Saturday, December 5, 2009

ಬಳೆಗಾರ



ಭಾಗ್ಯದಾ ಬಳೆಗಾರ ಹೋಗಿ ಬಾ ತವರೀಗೆಹಾಡು ಕೇಳದವರಾರು?ಆದರೆ ಈಗ ಬಳೆ ತೊಡುವವರೂ ಕಡಿಮೆಯಾಗುತ್ತಿದ್ದಾರೆ!ಸಾಮಾನ್ಯವಾಗಿ ಹುಡುಗಿಯರು, ಮಹಿಳೆಯರು ಇಡುವ ಕುಂಕುಮ, ಸರ, ಕಿವಿಯೋಲೆ, ಮೂಗುತಿ, ಜಡೆಗಳೆಲ್ಲ ಇಲ್ಲವಾಗುತ್ತಿರುವಂತೆಯೇ ಬಳೆ ಇಡುವವರೂ ವಿರಳವಾಗುತ್ತಿದ್ದಾರೆ. ಬಂಗಾರದ ಬೆಲೆ ಜಾಸ್ತಿಯಾಗುತ್ತಿದ್ದರೂ ಬಳೆ ಮಾಡಿಸುವವರು ಹೆಚ್ಚು ಇದ್ದಾರಾದರೂ ತಮ್ಮ ಕೈಗಳಿಗೆ ತೊಡುವವರು ಕಡಿಮೆಯಾಗುತ್ತಿದ್ದಾರೆ.ಮಣ್ಣಿನ, ಗಾಜಿನ ಬಳೆಗಳು ಸಾಮಾನ್ಯವಾಗಿ ಇರುತ್ತಿದ್ದವು. ದೇವೀ ದೇಗುಲಗಳಲ್ಲಿ ಇವುಗಳನ್ನು ಪ್ರಸಾದವಾಗಿ ಕೊಡುವ ಕ್ರಮವೂ ಇತ್ತು. ಇತ್ತೀಚಿಗೆ ಎಲ್ಲವೂ ಪ್ಲಾಸ್ಟಿಕ್‌ಮಯವಾದಂತೆ ಪ್ಲಾಸ್ಟಿಕ್‌ನ, ಮರದ ಬಳೆಗಳೂ ಬರತೊಡಗಿವೆ. ಬೆಳ್ಳಿ, ಚಿನ್ನದ ಬಳೆಗಳಿಗೂ ಬೇಡಿಕೆ ಇದ್ದು, ಜ್ಯುವೆಲ್ಲರ್‍ಸ್‌ಗಳಲ್ಲಿ ಕೊಂಡುಕೊಳ್ಳಬಹುದಾಗಿದೆ. ಗಂಡಸರೂ ಕಡಗವನ್ನು(ಬಳೆ) ಹರಕೆ, ಗೌರವ, ಆರೋಗ್ಯದ ಸಂಕೇತವಾಗಿ ತೊಟ್ಟುಕೊಳ್ಳುತ್ತಾರೆ. ದರ್ಶನಪಾತ್ರಿಗಳು, ಭೂತಕೋಲ ಕಟ್ಟುವ ನಲಿಕೆಯವರು, ದೇವಸ್ಥಾನಗಳಲ್ಲಿ ದೇವರ ಮೂರ್ತಿ ಹೊರುವವರು ಕಡಗ, ಬಳೆಯನ್ನು ತೊಟ್ಟುಕೊಳ್ಳುವುದನ್ನು ಕಾಣಬಹುದಾಗಿದೆ.ಹೆಚ್ಚಾಗಿ ಹೆಂಗಸರೇ ಬಳೆ ತೊಡುತ್ತಾರೆ. ಕೆಲವು ಗಂಡಸರು ತನ್ನ ಗಂಡಸುತನವನ್ನು ಪ್ರತಿಪಾದಿಸುತ್ತ, ಕೋಪದಿಂದ ಹೇಳುವುದುಂಟು; ನಾನೇನು ಬಳೆತೊಟ್ಟುಕೊಂಡಿಲ್ಲ ಅಂತ!ಸಾಮಾನ್ಯವಾಗಿ ಸಂತೆಗಳಲ್ಲಿ, ಜಾತ್ರೆಗಳಲ್ಲಿ, ದೇವಸ್ಥಾನಗಳ ಹತ್ತಿರ ಬಳೆ ಮಾರುವ ಅಂಗಡಿಗಳು, ಮಾರುವವರು ಸಿಗುತ್ತಾರೆ. ಬಳೆಗಾರರು ಅಂತಲೇ ಉಪಜಾತಿ ಇದೆ. ಹಿಂದೆಲ್ಲ ಮನೆಮನೆಗಳಿಗೆ ಬಂದು ಮಾರಾಟ ಮಾಡುವವ ಬಳೆಗಾರರು ಕಂಡುಬರುತ್ತಿದ್ದರು. ಇತ್ತೀಚಿಗೆ ಇಂತಹ ಬಳೆಗಾರರು ಸಿಗುವುದೇ ಇಲ್ಲ ಎಂಬಷ್ಟು ಅಪರೂಪವಾಗಿದ್ದಾರೆ. ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಣಸಿಗುವುದೇ ಇಲ್ಲ. ಮೂಲ್ಕಿಯ ಲಿಂಗಪ್ಪಯ್ಯಕಾಡಿನ ಬಳಿ ಉತ್ತರಕನ್ನಡದ ಮಂದಿ ಸಾವಿರಗಟ್ಟಲೆ ಸಂಖ್ಯೆಯಲ್ಲಿದ್ದಾರೆ. ಅವರು ಬಡವರಾದರೂ ಮಣ್ಣು, ಪ್ಲಾಸ್ಟಿಕ್ ಮುಂತಾದವುಗಳಿಂದ ತಯಾರಿಸಲ್ಪಟ್ಟ ಸರ, ಬಳೆ, ಕಿವಿಯೋಲೆ, ಮೂಗುತಿಗಳನ್ನು ತೊಟ್ಟುಕೊಳ್ಳುವುದನ್ನು ಕಾಣಬಹುದು. ಈ ಪರಿಸರದಲ್ಲಿ ಇತ್ತೀಚಿಗೆ ಕಂಡು ಬಂದ ಬಳೆಗಾರ ನನ್ನ ಮೂರನೆಯ ಕಣ್ಣಿಗೆ ಕಂಡದ್ದು ಹೀಗೆ!

2 comments:

ಸಾಗರದಾಚೆಯ ಇಂಚರ said...

ಹೌದು, ನಾನು ಚಿಕ್ಕವನಿರುವಾಗ ತುಂಬಾ ಬಳೆಗಾರರು ಬರುತ್ತಿದ್ದರು
ಈಗ ಯಾರೂ ಬರುತ್ತಿಲ್ಲ
ಜನರಲ್ಲಿ ಹಳೆಯ ಸಂಸ್ಕ್ರತಿಯ ಬಗೆಗಿನ ಪ್ರೀತಿ ನಶಿಸುತ್ತಿದೆ ಎನಿಸುತ್ತಿದೆ,

ದಿನಕರ ಮೊಗೇರ said...

ಹೌದು..... ನಮ್ಮನೆಯ ಕಡೆ ಬಳೆಗಾರ ಬಂದಾಗ ನನ್ನ ಅಕ್ಕನ ಸಡಗರ ಹೇಳಲು ತೀರದು..... ಬಳೆಗಾರನಿಗೆ ಹೊರಗಡೆ ಹಾಸಿಗೆ ಹಾಸಿ, ತನ್ನ ಗೆಳತಿಯರನ್ನೆಲ್ಲಾ. ಕರೆದು ಅವರಿಗೆಲ್ಲ ಬಳೆ ಕೊಳ್ಳಲು ಹೇಳುತ್ತಿದ್ದ ದಿನ ನೆನಪಿಗೆ ಬಂತು....... ಥ್ಯಾಂಕ್ಸ್.....