Monday, January 12, 2009

ಇವರು ಚಾ ಕುಡಿಯುತ್ತಿದ್ದರು. ಅವನು ಬಸ್ಸು ಕೊಂಡೊಯ್ದ!




ಕಟೀಲು ಬಸ್ಸು ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್ಸೊಂದನ್ನು ಅರೆಹುಚ್ಚ ಯುವಕನೊಬ್ಬ ಏಕಾಏಕಿ ಕೊಂಡೊಯ್ದು, ಬೈಕೊಂದಕ್ಕೆ ಡಿಕ್ಕಿ ಹೊಡೆದು, ಅದರಲ್ಲಿದ್ದ ದಂಪತಿಗಳನ್ನು ಗಾಯಗೊಳಿಸಿ, ಕೊನೆಗೆ ಬಸ್ಸನ್ನು ಕಣಿವೆಗೆ ಹಾಕಿ ಪರಾರಿಯಾಗಿ ಕೊನೆಗೆ ಸಾರ್ವಜನಿಕರ ಕೈಗೆ ಸಿಕ್ಕ ಘಟನೆ ಸೋಮವಾರ ನಡೆದಿದೆ.ಸೋಮವಾರ ಬೆಳಿಗ್ಗೆ ಎಂದಿನಂತೆ ದುರ್ಗಾಪರಮೇಶ್ವರೀ ಬಸ್ಸನ್ನು ಕಟೀಲಿನ ಬಸ್‌ನಿಲ್ದಾಣದಲ್ಲಿ ನಿಲ್ಲಿಸಿ, ಡ್ರೈವರ್, ಕಂಡಕ್ಟರ್ ಚಾ ಕುಡಿಯಲು ಹೊಟೇಲಿಗೆ ಹೋಗಿದ್ದರು. ಈ ಸಂದರ್ಭ ಮಂಜರಪಲ್ಕೆಯ ಒಂಜರಕಟ್ಟೆಯ ಪ್ರಶಾಂತ(೧೮ವ.) ಎಂಬಾತ ಏಕಾಏಕಿ ಬಸ್ಸನ್ನು ಚಲಾಯಿಸಿಕೊಂಡು ಕಿನ್ನಿಗೋಳಿ ಕಡೆ ಹೊರಟ. ಬಸ್ಸನ್ನು ಅಡ್ಡಾದಿಡ್ಡಿ ಕೊಂಡೊಯ್ಯುವುದನ್ನು ನೋಡಿ ಬಸ್ಸಿನಲ್ಲಿದ್ದ ಇಬ್ಬರು ಬೊಬ್ಬೆ ಹಾಕಿದಾಗ ಆತ ನಿಲ್ಲಿಸಿದ. ಕೂಡಲೇ ಅವರಿಬ್ಬರು ಇಳಿದರು. ಅಲ್ಲಿಂದ ಮತ್ತೆ ವೇಗವಾಗಿ ಬಸ್ಸನ್ನು ಚಲಾಯಿಸಿಕೊಂಡು ಹೊರಟ ಪ್ರಶಾಂತ್, ಕಟೀಲು ಚರ್ಚ್ ಬಳಿಯ ತಿರುವಿನಲ್ಲಿ ಬೈಕೊಂದಕ್ಕೆ ಡಿಕ್ಕಿ ಹೊಡೆದು ಅದರಲ್ಲಿದ್ದ ದಂಪತಿಗಳಿಬ್ಬರ ಕಾಲುಗಳಿಗೆ ಗಂಭೀರ ಗಾಯವಾಗುವಂತೆ ಮಾಡಿದ.ಫಲಿಮಾರುವಿನ ಮನೆಯಿಂದ ಬೈಕಂಪಾಡಿಯಲ್ಲಿ ಉದ್ಯೋಗಿಯಾಗಿರುವ ಸಚಿನ್ ಕೋಟ್ಯಾನ್ ಹಾಗೂ ಅವರ ಪತ್ನಿ ಮಂಗಳೂರಿನಲ್ಲಿ ಉದ್ಯೋಗಿಯಾಗಿರುವ ಅಶ್ವಿತಾ ಜೊತೆಯಾಗಿ ಮಂಗಳೂರಿನ ಕಡೆ ಬೈಕಿನಲ್ಲಿ ಹೊರಟಿದ್ದರು. ಕಟೀಲು ಚರ್ಚ್ ಬಳಿ ಪ್ರಶಾಂತ ಚಲಾಯಿಸುತ್ತಿದ್ದ ಬಸ್ಸು, ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ದಂಪತಿಗಳಿಬ್ಬರ ಕಾಲುಗಳಿಗೆ ಗಂಭೀರ ಗಾಯಗಳಾದವು. ಅವರನ್ನು ಸ್ಥಳೀಯರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು.ಬೈಕಿಗೆ ಡಿಕ್ಕಿ ಹೊಡೆದ ಬಸ್ಸು ಮುಂದಕ್ಕೆ ಚಲಿಸಿ, ಮಾರಡ್ಕ ಮಹಮ್ಮಾಯೀ ದೇವಸ್ಥಾನದ ಬಳಿ ಕಣಿವೆಗೆ ಪಲ್ಟಿ ಹೊಡೆದು ಬಿತ್ತು. ಸ್ಥಳೀಯರು ಬಸ್ಸಿನ ಬಳಿ ಬರುತ್ತಿದ್ದಂತೆ ಬಿದ್ದ ಬಸ್ಸಿನ ಒಳಗಿನಿಂದ ಹೊರಬಂದ ಪ್ರಶಾಂತ್ ಒಳಗಡೆ ಮಕ್ಕಳಿದ್ದಾರೆ ಎಂದು ಸುಳ್ಳು ಹೇಳಿದ. ಸ್ಥಳೀಯರು ಬಸ್ಸಿನೊಳಗಡೆ ಪ್ರಯಾಣಿಕರಿದ್ದರೆಂದು ಒಳಗಡೆ ಹುಡುಕುವ ಹೊತ್ತಿಗೆ ಓಡಿ ತಪ್ಪಿಸಿಕೊಂಡ ಪ್ರಶಾಂತ್ ಬೆಳ್ಮಣ್ ಕಡೆ ಹೋದ.ಬಸ್ಸು ಪಲ್ಟಿ ಆದ ಸ್ಥಳದಲ್ಲಿ ದೊರೆತ ಮೊಬೈಲು ಫೋನಿನ ಆಧಾರದಲ್ಲಿ ಪ್ರಶಾಂತನನ್ನು ಪೋಲೀಸರು ಗುರುತಿಸಿದರು. ಅಷ್ಟು ಹೊತ್ತಿಗೆ ಬೆಳ್ಮಣ್ ಬಳಿ ಇಂಡಿಕಾ ಕಾರೊಂದಕ್ಕೆ ಕೀ ಹಾಕಿ ಸ್ಟಾರ್ಟ್ ಮಾಡಲು ಪ್ರಯತ್ನಿಸುತ್ತಿದ್ದ ಪ್ರಶಾಂತನನ್ನು ಹಿಡಿದ ಬಸ್ಸು ಸಿಬಂದಿಗಳು ಬಜಪೆ ಪೋಲಿಸು ಠಾಣೆಗೆ ತಂದೊಪ್ಪಿಸಿದರು. ಆತನ ಕೈಯಲ್ಲಿ ಒಂದಷ್ಟು ಕೀಗೊಂಚಲುಗಳಿದ್ದವು!ಮಾನಸಿಕವಾಗಿ ಸ್ವಲ್ಪ ಅಸ್ವಸ್ಥನಾಗಿರುವ ಪ್ರಶಾಂತ್ ಈ ತನಕ ಮನೆಯಲ್ಲಿ ಗಲಾಟೆ ಮಾಡುತ್ತಿದ್ದು, ಸೋಮವಾರ ಸಾರ್ವಜನಿಕವಾಗಿ ಹಾವಳಿಯಿಟ್ಟಿದ್ದಾನೆ. ಬಜಪೆ ಪೋಲೀಸರು ಕೇಸು ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.

1 comment:

shivu.k said...

ಮಹೇಶಣ್ಣ
ದಂಪತಿಗಳಿಗೆ ಗಂಭೀರ ಗಾಯಗಳಾಗಿದ್ದು ಮಾತ್ರ ದುರಂತ.