Sunday, December 7, 2008

ಸುಖಾನಂದನ ನೆನೆದು







ಸುಖಾನಂದ ಶೆಟ್ಟಿ!
2006ರ ಡಿಸೆಂಬರ್ 1ರಂದು ಬೆಳಿಗ್ಗೆ ಹತ್ತು ಗಂಟೆಯ ಹೊತ್ತಿಗೆ ಮಂಗಳೂರು ಕುಳಾಯಿಯ ಮಾರ್ಬಲ್ ಟ್ರೇಡ್ ಬಳಿ ತನ್ನ ಕ್ವಾಲಿಸ್ನಿಂದ ಇಳಿಯುತ್ತಿರುವಾಗ ಪಾತಕಿ ಮುಲ್ಕಿ ರಫೀಕ್ ಮತ್ತಾತನ ಹಂತಕರ ಗ್ಯಾಂಗ್ ತಲವಾರುಗಳಿಂದ ಕತ್ತರಿಸಿ ಹಾಕಿ ಪರಾರಿಯಾಯಿತಲ್ಲ, ಆವಾಗ ಆತನನ್ನು ಮಂಗಳೂರಿನ ಎ.ಜೆ.ಆಸ್ಪತ್ರೆಗೆ ಕರೆದೊಯ್ಯಲಾಯಿತು. ಹಾದಿಯಲ್ಲಿ ಸಾವಿನೆಡೆಗೆ ಸಾಗುತ್ತಿರುವಾಗಲೇ ಆತ ಅಂದನಂತೆ; ನನ್ನನ್ನು ಒಮ್ಮೆ ಬದುಕಿಸಿ, ಆಮೇಲೆ ಅವರನ್ನು ನಾನು ನೋಡಿಕೊಳ್ಳುತ್ತೇನೆ. ಆದರೆ ಆತ ಬದುಕಲಿಲ್ಲ. ಬದುಕಿದ್ದರೆ ಹಂತಕರಲ್ಲಿ ಅನೇಕರು ಅಂಗವಿಕಲರಾಗುತ್ತಿದ್ದರು!
ಆತ ಮುಲ್ಕಿಯಲ್ಲಿ ಥೇಟು ಸಿನಿಮಾ ಹೀರೋ ಥರ ಕ್ವಾಲಿಸ್ ಕಾರಿನಲ್ಲಿ ಬಂದಿಳಿಯುತ್ತಿದ್ದ. ಇಳಿದ ಕೂಡಲೇ ಸುತ್ತಲೂ ಜನ ಸೇರುತ್ತಿದ್ದರು. ಯಾರೋ ಒಬ್ಬ ಹುಡುಗಿಯನ್ನು ಚುಡಾಯಿಸಿದವನನ್ನು ಪೊಲೀಸರು ಹಿಡಿದು ಕೇಸೇ ಹಾಕದೆ ಹಾಗೆಯೇ ಬಿಟ್ಟು ಬಿಟ್ಟರು ಅಂತ ಗೊತ್ತಾದ ಕೂಡಲೇ ನೇರ ಸ್ಟೇಷನ್ ಮುಂದೆ ನಿಂತು ಪ್ರತಿಭಟನೆಗೆ ನಿಲ್ಲುತ್ತಿದ್ದ. ನೋಡುನೋಡುತ್ತಿದ್ದಂತೆ ಒಂದು ಗಂಟೆಯೊಳಗೆ ಐನೂರು ಮಂದಿ. ನಿಮಗೆ ಗೊತ್ತಿರಲಿ; ನೂರು ಮಂದಿಯನ್ನು ಅದೂ ಪೊಲೀಸ್ ಠಾಣೆಯ ಮುಂದೆ ಸೇರಿಸುವುದೆಂದರೆ ಸುಮ್ಮನೆ ಮಾತಲ್ಲ. ಆ ಕಾರಣಕ್ಕಾಗಿಯೇ ಅನೇಕ ಹುಡುಗಿಯರು ಪುಂಡ ಹುಡುಗರ ಕೀಟಲೆ ಜಾಸ್ತಿಯಾದಾಗ ಸುಖಾನಂದನಿಗೆ ಫೋನು ಮಾಡಿ ಸಹಾಯ ಕೇಳುತ್ತಿದ್ದರು.
ಖಡಕ್ ಮಾತು, ನೇರ ನುಡಿ, ತುಂಬ ಸಪೂರವಾದರೂ ಮಹಾ ತಾಕತ್ತಿನ ದೇಹ, ಆಕರ್ಷಕ ವ್ಯಕ್ತಿತ್ವ, ಶುಭ್ರ ಮನಸ್ಸು, ಸದಾ ಹಾಸ್ಯ, ಲವಲವಿಕೆಯ ಕಾರಣಗಳಿಗಾಗಿ ಒಮ್ಮೆ ಸಂಪರ್ಕಕ್ಕೆ ಬಂದರೆ ಅಭಿಮಾನಿಯಾಗಿ, ಬೆಂಬಲಿಗನಾಗಿ ಮಾಡುವಂತಹ ಶಕ್ತಿ ಸುಖಾನಂದನಿಗಿತ್ತು. ಮುಲ್ಕಿ ನಗರ ಪಂಚಾಯತ್ ನ ಏಕೈಕ ಬಿಜೆಪಿ ಸದಸ್ಯನಾಗಿದ್ದ ಈತ ಸಭೆಗೆ ಹಾಜರಾದರೆ ಮಾತ್ರ ವರದಿಗಾರರಿಗೆ ಸುದ್ದಿ. ಇಲ್ಲದಿದ್ದರೆ ಸಮಸ್ಯೆಗಳ ಬಗ್ಗೆ ಅಲ್ಲಿ ಧ್ವನಿಯೇ ಇರಲಿಲ್ಲ.
ಬದುಕಿದ್ದರೆ ಆತ ಮುಡುಬಿದ್ರೆ ಕ್ಷೇತ್ರಕ್ಕೆ ಶಾಸಕನಾಗಿರುತ್ತಿದ್ದ.
ಮೊನ್ನೆ ಒಂದು ತಾರೀಕಿಗೆ ಆತ ಇಲ್ಲವಾಗಿ ಎರಡು ವರುಷವಾಯಿತು. ಈತನ ಶವಯಾತ್ರೆಯಲ್ಲಿ ಹತ್ತು ಸಾವಿರದಷ್ಟು ಮಂದಿ ಭಾಗವಹಿಸಿದ್ದರು. ಪೊಲೀಸರು ವಿನಾಕಾರಣ ಗೋಲೀಬಾರ್ ಮಾಡಿ ದಿನೇಶ್ ಮತ್ತು ಪ್ರೇಮ್ ಎಂಬವರ ಸಾವಿಗೆ ಕಾರಣವಾಗಿದ್ದರು.
ಇವತ್ತಿಗೂ ದಿನೇಶ್ ಮನೆಯವರಿಗೆ ಗೋಲೀಬಾರ್ ಬಗ್ಗೆ ಛಾರ್ಜ್ ಶೀಟ್ ಹಾಕದ ಕಾರಣ ವಿಮೆ ಸಿಕ್ಕಿಲ್ಲ. ಬಿಜೆಪಿಯ ಯಾವ ನಾಯಕನೂ ಇತ್ತ ತಲೆ ಹಾಕುತ್ತಿಲ್ಲ. ಅಲ್ಲಿ ಮಾನಂಪಾಡಿಯ ಸುಖಾನಂದನ ಮನೆಯಲ್ಲಿ ಬಾಗಿಲಿಗೆ ಬೀಗ ಹಾಕಿ ವರುಷ ಎರಡು ಕಳೆದಿದೆ. ಅಲ್ಲಿ ಮೌನ ಬಿಟ್ಟು ಮತ್ತಾರೂ ಇಲ್ಲ.
ಆತನಿದ್ದಾಗ ಮುಲ್ಕಿಗೇ ಒಂದು ಕಳೆಯಿದ್ದಂತೆ ಇತ್ತು. ಆತ ಮತ್ತೆ ಮತ್ತೆ ನೆನಪಾಗುತ್ತಿದ್ದಾನೆ.
ಸುಖಾನಂದನಿಗೆ ನುಡಿ ನಮನ.

6 comments:

shivu.k said...

ಸುಖಾನಂದರಿಗೆ ನನ್ನದೊಂದು ನಮನ. ಅವರ ಅತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಬೇಡುತ್ತೇನೆ.

ಮಹೇಶ್ ಪುಚ್ಚಪ್ಪಾಡಿ said...

ನುಡಿನಮನ...

ವಿನಾಯಕ ಭಟ್ಟ said...

ಸುಖಾನಂದ ಬದುಕಿದ್ದಿದ್ದರೆ ಆರೋಪಿಗಳಲ್ಲಿ ಆನೇಕರು ಅಂಗವಿಕಲರಾಗುತ್ತಿದ್ದರು!
ಆತ ಸತ್ತಿದ್ದರಿಂದ ಇಬ್ಬರು ಆರೋಪಿಗಳು(ಮುಲ್ಕಿ ರಫೀಕ್, ಆತಿಕ್ ಯಾನೆ ಬುಲೆಟ್ ಸುಧೀರ್)ಎನ್ ಕೌಂಟರ್ ನಲ್ಲಿ ಸಾಯಬೇಕಾಯಿತು!
ಸುಖಾನಂದ ನನಗೂ ಪರಿಚಿತನಾಗಿದ್ದ. ಬದುಕಿದ್ದಿದ್ದರೆ ಬಹುಶಃ ಮುಂದೊಂದು ದಿನ ಆತ ಮುಲ್ಕಿ-ಮೂಡುಬಿದಿರೆ ಶಾಸಕನಾಗುತ್ತಿದ್ದ!

Unknown said...

namminda tumbalaarada nasta

ರಾಧಾಕೃಷ್ಣ ಆನೆಗುಂಡಿ. said...

ಇದಪ್ಪ ಬರಹ.......... ಮತ್ತೆ ಹಳೆಯ ಮಂಗಳೂರಿನ ಬೀದಿ ಕಥೆಗಳು ಬರೆದೆ ಬಿಡು....

Harisha - ಹರೀಶ said...

ಒಳ್ಳೆಯವರಿಗೆ ಇದು ಕಾಲವಲ್ಲ ಎನ್ನಲು ಮತ್ತೊಂದು ಉದಾಹರಣೆ....