಚೆಂಡೆಯೇ ಕೇಳುವುದಿಲ್ಲವೆಂದಾದ ಮೇಲೆ ಡೋಲು ಬಾರಿಸುವವರ ಗೋಳು ಕೇಳುವವರಾರು?
ಹಿಂದೆ ದೇಗುಲಗಳ ಜಾತ್ರೆಗೆ, ಸತ್ತವರ ಬೊಜ್ಜಕ್ಕೆ ಡೋಲು ಜೊತೆಗೆ ಕೊಳಲು ಬೇಕೇ ಬೇಕು. ಈಗ ಕೊರಗ ಜನಾಂಗದವರು ಡೊಲು ಬಡಿಯುವುದು ತುಂಬ ಅಂದರೆ ತುಂಬ ಕಡಿಮೆ. ಅಜಲು ಪದ್ದತಿ ಎಂದು ದಲಿತ ನಾಯಕರು ಕೊರಗರು ಡೋಲು ಬಡಿಯಲು ಬಿಡುವುದಿಲ್ಲ.
ಪರಿಣಾಮ ನಾಸಿಕ್ ಬ್ಯಾಂಡ್ ಬಂದಿದೆ. ಮೆರೆಯುತ್ತಿದೆ.
ಭೂತ ಕೋಲ, ಜಾತ್ರೆಯಲ್ಲಿ ದೇವರ ಬಲಿ ಸಂದರ್ಭ, ಹುಲಿ ಕರಡಿ ವೇಷಗಳ ಕುಣಿತಕ್ಕೆ ಥಾಸೆ, ಡೋಲು, ಸಣ್ಣ ಸ್ವರದ ನಾಗಸ್ವರ ಬೇಕು. ಇವತ್ತು ಅವುಗಳ ಸ್ವರವೂ ನಾಸಿಕ್ ಬ್ಯಾಂಡಿನ ಎದುರು ಸಣ್ಣದಾಗುತ್ತಿದೆ.
ಜಿಲ್ಲಿಂ ಜಿಲ್ಲಿಂ ಅಂತ ಸದ್ದು ಮಾಡುತ್ತ ಹೊರಡುವ ಬ್ಯಾಂಡ್ ಸೆಟ್ ಕೂಡ ಯಕ್ಷಗಾನ, ಮೆರವಣಿಗೆಗಳಲ್ಲಿ ಇರುತ್ತವೆ. ಕಟುವಾದ್ಯ, ಒಡುಕು, ಪಟಂ, ತಿವಿಲೆ. ನಗಾರಿ, ತಮ್ಮೇಳ, ಕೊಂಬು, ಕಹಳೆ, ರಣ ಕಹಳೆ ಇವೆಲ್ಲ ಜಾತ್ರೆ ಸಂದರ್ಭ ದೇವರ ಎದುರು ಬಾರಿಸುತ್ತ ಬಲಿ ಸೇವೆ ಸಲ್ಲಿಸಲು ಬಳಕೆಯಾಗುತ್ತವೆ.
ನಾಸಿಕ್ ಬ್ಯಾಂಡ್ ಇರಲಿ. ಆದರೆ ಅವು ಉಳಿದ ವಾದ್ಯಗಳ ನಿನಾದವನ್ನು, ಸದ್ದಿನ ಆನಂದವನ್ನು ಕೊಂದು ಹಾಕುತ್ತವಲ್ಲ!