Thursday, January 28, 2010
ವಾಲಿಕುಂಜದ ಸೊಬಗು
Monday, January 4, 2010
ಬಪ್ಪನಾಡು, ಹರಿಕ್ರಷ್ಣ ಪುನರೂರು ಮತ್ತು ಅಶ್ವತ್ಥ್
ಅವತ್ತು ಕಾರ್ಯಕ್ರಮಕ್ಕೆ ಮುಂಚೆ ಹರಿಕ್ರಷ್ಣ ಪುನರೂರು ಅಶ್ವತ್ಥರನ್ನು ಬಪ್ಪನಾಡು ಕ್ಷೇತ್ರಾದ್ಯಂತ ಕರೆದೊಯ್ದರು. ರಥ ಹತ್ತಿಸಿದರು. ಕ್ಷೇತ್ರದ ಸಾಮರಸ್ಯದ ಬಗ್ಗೆ ಹೇಳಿದರು. ಆ ಸಂದರ್ಭ ಸಂಜೆ ಕಳೆದು ಕತ್ತಲು ಹುಟ್ಟಿತ್ತು. ಅಲ್ಲೇ ಇದ್ದ ನನ್ನ ಕೆಮರಾದಲ್ಲಿ ಒಂದಿಷ್ಟು ಫೊಟೋ ತೆಗೆಯಲು ಸಾಧ್ಯವಾಗಿತ್ತು. ಅಶ್ವತ್ಥ್ ರಥ ಹತ್ತಿ, ಅಲ್ಲೆಲ್ಲ ಸುತ್ತಿ ಖುಷಿಯಿಂದ ಉಲ್ಲಾಸದಿಂದ ಹತ್ತಾರು ಹಾಡುಗಳನ್ನು ಹಾಡಿ ರಂಜಿಸಿದ್ದರು. ಕೂತೇ ತಾನೇ ಹಾರ್ಮೋನಿಯಂ ನುಡಿಸುತ್ತ ಹಾಡಿದ್ದನ್ನು ಸಾವಿರಾರು ಮಂದಿ ಕೇಳಿ ಆಸ್ವಾದಿಸಿದ್ದರು.
Saturday, December 5, 2009
ಬಳೆಗಾರ
ಭಾಗ್ಯದಾ ಬಳೆಗಾರ ಹೋಗಿ ಬಾ ತವರೀಗೆಹಾಡು ಕೇಳದವರಾರು?ಆದರೆ ಈಗ ಬಳೆ ತೊಡುವವರೂ ಕಡಿಮೆಯಾಗುತ್ತಿದ್ದಾರೆ!ಸಾಮಾನ್ಯವಾಗಿ ಹುಡುಗಿಯರು, ಮಹಿಳೆಯರು ಇಡುವ ಕುಂಕುಮ, ಸರ, ಕಿವಿಯೋಲೆ, ಮೂಗುತಿ, ಜಡೆಗಳೆಲ್ಲ ಇಲ್ಲವಾಗುತ್ತಿರುವಂತೆಯೇ ಬಳೆ ಇಡುವವರೂ ವಿರಳವಾಗುತ್ತಿದ್ದಾರೆ. ಬಂಗಾರದ ಬೆಲೆ ಜಾಸ್ತಿಯಾಗುತ್ತಿದ್ದರೂ ಬಳೆ ಮಾಡಿಸುವವರು ಹೆಚ್ಚು ಇದ್ದಾರಾದರೂ ತಮ್ಮ ಕೈಗಳಿಗೆ ತೊಡುವವರು ಕಡಿಮೆಯಾಗುತ್ತಿದ್ದಾರೆ.ಮಣ್ಣಿನ, ಗಾಜಿನ ಬಳೆಗಳು ಸಾಮಾನ್ಯವಾಗಿ ಇರುತ್ತಿದ್ದವು. ದೇವೀ ದೇಗುಲಗಳಲ್ಲಿ ಇವುಗಳನ್ನು ಪ್ರಸಾದವಾಗಿ ಕೊಡುವ ಕ್ರಮವೂ ಇತ್ತು. ಇತ್ತೀಚಿಗೆ ಎಲ್ಲವೂ ಪ್ಲಾಸ್ಟಿಕ್‌ಮಯವಾದಂತೆ ಪ್ಲಾಸ್ಟಿಕ್‌ನ, ಮರದ ಬಳೆಗಳೂ ಬರತೊಡಗಿವೆ. ಬೆಳ್ಳಿ, ಚಿನ್ನದ ಬಳೆಗಳಿಗೂ ಬೇಡಿಕೆ ಇದ್ದು, ಜ್ಯುವೆಲ್ಲರ್‍ಸ್‌ಗಳಲ್ಲಿ ಕೊಂಡುಕೊಳ್ಳಬಹುದಾಗಿದೆ. ಗಂಡಸರೂ ಕಡಗವನ್ನು(ಬಳೆ) ಹರಕೆ, ಗೌರವ, ಆರೋಗ್ಯದ ಸಂಕೇತವಾಗಿ ತೊಟ್ಟುಕೊಳ್ಳುತ್ತಾರೆ. ದರ್ಶನಪಾತ್ರಿಗಳು, ಭೂತಕೋಲ ಕಟ್ಟುವ ನಲಿಕೆಯವರು, ದೇವಸ್ಥಾನಗಳಲ್ಲಿ ದೇವರ ಮೂರ್ತಿ ಹೊರುವವರು ಕಡಗ, ಬಳೆಯನ್ನು ತೊಟ್ಟುಕೊಳ್ಳುವುದನ್ನು ಕಾಣಬಹುದಾಗಿದೆ.ಹೆಚ್ಚಾಗಿ ಹೆಂಗಸರೇ ಬಳೆ ತೊಡುತ್ತಾರೆ. ಕೆಲವು ಗಂಡಸರು ತನ್ನ ಗಂಡಸುತನವನ್ನು ಪ್ರತಿಪಾದಿಸುತ್ತ, ಕೋಪದಿಂದ ಹೇಳುವುದುಂಟು; ನಾನೇನು ಬಳೆತೊಟ್ಟುಕೊಂಡಿಲ್ಲ ಅಂತ!ಸಾಮಾನ್ಯವಾಗಿ ಸಂತೆಗಳಲ್ಲಿ, ಜಾತ್ರೆಗಳಲ್ಲಿ, ದೇವಸ್ಥಾನಗಳ ಹತ್ತಿರ ಬಳೆ ಮಾರುವ ಅಂಗಡಿಗಳು, ಮಾರುವವರು ಸಿಗುತ್ತಾರೆ. ಬಳೆಗಾರರು ಅಂತಲೇ ಉಪಜಾತಿ ಇದೆ. ಹಿಂದೆಲ್ಲ ಮನೆಮನೆಗಳಿಗೆ ಬಂದು ಮಾರಾಟ ಮಾಡುವವ ಬಳೆಗಾರರು ಕಂಡುಬರುತ್ತಿದ್ದರು. ಇತ್ತೀಚಿಗೆ ಇಂತಹ ಬಳೆಗಾರರು ಸಿಗುವುದೇ ಇಲ್ಲ ಎಂಬಷ್ಟು ಅಪರೂಪವಾಗಿದ್ದಾರೆ. ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಣಸಿಗುವುದೇ ಇಲ್ಲ. ಮೂಲ್ಕಿಯ ಲಿಂಗಪ್ಪಯ್ಯಕಾಡಿನ ಬಳಿ ಉತ್ತರಕನ್ನಡದ ಮಂದಿ ಸಾವಿರಗಟ್ಟಲೆ ಸಂಖ್ಯೆಯಲ್ಲಿದ್ದಾರೆ. ಅವರು ಬಡವರಾದರೂ ಮಣ್ಣು, ಪ್ಲಾಸ್ಟಿಕ್ ಮುಂತಾದವುಗಳಿಂದ ತಯಾರಿಸಲ್ಪಟ್ಟ ಸರ, ಬಳೆ, ಕಿವಿಯೋಲೆ, ಮೂಗುತಿಗಳನ್ನು ತೊಟ್ಟುಕೊಳ್ಳುವುದನ್ನು ಕಾಣಬಹುದು. ಈ ಪರಿಸರದಲ್ಲಿ ಇತ್ತೀಚಿಗೆ ಕಂಡು ಬಂದ ಬಳೆಗಾರ ನನ್ನ ಮೂರನೆಯ ಕಣ್ಣಿಗೆ ಕಂಡದ್ದು ಹೀಗೆ!
Sunday, October 4, 2009
ಕೋಣ ಕೊಳ್ಳುವವರಿಲ್ಲ!
ಮಹಿಷ, ರಕ್ತಾಕ್ಷ ಎಂದೆಲ್ಲ ಕರೆಯಲ್ಪಡುವ ಕೋಣಗಳನ್ನು ಕೇಳುವವರಿಲ್ಲ!
ಕಂಬಳದ ಸಂದರ್ಭ ಬಿಟ್ಟರೆ ಕೋಣಗಳು ಇತ್ತೀಚಿನ ದಿನಗಳಲ್ಲಿ ಗದ್ದೆಗಳಿಂದಲೇ ದೂರವಾಗುತ್ತವೆ. ಇನ್ನು ಹಟ್ಟಿಯಲ್ಲಿ ಕಂಡು ಬರುವುದಾದರೂ ಹೇಗೆ?ಕೊಂಚ ಬುದ್ದಿ ಮಂದ ಎಂದು ಹೇಳಲ್ಪಡುವ ಕೋಣಗಳು ಗದ್ದೆ ಉಳುವುದಕ್ಕೆ ಬಳಸಲ್ಪಡುವುದು ಜಾಸ್ತಿ. ಆದರೆ ಇತ್ತೀಚಿನ ದಿನಗಳಲ್ಲಿ ಭತ್ತದ ಕೃಷಿ ಬಿಟ್ಟು, ಕಂಗು, ತೆಂಗು, ರಬ್ಬರು ಅಂತ ತೋಟಗಳೆಡೆಗೆ ಬದಲಾವಣೆ ಹೊಂದಿದ ಮೇಲೆ ಕೋಣಗಳ ಮಹತ್ವ ಹೊರಟು ಹೋಗತೊಡಗಿತು. ಭತ್ತದ ಕೃಷಿ ಮಾಡುವ ಮಂದಿಯೂ ಹದಗೊಳಿಸಲು ಟಿಲ್ಲರ್, ಟ್ರಾಕ್ಟರ್‌ಗಳಂತಹ ಯಂತ್ರ ಗಳನ್ನು ಗದ್ದೆಗಳಿಗೆ ಇಳಿಸಿದ ಮೇಲೆ ಕೋಣಗಳಿಗೆಲ್ಲಿದೆ ಕೆಲಸ?ಪರಿಣಾಮ ಹತ್ತು ವರುಷಗಳ ಹಿಂದೆ ದಿನವೊಂದಕ್ಕೆ ಹತ್ತು ಹದಿನೈದು ಜೋಡಿ ಕೋಣಗಳನ್ನು ಮಾರುತ್ತಿದ್ದ ವ್ಯಾಪಾರಿ ಈಗ ತಿಂಗಳಿಗೆ ಐದು ಜೋಡಿಗಳನ್ನು ಮಾರಿದರೆ ದೊಡ್ಡದು. ಹಿಂದೆ ದಿನವೊಂದಕ್ಕೆ ಹತ್ತರಿಂದ ಹದಿನೈದು ಜೋಡಿ ಕೋಣಗಳು ಮಾರಲ್ಪಡುತ್ತಿದ್ದರೆ ಈಗ ತುಂಬ ಕಡಿಮೆ. ಮಾರ್ಚ್, ಎಪ್ರಿಲ್, ಮೇ, ಜೂನ್ ತಿಂಗಳಲ್ಲಿ ಹತ್ತಿಪ್ಪತ್ತು ಜೋಡಿ ಮಾರಲ್ಪಡುತ್ತವೆ. ಉಳಿದ ತಿಂಗಳು ನಾಲ್ಕೈದು ಹೋದರೇ ಹೆಚ್ಚು ಅನ್ನುತ್ತಾರೆ ವ್ಯಾಪಾರಿಗಳು. ಜೋಡಿ ಕೋಣಗಳಿಗೆ ೨೦ರಿಂದ ೩೦ಸಾವಿರ ರೂಪಾಯಿಗಳಷ್ಟು ಬೆಲೆಯಿರುತ್ತದೆ. ಕಂಬಳದ ಕೋಣಗಳಾದರೆ ಒಂದಕ್ಕೇ ಇಪ್ಪತ್ತೈದು ಸಾವಿರ ರೂಪಾಯಿ ಇರುವುದೂ ಇದೆ. ಕೋಣಗಳಲ್ಲಿ ಘಟ್ಟದ(ಮಲೆನಾಡು) ಕೋಣಗಳು, ಊರ ಕೋಣಗಳು ಅಂತಿವೆ. ಘಟ್ಟದ ಕೋಣಗಳು ಊರಿನ(ಕರಾವಳಿಯ) ಕೋಣಗಳಷ್ಟು ಚಲಾಕು ಅಲ್ಲ. ಹಲ್ಲುಗಳು ಮೂಡಿದ ಬಳಿಕ ಕೋಣಗಳನ್ನು ಉಳಲು ಆರಂಭಿಸುತ್ತಾರೆ. ಆಗ ಅವು ಜೋರಾಗದಂತೆ ಅವುಗಳ ಬೀಜ ಕೊಟ್ಟ ಗುದ್ದುವುದು ಅಂತಿದೆ. ಪಳಗಿಸಲು ಇದು ಸಹಾಯಕಾರಿ.ಓಟದ(ಕಂಬಳ) ಕೋಣಗಳನ್ನು ಮಳೆಗಾಲದಲ್ಲಿ ಒಂದೆರಡು ಸಲ ಮಾತ್ರ ಗದ್ದೆ ಉಳಲು ಬಳಸುತ್ತಾರೆ. ಈ ಕೋಣಗಳನ್ನು ಓಟಕ್ಕೆ ಎಣ್ಣೆ ಹಚ್ಚಿ, ಹುರುಳಿ ಕೊಟ್ಟು, ತರಬೇತಿ ನೀಡುತ್ತಾರೆ. ಇವುಗಳನ್ನು ನೋಡಲಿಕ್ಕೆಂದೇ ಜನ ನೇಮಿಸುತ್ತಾರೆ. ಕಂಬಳದ ಕೋಣಗಳು ಗೆಲ್ಲುವುದು ಆ ಯಜಮಾನನಿಗೆ ಪ್ರತಿಷ್ಟೆಯ ಸಂಗತಿ. ಉಳುವ ಕೋಣಗಳಿಗೆ ಹುರುಳಿ, ಗಂಜಿ ಕೊಟ್ಟು ತಯಾರು ಮಾಡುತ್ತಾರೆ.ಆದರೆ ಕೋಣಗಳನ್ನು ಕೊಳ್ಳುವವರಿಲ್ಲದ, ಪಾಲಿಸುವವರೂ ಇಲ್ಲದ ದಿನಗಳು ಬಂದಿವೆ. ಕಂಬಳಕ್ಕಷ್ಟೇ ಸೀಮಿತವಾಗುತ್ತಿರುವ ಕೋಣಗಳು ಕೃಷಿಯ ಬದಲು ಮೋಜಿನ ಕ್ರೀಡೆಯ ಪ್ರಾಣಿಗಳಾಗುತ್ತಿರುವುದು ವಾಸ್ತವ.
Saturday, October 3, 2009
ಮನೆಯೊಳಗಿಲ್ಲ ಒಲೆ, ಹೊರಗೆ ಹೊಗೆ
ಅಲ್ಲಿ ದೂರದಲ್ಲೆಲ್ಲೋ ಹೊಗೆ ಕಾಣಿಸುತ್ತಿದ್ದರೆ ಮನೆಯಿದೆ ಅಂತ ನಿರ್ಜನ ಪ್ರದೇಶದಲ್ಲಿ, ಗುಡ್ಡ ಗಾಡಿನಲ್ಲಿ, ಕಾಡಿನಲ್ಲಿ ನಡೆದುಕೊಂಡು ಹೋಗುತ್ತಿದ್ದ ವರು ಲೆಕ್ಕಾಚಾರ ಹಾಕುತ್ತಿದ್ದರು. ಮನೆಯಿದ್ದರೆ ಅಲ್ಲಿ ಮಂದಿಯಿರುತ್ತಾರೆ. ಅವರಿದ್ದರೆ ಅಡುಗೆಯ ಒಲೆಯೋ, ಬಚ್ಚಲಿನ ಒಲೆಯೋ, ಭತ್ತ ಕಾಯಿಸುವ ಒಲೆಯೋ ಉರಿಯುತ್ತಲಿರುತ್ತದೆ. ಒಲೆ ಯಿಲ್ಲದ ಮನೆಯಿದ್ದರೆ ಅದು ಅಚ್ಚರಿಯ ಸಂಗತಿಯೇ! ಮನೆಯೇ ಇಲ್ಲದಿದ್ದರೂ, ಕಟ್ಟಿಕೊಂಡಿರುವ ಜೋಪಡಿ ಪಕ್ಕದಲ್ಲೊಂದು ಒಲೆ ಉರಿಯುತ್ತಿರುತ್ತಿದೆ.ಆದರೆ ಈಗ ಒಲೆಗಳಿಲ್ಲದ, ಹೊಗೆಯೂ ಇಲ್ಲದ ದಿನಗಳು ಬಂದಿವೆ!ಈಗ ಸೀಮೆ ಎಣ್ಣೆ ಸ್ಟೌವ್ಗಳು ಕೂಡ ಹಳತಾಗಿವೆ. ಗ್ಯಾಸ್ಹಂಡೆಗಳು ಮನೆಗಳನ್ನು ಆವರಿಸಿವೆ. ಪೇಟೆಗಳ ಮನೆಗಳಿಗೆ ವಿದ್ಯುತ್ ಒಲೆ ಬಂದಿದೆ. ಸೌರಶಕ್ತಿಯ ಒಲೆಯೂ ಬಂದಿದೆ. ಆದರೆ ಕಟ್ಟಿಗೆಯನ್ನು ಉಪಯೋಗಿಸಿ ಬೇಯಿಸುವ, ಕಾಯಿಸುವ ಒಲೆ ಇಲ್ಲವಾಗುತ್ತಿದೆ.ಕಟ್ಟಿಗೆಯ ಜೊತೆಗೆ ಸೆಗಣಿಯ ತಟ್ಟಿ, ಒಣಗಿಸಿದ ಬೆರಣಿಯಿಂದ ಬೆಂಕಿ ಉರಿಸಲಾಗುತ್ತಿತ್ತು. ಕಡಿಮೆ ಕಟ್ಟಿಗೆ ಅಥವಾ ಮರದ ಚೂರುಗಳನ್ನು ಬಳಸಿ, ಪೇಪರ್, ಕಸ ಗಳನ್ನು ಬಳಸಿ ಬೆಂಕಿಯಿಂದ ಕಾಯಿಸುವ, ಬೇಯಿಸುವ ಒಲೆಗಳೂ ಬಂದಿದ್ದವು. ಆದರೂ ಅವು ಕಟ್ಟಿಗೆಯಷ್ಟು ಜನಪ್ರಿಯವಾಗಲಿಲ್ಲ. ನಗರಗಳಲ್ಲಿ ಕಟ್ಟಿಗೆ ಒಲೆಗಳನ್ನು ಬಳಸುವುದು ಕಷ್ಟವೇ. ಆದರೆ ಇತ್ತೀಚಿಗೆ ಅಭಿವೃದ್ಧಿಯ ವೇಗಕ್ಕೆ ಹಳ್ಳಿಗಳಲ್ಲೂ ಸೌದೆ ಉರಿಸುವ ಒಲೆಗಳು ಕಾಣೆ ಯಾಗುತ್ತಿವೆ. ಅಲ್ಲಿಗೆ ಗ್ಯಾಸ್ ಸ್ಟೌವ್ ಬಂದು ಕೂರುತ್ತಿದೆ. ಸೂರ್ಯಶಕ್ತಿಯ ಒಲೆಗಳು ನೀರು ಬಿಸಿ ಮಾಡಲು ವಿದ್ಯುತ್ಗೆ ಓಕೆ. ಆದರೆ ಅಡುಗೆಗೆ ಮಳೆಗಾಲಗಳಲ್ಲಿ ಕಷ್ಟ. ಇನ್ನು ವಿದ್ಯುತ್ ಒಲೆಗಳು ಹೆಚ್ಚು ವೆಚ್ಚವನ್ನು ಬಯಸುತ್ತವೆ. ಕಟ್ಟಿಗೆಗೆ ಪರಿಸರ ನಾಶವಾಗುತ್ತದೆ ಎಂಬುದು ಹೌದಾದರೂ ಈ ಒಲೆಗಳ ಮುಂದಿನ ಸಂಭ್ರಮ ಅನುಭವಿಸಿದವರಿ ಗಷ್ಟೇ ಗೊತ್ತು.ಗಡಗಡ ನಡುಗುವ ಚಳಿಗೆ ಬೆಂಕಿ ಹಾಕಿ ಒಲೆ ಮುಂದೆ ಕೂತರೆ ವಾಹ್ ಪರಮಾದ್ಭುತ ಸುಖ.ಕೆಲವರು ಹೇಳುವುದುಂಟು ಕಟ್ಟಿಗೆ ಒಲೆಯಲ್ಲಿ ಮಾಡುವ ಚಹಾ, ಕಾಫಿಯ ಸ್ವಾದಿಷ್ಟ, ರುಚಿಯೇ ಬೇರೆ ಅಂತ. ಒಲೆ ಮುಂದೆ ಕೂತು ಹುಹೂಹೂ ಅಂತ ಊದುಕೊಳವೆಯಿಂದ ಗಾಳಿ ಊದೀ ಊದಿ ಕೆಂಡ ದಿಂದ ಹೊಗೆಯನ್ನೂ, ಬೆಂಕಿಯನ್ನೂ ಹುಟ್ಟಿಸಿ, ಅದರಲ್ಲಿ ಪಾತ್ರೆಯಿಟ್ಟು ಹಾಲನ್ನೋ, ಅನ್ನವನ್ನೋ, ಸಾರನ್ನೋ, ಪಾಯಸವನ್ನೋ ಮಾಡುವ ರೀತಿ ಇನ್ನು ನೆನಪುಗಳು ಮಾತ್ರ. ಸಣ್ಣ ಒಲೆ, ಮಧ್ಯಮ ಒಲೆ, ದೊಡ್ಡ ಒಲೆಗಳನ್ನು ಕಲ್ಲು ಇಟ್ಟು ಕಟ್ಟಿ, ಅದಕ್ಕೆ ಸೆಗಣಿಯನ್ನೋ ಸಿಮೆಂಟನ್ನೋ ಬಳಿದು ರಚಿಸುವ ಕಾಯಕ ಗ್ರಾಮೀಣ ಬದುಕು ದೂರ ವಾದಂತೆ ಕಡಿಮೆಯಾಗುತ್ತಲೇ ಹೋಗುತ್ತಿದೆ.ಫೋನು, ಮೊಬೈಲು, ಇಂಟರ್ನೆಟ್ಗಳೆಲ್ಲ ಬಂದ ಮೇಲೆ ಓಲೆಗಳು ಕಡಿಮೆಯಾದಂತೆ, ಕಟ್ಟಿಗೆ ಒಲೆಗಳೂ ಆಧುನಿಕತೆಯ ಹೊಡೆತಕ್ಕೆ ಓಡಿ ಹೋಗುತ್ತಿವೆ
Sunday, September 27, 2009
ಕಟೀಲು ಕ್ಷೇತ್ರದಲ್ಲಿ ನವರಾತ್ರಿ ಮತ್ತು ಸಾವಿರ ಹುಲಿಗಳು
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ನವರಾತ್ರಿ ಉತ್ಸವ ವೈಭವದಿಂದ ನಡೆಯಲು ಕಾರ್ಣಿಕ ದೇವೀ ಕ್ಷೇತ್ರ ಎಂಬುದು ಒಂದು ಕಾರಣವಾದರೆ, ಭಕ್ತರಿಂದ ನೀಡಲ್ಪಟ್ಟ ಸೀರೆಗಳನ್ನು ಲಲಿತಾ ಪಂಚಮಿ ದಿನ ಸಾವಿರಾರು ಮಹಿಳಾ ಭಕ್ತರಿಗೆ ಶ್ರೀ ದೇವರ ಶೇಷವಸ್ತ್ರ ನೀಡುವುದೂ ಮತ್ತೊಂದು ಕಾರಣ. ಕಟೀಲು ದೇಗುಲಕ್ಕೆ ವರುಷಕ್ಕೆ ಸುಮಾರು ೧೩ಸಾವಿರ ಸೀರೆ ಹರಕೆ ರೂಪದಲ್ಲಿ ಬರುತ್ತದೆ. ಹಿಂದೆ ಒಂದು ಸೀರೆಯನ್ನು ನಾಲ್ಕೈದು ತುಂಡು ಮಾಡಿ ಕೊಡುತ್ತಿದ್ದರು. ಈಗ ದೇಗುಲದಲ್ಲೇ ಸೀರೆ ಮಾರಾಟದ ಕೌಂಟರ್ ಮಾಡಿದ ಪರಿಣಾಮ ಹರಕೆ ರೂಪದಲ್ಲಿ ಬರುವ ಸೀರೆಗಳ ಸಂಖ್ಯೆ ಜಾಸ್ತಿಯಾಗಿದೆ. ಈಗ ಒಂದು ಸೀರೆಯನ್ನು ಎರಡು ತುಂಡು ಮಾಡಿ ರವಕೆ ಕಣ ರೂಪದಲ್ಲಿ ಒಂದು ತಿಂಗಳ ಹೆಣ್ಣು ಮಕ್ಕಳಿಂದ ಮುದುಕಿಯರವರೆಗೆ ಜಾತಿಮತ ಭೇದವಿಲ್ಲದೆ ರಾತ್ರಿ ಭೋಜನಕ್ಕೆ ಕೂತ ಸಂದರ್ಭ ಮಹಿಳಾ ಭಕ್ತರಿಗೆ ಸುವಾಸಿನಿ ಪೂಜೆಯ ನೆನಪಿನಲ್ಲಿ ನೀಡಲಾಗುತ್ತದೆ. ಎಂಟನೆಯ ದಿನ ಕಡುಬು ಮುಹೂರ್ತವನ್ನು ಅದಕ್ಕೆಂದೇ ಇರುವ ವಿಶೇಷ ದೋಣಿಯಲ್ಲಿ ಮಾಡಿ, ಮಹಾನವಮಿಯಂದು ರಾತ್ರಿ ಭಕ್ತರಿಗೆ ಕಡುಬಿನಲ್ಲೇ ಭೋಜನ ಪ್ರಸಾದ ನೀಡಲಾಗುತ್ತದೆ. ನವರಾತ್ರಿಯ ಕಾಲದಲ್ಲಿ ನಾಲ್ಕು ರಂಗದಲ್ಲಿ ಪೂಜೆಯ ಸಂದರ್ಭ ೯ ತಾಳದ ಮನೆಯವರಿಂದ ನಡೆಯುವ ಸಂಕೀರ್ತನೆ ವಿಶೇಷ.ಕಟೀಲು, ಕೊಡೆತ್ತೂರು, ಎಕ್ಕಾರು ಗ್ರಾಮಗಳಿಂದ ಹುಲಿ ವೇಷ ವೈಭವದ ಮೆರವಣಿಗೆಯಲ್ಲಿ ಬರುವುದು ದಶಕಗಳಿಂದ ನಡೆಯುತ್ತ ಬಂದಿದೆ. ಕಟೀಲು ಸಮಿತಿಯಿಂದ ತೃತೀಯ ದಿನ, ಕೊಡೆತ್ತೂರು ಸಮಿತಿಯಿಂದ ಲಲಿತಾ ಪಂಚಮಿ ಯಂದು, ಎಕ್ಕಾರಿನಿಂದ ಮೂಲಾನಕ್ಷತ್ರ ದಿನ ಹುಲಿ ಮೆರವಣಿಗೆ ಬರುವುದು ವಿಶೇಷ. ಹುಲಿವೇಷಗಳ ಜೊತೆಗೆ ವಿವಿಧ ವೇಷಗಳನ್ನೂ ಹಾಕಿಕೊಂಡು ಮೆರವಣಿಗೆಯಲ್ಲಿ ಬರುವುದನ್ನು ನೋಡಲಿಕ್ಕೆಂದೇ ಸಾವಿರಾರು ಮಂದಿ ಸೇರುತ್ತಾರೆ.ಕಷ್ಟ, ಸಮಸ್ಯೆ ಪರಿಹಾರಕ್ಕಾಗಿ, ಇಷ್ಟಾರ್ಥ ಸಿದ್ದಿಗಾಗಿ ವೇಷ ಹಾಕುತ್ತೇನೆ ಎಂದು ಹರಕೆ ಹೊತ್ತವರು ವೇಷಗಳನ್ನು ಹಾಕಿಕೊಂಡು ದೇಗುಲಕ್ಕೆ ಬಂದು ಕುಣಿದು ಹರಕೆ ತೀರಿಸಿ ಹೋಗುತ್ತಾರೆ. ಮೂರು ಗ್ರಾಮಗಳಿಂದ ಹೊರತು ಪಡಿಸಿ, ನವರಾತ್ರಿಯ ದಿನಗಳಲ್ಲಿ ಕಟೀಲಿಗೆ ಸುಮಾರು ಮುನ್ನೂರಕ್ಕೂ ಹೆಚ್ಚು ಹುಲಿ, ಕರಡಿ, ಸಿಂಹ ವೇಷಗಳ ತಂಡಗಳು ಬಂದು ಕುಣಿದು ಹೋಗುತ್ತವೆ. ಲೆಕ್ಕ ಹಾಕಿದರೆ ಕಟೀಲಿನಲ್ಲಿ ಕುಣಿದು ಹರಕೆ ತೀರಿಸುವ ಹುಲಿ ವೇಷಗಳ ಸಂಖ್ಯೆ ಒಂದು ಸಾವಿರ ದಾಟೀತು. ಶ್ರವಣಾ ನಕ್ಷತ್ರದಂದು ದೇವೀ ಸಮ್ಮುಖದಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ನಡೆಯುತ್ತದೆ.ಇವಲ್ಲದೆ ಕಟೀಲು ದೇಗುಲದಲ್ಲಿ ನವರಾತ್ರಿಯ ದಿನಗಳಲ್ಲಿ ಸಾಂಸ್ಕೃತಿಕ ಕಾರ್‍ಯಕ್ರಮಗಳು, ಯಕ್ಷಗಾನಗಳು ಜನರನ್ನು ರಂಜಿಸುತ್ತವೆ.