ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ನವರಾತ್ರಿ ಉತ್ಸವ ವೈಭವದಿಂದ ನಡೆಯಲು ಕಾರ್ಣಿಕ ದೇವೀ ಕ್ಷೇತ್ರ ಎಂಬುದು ಒಂದು ಕಾರಣವಾದರೆ, ಭಕ್ತರಿಂದ ನೀಡಲ್ಪಟ್ಟ ಸೀರೆಗಳನ್ನು ಲಲಿತಾ ಪಂಚಮಿ ದಿನ ಸಾವಿರಾರು ಮಹಿಳಾ ಭಕ್ತರಿಗೆ ಶ್ರೀ ದೇವರ ಶೇಷವಸ್ತ್ರ ನೀಡುವುದೂ ಮತ್ತೊಂದು ಕಾರಣ. ಕಟೀಲು ದೇಗುಲಕ್ಕೆ ವರುಷಕ್ಕೆ ಸುಮಾರು ೧೩ಸಾವಿರ ಸೀರೆ ಹರಕೆ ರೂಪದಲ್ಲಿ ಬರುತ್ತದೆ. ಹಿಂದೆ ಒಂದು ಸೀರೆಯನ್ನು ನಾಲ್ಕೈದು ತುಂಡು ಮಾಡಿ ಕೊಡುತ್ತಿದ್ದರು. ಈಗ ದೇಗುಲದಲ್ಲೇ ಸೀರೆ ಮಾರಾಟದ ಕೌಂಟರ್ ಮಾಡಿದ ಪರಿಣಾಮ ಹರಕೆ ರೂಪದಲ್ಲಿ ಬರುವ ಸೀರೆಗಳ ಸಂಖ್ಯೆ ಜಾಸ್ತಿಯಾಗಿದೆ. ಈಗ ಒಂದು ಸೀರೆಯನ್ನು ಎರಡು ತುಂಡು ಮಾಡಿ ರವಕೆ ಕಣ ರೂಪದಲ್ಲಿ ಒಂದು ತಿಂಗಳ ಹೆಣ್ಣು ಮಕ್ಕಳಿಂದ ಮುದುಕಿಯರವರೆಗೆ ಜಾತಿಮತ ಭೇದವಿಲ್ಲದೆ ರಾತ್ರಿ ಭೋಜನಕ್ಕೆ ಕೂತ ಸಂದರ್ಭ ಮಹಿಳಾ ಭಕ್ತರಿಗೆ ಸುವಾಸಿನಿ ಪೂಜೆಯ ನೆನಪಿನಲ್ಲಿ ನೀಡಲಾಗುತ್ತದೆ. ಎಂಟನೆಯ ದಿನ ಕಡುಬು ಮುಹೂರ್ತವನ್ನು ಅದಕ್ಕೆಂದೇ ಇರುವ ವಿಶೇಷ ದೋಣಿಯಲ್ಲಿ ಮಾಡಿ, ಮಹಾನವಮಿಯಂದು ರಾತ್ರಿ ಭಕ್ತರಿಗೆ ಕಡುಬಿನಲ್ಲೇ ಭೋಜನ ಪ್ರಸಾದ ನೀಡಲಾಗುತ್ತದೆ. ನವರಾತ್ರಿಯ ಕಾಲದಲ್ಲಿ ನಾಲ್ಕು ರಂಗದಲ್ಲಿ ಪೂಜೆಯ ಸಂದರ್ಭ ೯ ತಾಳದ ಮನೆಯವರಿಂದ ನಡೆಯುವ ಸಂಕೀರ್ತನೆ ವಿಶೇಷ.ಕಟೀಲು, ಕೊಡೆತ್ತೂರು, ಎಕ್ಕಾರು ಗ್ರಾಮಗಳಿಂದ ಹುಲಿ ವೇಷ ವೈಭವದ ಮೆರವಣಿಗೆಯಲ್ಲಿ ಬರುವುದು ದಶಕಗಳಿಂದ ನಡೆಯುತ್ತ ಬಂದಿದೆ. ಕಟೀಲು ಸಮಿತಿಯಿಂದ ತೃತೀಯ ದಿನ, ಕೊಡೆತ್ತೂರು ಸಮಿತಿಯಿಂದ ಲಲಿತಾ ಪಂಚಮಿ ಯಂದು, ಎಕ್ಕಾರಿನಿಂದ ಮೂಲಾನಕ್ಷತ್ರ ದಿನ ಹುಲಿ ಮೆರವಣಿಗೆ ಬರುವುದು ವಿಶೇಷ. ಹುಲಿವೇಷಗಳ ಜೊತೆಗೆ ವಿವಿಧ ವೇಷಗಳನ್ನೂ ಹಾಕಿಕೊಂಡು ಮೆರವಣಿಗೆಯಲ್ಲಿ ಬರುವುದನ್ನು ನೋಡಲಿಕ್ಕೆಂದೇ ಸಾವಿರಾರು ಮಂದಿ ಸೇರುತ್ತಾರೆ.ಕಷ್ಟ, ಸಮಸ್ಯೆ ಪರಿಹಾರಕ್ಕಾಗಿ, ಇಷ್ಟಾರ್ಥ ಸಿದ್ದಿಗಾಗಿ ವೇಷ ಹಾಕುತ್ತೇನೆ ಎಂದು ಹರಕೆ ಹೊತ್ತವರು ವೇಷಗಳನ್ನು ಹಾಕಿಕೊಂಡು ದೇಗುಲಕ್ಕೆ ಬಂದು ಕುಣಿದು ಹರಕೆ ತೀರಿಸಿ ಹೋಗುತ್ತಾರೆ. ಮೂರು ಗ್ರಾಮಗಳಿಂದ ಹೊರತು ಪಡಿಸಿ, ನವರಾತ್ರಿಯ ದಿನಗಳಲ್ಲಿ ಕಟೀಲಿಗೆ ಸುಮಾರು ಮುನ್ನೂರಕ್ಕೂ ಹೆಚ್ಚು ಹುಲಿ, ಕರಡಿ, ಸಿಂಹ ವೇಷಗಳ ತಂಡಗಳು ಬಂದು ಕುಣಿದು ಹೋಗುತ್ತವೆ. ಲೆಕ್ಕ ಹಾಕಿದರೆ ಕಟೀಲಿನಲ್ಲಿ ಕುಣಿದು ಹರಕೆ ತೀರಿಸುವ ಹುಲಿ ವೇಷಗಳ ಸಂಖ್ಯೆ ಒಂದು ಸಾವಿರ ದಾಟೀತು. ಶ್ರವಣಾ ನಕ್ಷತ್ರದಂದು ದೇವೀ ಸಮ್ಮುಖದಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ನಡೆಯುತ್ತದೆ.ಇವಲ್ಲದೆ ಕಟೀಲು ದೇಗುಲದಲ್ಲಿ ನವರಾತ್ರಿಯ ದಿನಗಳಲ್ಲಿ ಸಾಂಸ್ಕೃತಿಕ ಕಾರ್‍ಯಕ್ರಮಗಳು, ಯಕ್ಷಗಾನಗಳು ಜನರನ್ನು ರಂಜಿಸುತ್ತವೆ.
ದಯವಿಟ್ಟು ಪ್ರವಾಸ ಹೋಗಬೇಡಿ-ಪ್ರಯಾಣ ಮಾಡಿ!
3 years ago
4 comments:
Devasthanada Aduge maneyalli doni iruvudu yake anta eega gottaytu
ಮಿಥುನ್,
ತುಂಬಾ ಚೆನ್ನಾಗಿ ವರ್ಣಿಸಿದ್ದಿರ, ಫೋಟೋಗಳು ಮನ ತಟ್ಟುವಂತಿವೆ
ನವರಾತ್ರಿಯ ಸಮಯದಲ್ಲಿ ಕಟೀಲು ದೇವಸ್ಥಾನ ಆಚರಣೆಗಳನ್ನು ಚಿತ್ರ ಸಹಿತ ಚೆನ್ನಾಗಿ ವಿವರಿಸಿದ್ದೀರಿ...ಫೋಟೊಗಳು ಚೆನ್ನಾಗಿವೆ...
thanks
Post a Comment