Saturday, October 3, 2009

ಮನೆಯೊಳಗಿಲ್ಲ ಒಲೆ, ಹೊರಗೆ ಹೊಗೆ


ಅಲ್ಲಿ ದೂರದಲ್ಲೆಲ್ಲೋ ಹೊಗೆ ಕಾಣಿಸುತ್ತಿದ್ದರೆ ಮನೆಯಿದೆ ಅಂತ ನಿರ್ಜನ ಪ್ರದೇಶದಲ್ಲಿ, ಗುಡ್ಡ ಗಾಡಿನಲ್ಲಿ, ಕಾಡಿನಲ್ಲಿ ನಡೆದುಕೊಂಡು ಹೋಗುತ್ತಿದ್ದ ವರು ಲೆಕ್ಕಾಚಾರ ಹಾಕುತ್ತಿದ್ದರು. ಮನೆಯಿದ್ದರೆ ಅಲ್ಲಿ ಮಂದಿಯಿರುತ್ತಾರೆ. ಅವರಿದ್ದರೆ ಅಡುಗೆಯ ಒಲೆಯೋ, ಬಚ್ಚಲಿನ ಒಲೆಯೋ, ಭತ್ತ ಕಾಯಿಸುವ ಒಲೆಯೋ ಉರಿಯುತ್ತಲಿರುತ್ತದೆ. ಒಲೆ ಯಿಲ್ಲದ ಮನೆಯಿದ್ದರೆ ಅದು ಅಚ್ಚರಿಯ ಸಂಗತಿಯೇ! ಮನೆಯೇ ಇಲ್ಲದಿದ್ದರೂ, ಕಟ್ಟಿಕೊಂಡಿರುವ ಜೋಪಡಿ ಪಕ್ಕದಲ್ಲೊಂದು ಒಲೆ ಉರಿಯುತ್ತಿರುತ್ತಿದೆ.ಆದರೆ ಈಗ ಒಲೆಗಳಿಲ್ಲದ, ಹೊಗೆಯೂ ಇಲ್ಲದ ದಿನಗಳು ಬಂದಿವೆ!ಈಗ ಸೀಮೆ ಎಣ್ಣೆ ಸ್ಟೌವ್ಗಳು ಕೂಡ ಹಳತಾಗಿವೆ. ಗ್ಯಾಸ್ಹಂಡೆಗಳು ಮನೆಗಳನ್ನು ಆವರಿಸಿವೆ. ಪೇಟೆಗಳ ಮನೆಗಳಿಗೆ ವಿದ್ಯುತ್ ಒಲೆ ಬಂದಿದೆ. ಸೌರಶಕ್ತಿಯ ಒಲೆಯೂ ಬಂದಿದೆ. ಆದರೆ ಕಟ್ಟಿಗೆಯನ್ನು ಉಪಯೋಗಿಸಿ ಬೇಯಿಸುವ, ಕಾಯಿಸುವ ಒಲೆ ಇಲ್ಲವಾಗುತ್ತಿದೆ.ಕಟ್ಟಿಗೆಯ ಜೊತೆಗೆ ಸೆಗಣಿಯ ತಟ್ಟಿ, ಒಣಗಿಸಿದ ಬೆರಣಿಯಿಂದ ಬೆಂಕಿ ಉರಿಸಲಾಗುತ್ತಿತ್ತು. ಕಡಿಮೆ ಕಟ್ಟಿಗೆ ಅಥವಾ ಮರದ ಚೂರುಗಳನ್ನು ಬಳಸಿ, ಪೇಪರ್, ಕಸ ಗಳನ್ನು ಬಳಸಿ ಬೆಂಕಿಯಿಂದ ಕಾಯಿಸುವ, ಬೇಯಿಸುವ ಒಲೆಗಳೂ ಬಂದಿದ್ದವು. ಆದರೂ ಅವು ಕಟ್ಟಿಗೆಯಷ್ಟು ಜನಪ್ರಿಯವಾಗಲಿಲ್ಲ. ನಗರಗಳಲ್ಲಿ ಕಟ್ಟಿಗೆ ಒಲೆಗಳನ್ನು ಬಳಸುವುದು ಕಷ್ಟವೇ. ಆದರೆ ಇತ್ತೀಚಿಗೆ ಅಭಿವೃದ್ಧಿಯ ವೇಗಕ್ಕೆ ಹಳ್ಳಿಗಳಲ್ಲೂ ಸೌದೆ ಉರಿಸುವ ಒಲೆಗಳು ಕಾಣೆ ಯಾಗುತ್ತಿವೆ. ಅಲ್ಲಿಗೆ ಗ್ಯಾಸ್ ಸ್ಟೌವ್ ಬಂದು ಕೂರುತ್ತಿದೆ. ಸೂರ್ಯಶಕ್ತಿಯ ಒಲೆಗಳು ನೀರು ಬಿಸಿ ಮಾಡಲು ವಿದ್ಯುತ್ಗೆ ಓಕೆ. ಆದರೆ ಅಡುಗೆಗೆ ಮಳೆಗಾಲಗಳಲ್ಲಿ ಕಷ್ಟ. ಇನ್ನು ವಿದ್ಯುತ್ ಒಲೆಗಳು ಹೆಚ್ಚು ವೆಚ್ಚವನ್ನು ಬಯಸುತ್ತವೆ. ಕಟ್ಟಿಗೆಗೆ ಪರಿಸರ ನಾಶವಾಗುತ್ತದೆ ಎಂಬುದು ಹೌದಾದರೂ ಒಲೆಗಳ ಮುಂದಿನ ಸಂಭ್ರಮ ಅನುಭವಿಸಿದವರಿ ಗಷ್ಟೇ ಗೊತ್ತು.ಗಡಗಡ ನಡುಗುವ ಚಳಿಗೆ ಬೆಂಕಿ ಹಾಕಿ ಒಲೆ ಮುಂದೆ ಕೂತರೆ ವಾಹ್ ಪರಮಾದ್ಭುತ ಸುಖ.ಕೆಲವರು ಹೇಳುವುದುಂಟು ಕಟ್ಟಿಗೆ ಒಲೆಯಲ್ಲಿ ಮಾಡುವ ಚಹಾ, ಕಾಫಿಯ ಸ್ವಾದಿಷ್ಟ, ರುಚಿಯೇ ಬೇರೆ ಅಂತ. ಒಲೆ ಮುಂದೆ ಕೂತು ಹುಹೂಹೂ ಅಂತ ಊದುಕೊಳವೆಯಿಂದ ಗಾಳಿ ಊದೀ ಊದಿ ಕೆಂಡ ದಿಂದ ಹೊಗೆಯನ್ನೂ, ಬೆಂಕಿಯನ್ನೂ ಹುಟ್ಟಿಸಿ, ಅದರಲ್ಲಿ ಪಾತ್ರೆಯಿಟ್ಟು ಹಾಲನ್ನೋ, ಅನ್ನವನ್ನೋ, ಸಾರನ್ನೋ, ಪಾಯಸವನ್ನೋ ಮಾಡುವ ರೀತಿ ಇನ್ನು ನೆನಪುಗಳು ಮಾತ್ರ. ಸಣ್ಣ ಒಲೆ, ಮಧ್ಯಮ ಒಲೆ, ದೊಡ್ಡ ಒಲೆಗಳನ್ನು ಕಲ್ಲು ಇಟ್ಟು ಕಟ್ಟಿ, ಅದಕ್ಕೆ ಸೆಗಣಿಯನ್ನೋ ಸಿಮೆಂಟನ್ನೋ ಬಳಿದು ರಚಿಸುವ ಕಾಯಕ ಗ್ರಾಮೀಣ ಬದುಕು ದೂರ ವಾದಂತೆ ಕಡಿಮೆಯಾಗುತ್ತಲೇ ಹೋಗುತ್ತಿದೆ.ಫೋನು, ಮೊಬೈಲು, ಇಂಟರ್ನೆಟ್ಗಳೆಲ್ಲ ಬಂದ ಮೇಲೆ ಓಲೆಗಳು ಕಡಿಮೆಯಾದಂತೆ, ಕಟ್ಟಿಗೆ ಒಲೆಗಳೂ ಆಧುನಿಕತೆಯ ಹೊಡೆತಕ್ಕೆ ಓಡಿ ಹೋಗುತ್ತಿವೆ

2 comments:

shivu.k said...

ಮನಸು ಮೇಡಮ್,

ನಿಮ್ಮ ಲೇಖನ ತುಂಬಾ ಚೆನ್ನಾಗಿದೆ. ವಿಚಾರವನ್ನು ಚೆನ್ನಾಗಿ ಅವಲೋಕಿಸಿದ್ದೀರಿ. ನಿಜ ನನಗೆ ಈಗಲೂ ನಮ್ಮ ಹಳ್ಳಿಯ ನೀರೊಲೆ, ಆಡುಗೆ ಮನೆ ಒಲೆ ನೋಡಿದರೆ ನೀವು ಬರೆದಿರುವ ಎಲ್ಲಾ ವಿಚಾರಗಳು ನೆನಪಾಗುತ್ತವೆ. ನನ್ನ ಶ್ರೀಮತಿ ನನ್ನೂರಿಗೆ ಹೋದರೆ ಅವಳಿಗೆ ಅರಾಮವಾಗಿ ಅಂತ ಒಲೆಯಲ್ಲೇ ಆಡುಗೆ ಮಾಡುವುದೆಂದರೆ ಅವಳಿಗೆ ಇಷ್ಟ. ಹೊಗೆಯಲ್ಲಿ ನೀನು ಕಪ್ಪಾಗಿಬಿಡುತ್ತೀಯ ಅಂದರೆ ಆಗ್ಲಿ ಬಿಡ್ರಿ, ಆದ್ರೆ ಇದರಲ್ಲಿ ಮಾಡಿಕೊಂಡು ತಿನ್ನುವ ರುಚಿಯೇ ಬೇರೆ ಅನ್ನುತ್ತಾಳೆ.

ಒಲೆಗಳ, ಉರುವಲುಗಳ ವಿಚಾರವಾಗಿ ನಾನು ಅನೇಕ ಮಾಹಿತಿಗಳನ್ನು ಸಂಗ್ರಹ ಮಾಡುತ್ತಿದ್ದೇನೆ. ಮುಂದೆ ಅದನ್ನು ಎಂದಾದರೂ ಬ್ಲಾಗಿನಲ್ಲಿ ಹಾಕುತ್ತೇನೆ.
ಧನ್ಯವಾದಗಳು.
ಲೇಖನದ ವಿಚಾರವಾಗಿ ನಾನು

Nithin said...

Tumba chennagide...
ಒಲೆ mattu ಓಲೆ kadimeyagiruvudu nijavada besada sngathi