Monday, March 16, 2009

ಬೈಕೊಳು ಹಾವೇ...


ಒಬ್ಬ ನಮ್ಮೂರ ಪೇಟೆಗೆ ಅರ್ಜೆಂಟಾಗಿ ಯಾವುದೋ ವಸ್ತುವೊಂದನ್ನು ಖರೀದಿಸಲು ಒಬ್ಬ ಎಂ 80 ದ್ವಿಚಕ್ರ ವಾಹನದಲ್ಲಿ ಬಂದಿದ್ದ. ಹಾಗೇ ಒಂದ್ಕಡೆ ಗಾಡಿ ನಿಲ್ಲಿಸಿ, ಅಂಗಡಿ ಒಳಗೆ ಹೋಗಿ ತನಗೆ ಬೇಕಾದ ವಸ್ತುವನ್ನು ಖರೀದಿಸಿ, ವಾಪಾಸು ಬಂದು ಗಾಡಿ ಹತ್ತಬೇಕು ಅನ್ನುವಷ್ಟರಲ್ಲಿ ಅಲ್ಲಿದ್ದವನೊಬ್ಬ ಹೇಳಿದ.

ಇದು ನಿಮ್ಮ ಗಾಡಿಯಾ? ಮಾರಾಯಾ... ಇದರೊಳಗೆ ಹಾವೊಂದು ಹೋದದ್ದನ್ನು ನಾನು ನೋಡಿದೆ. ಅದು ಸರ್ಪವೇ ಇರಬೇಕು!ಅರ್ಜೆಂಟಿಗೆಂದು ಬಂದು ಹೋಗಬೇಕಾಗಿದ್ದ ಅಸಾಮಿಗೆ ವಿನಾಕಾರಣ ರಗಳೆ ತಗುಲಿಕೊಂಡಾಯಿತು! ಶ್ಶೆ ಏನೀಗ ಮಾಡೂಡು? ಎಂದು ತಲೆ ಬಿಸಿ ಮಾಡಿಕೊಂಡು ಚಡಪಡಿಸತೊಡಗಿದಾಗ ಹಾವು ಗಾಡಿಯೊಳಗೆ ಹೋದದ್ದನ್ನು ನೋಡಿದಾತ ಕೈಮುಗಿದು ಪ್ರಾರ್ಥಿಸುವ ಎಂದು ಸಲಹೆ ನೀಡಿದ. ಬೈಕು ಸವಾರ ಕೈಮುಗಿದು ಪ್ರಾರ್ಥಿಸಿದ; ಸ್ವಾಮಿ ಸರ್ಪ ದೇವ, ನನ್ನಿಂದ ತಪ್ಪಾಗಿದ್ದರೆ ಕ್ಷಮಿಸು, ನಿನಗೆ ತಂಬಿಲ ಸೇವೆ ಕೊಡುತ್ತೇನೆ. ಒಮ್ಮೆ ಹೊರಗೆ ಬಾ ನಾಗಾ...ಊಹು, ಹಾವು ಹೊರಗೆ ಬರಲಿಲ್ಲ. ವಿಷಯ ಆಚೀಚೆ ಹೋಗುವವರಿಗೆ ಗೊತ್ತಾಗಿ ಬೈಕಿನ ಸುತ್ತ ಜನ ಸೇರತೊಡಗಿದರು. ಒಬ್ಬ ಅಂದ; ಅರಸಿನ ನೀರು ಹಾಕಿ, ಹಾವು ಹೊರಬರುತ್ತದೆ; ಒಂದು ಬಟ್ಟಲಲ್ಲಿ ನೀರು ಹಾಕಿ, ಅದಕ್ಕೆ ಅರಸಿನ ಹುಡಿ ಹಾಕಿ, ಆ ಹಳದಿ ನೀರನ್ನು ಗಾಡಿಯ ಸುತ್ತಲೂ ಚಿಮುಕಿಸಿ, ಕೈಮುಗಿದು ನಿಂತರೂ ಹಾವು ಹೊರಬರಲೊಲ್ಲದು.ಗಾಡಿಯನ್ನು ಅಡ್ಡ ಮಲಗಿಸಿ, ಹೋದರೆ ಹೋದೀತು ಅಂದದ್ದಕ್ಕೆ ಹಾಗೇ ಮಾಡಲಾಯಿತು. ಅಷ್ಟಾಗುವಾಗ ಮತ್ತಷ್ಟು ಜನ ಸೇರಿದರು. ವಾಹನಗಳಲ್ಲಿ ಹೋಗುತ್ತಿದ್ದವರು ಗಾಡಿ ನಿಲ್ಲಿಸಿ, ಅಡ್ಡ ಮಲಗಿಸಿದ ಎಂ80ಯನ್ನು ನೋಡಿ ಸಾವಿರ ಪ್ರಶ್ನೆ ಕೇಳಿ,ಹೋಗುವ ಹೊತ್ತಿಗೆ ರಸ್ತೆ ಬ್ಲಾಕ್ ಆಗಿ ಜೀಪಿನಲ್ಲಿ ಪೋಲೀಸರು ಬಂದರು.

ಜನ ಸೇರಿದ್ದನ್ನು ನೋಡಿ ಗುಂಪಿನೊಳಗೆ ನುಗ್ಗಿ ಏನು ಏನು ಎಂದು ವಿಚಾರಿಸಿದರು. ಬೈಕು ಅಡ್ಡ ಬಿದ್ದದ್ದನ್ನು ನೋಡಿ ಏನು? ಆಕ್ಸಿಡೆಂಟಾ? ಪೆಟ್ಟಾಗಿದಾ? ಅಂತ ಕೇಳುವಾಗ ಬೈಕಿನ ಓನರು; ಹಾವು, ಬೈಕಿನೊಳಗೆ ಹೋಗಿದೆ. ಹೊರಬರಲಿ ಅಂತ ಅಡ್ಡ ಮಲಗಿಸಿದ್ದೇವೆ ಅಂದ.ಸರಿ ಸರಿ, ಹೀಗೆ ದಾರಿ ಮಧ್ಯೆ ಮಲಗಿಸಬೇಡಿ. ರಸ್ತೆ ಬ್ಲಾಕ್ ಮಾಡಬೇಡಿ. ಹೋಗಿ, ಎಲ್ಲ ದೂರ ಹೋಗಿ ಅಂತ ಜನರನ್ನು ಪೋಲೀಸರು ಚದುರಿಸಿದರು.ಬೈಕನ್ನು ಇಬ್ಬರು ಹೆದರುತ್ತಲೇ ಎತ್ತಿಕೊಂಡು ರಸ್ತೆಯಾಚೆಗಿನ ಸ್ವಲ್ಪ ವಿಶಾಲ ಜಾಗಕ್ಕೆ ಕೊಂಡೊಯ್ದು ಮಲಗಿಸಿದರು. ಆದರೂ ಹಾವು ಹೊರಬರಲಿಲ್ಲ.

ಅಷ್ಟಾಗುವಾಗ ಒಬ್ಬ ಧೈರ್ಯಶಾಲಿ ಮೆಕಾನಿಕ್ ಎಂ80ಯನ್ನು ಬಿಚ್ಚತೊಡಗಿದ. ಹಿಂಬದಿಯ ಪ್ಲೇಟ್ ಬಿಚ್ಚುವ ಹೊತ್ತಿಗೆ ಒಳಗಿದ್ದ ಸಣ್ಣದಾದ ನಾಗರ ಹಾವು ಮತ್ತೂ ಒಳಕ್ಕೆ ಹೋಯಿತು. ಮೆಕಾನಿಕ್ ಬಿಚ್ಚುತ್ತ ಬಿಚ್ಚುತ್ತ ಹೋದಂತೆ ಹಾವು ಹಾಂಡಲ್ ಒಳ ತನಕ ಬಂದು ಕೂತಿತು.
ಮೆಲ್ಲ ಮಾರಾಯಾ ಗಾಡಿ ತಿರುಗಿಸಬೇಡ. ಮೊನ್ನೆ ಹೀಗೇ ಒಬ್ಬನ ಬೈಕಿನ ಒಳಗೆ ನಾಗರಹಾವು ಹೋಗಿ ಕೂತಿತ್ತು. ಆತ ಬೈಕ್ ಸ್ಟಾರ್ಟ್ ಮಾಡಿದ.ಚೈನಿನೊಳಗೆ ಸಿಕ್ಕಿ ಹಾವು ಸತ್ತೇ ಹೋಯಿತು.ಮರುದಿನ ಆತನ ಬೈಕ್ ಆಕ್ಸಿಡೆಂಟಾಗಿ ಕೆಎಂಸಿ ಆಸ್ಪತ್ರೆಯಲ್ಲಿದ್ದಾನೆ ಗೊತ್ತುಂಟಲ್ಲಾ....ಹಿರಿಯನೊಬ್ಬ ಮೆಕಾನಿಕ್ನಿಗೆ ಬುದ್ದಿವಾದ ಹೇಳಿದ. ಎಂ80ಯ ನಿಜವಾದ ಮಾಲಿಕ ಪಾಪ ಹೆದರುತ್ತ, ನಾಗದೇವರಿಗೆ ವಿವಿಧ ಹರಕೆಗಳನ್ನು ಹೇಳುತ್ತ ನಡುಗುತ್ತ ನಿಂತಿದ್ದ.ಸುತ್ತಲೂ ನೂರಾರು ಮಂದಿ ಕುತೂಹಲಿಗರು!ಎಡಕ್ಕೆ ಮಲಗಿಸಿ ಇಟ್ಟಿದ್ದ ಗಾಡಿಯನ್ನು ಈಗ ಬಲಕ್ಕೆ ಮಲಗಿಸಿ ಇಡಲಾಯಿತು. ಗಾಡಿಯನ್ನು ಸಾಧ್ಯವಾದಷ್ಟು ಬಿಚ್ಚಿದ್ದರೂ, ಹಾವು ಹ್ಯಾಂಡಲಿನ ಒಳಗೆ ಹೋಗಿ ಕೂತಿತ್ತು.ಬಾಲ ಮಾತ್ರ ಕಾಣುತ್ತಿತ್ತು.ಅಂತೂ ಇಂತೂ ಸುಮಾರು ನಾಲ್ಕೈದು ಗಂಟೆ ಕಳೆಯುವ ಹೊತ್ತಿಗೆ ಬಿಸಿಲೂ ಏರಿ, ಎಂ80 ಕೂಡ ಬಿಸಿಯಾಗಿ ಹಾವು ಮೆಲ್ಲನೆ ಹೊರ ಬಂದು ನಿಧಾನವಾಗಿ ಚರಂಡಿಯೊಳಗಿನ ಮಾಟೆ ಸೇರುವ ಹೊತ್ತಿಗೆ ಮಾಲಿಕನಿಗೆ ಅಯ್ಯಮ್ಮ ಅನಿಸಿತ್ತು.ಇದೇ ಹಾವು ಎರಡು ದಿನಗಳ ಹಿಂದೆ ಅಲ್ಲೇ ಪಕ್ಕದ ಹೊಟೇಲೊಂದರಲ್ಲಿ ಕಾಣಿಸಿಕೊಂಡಿತ್ತು.ಒಬ್ಬರು ಚಾ ಕುಡಿಯುತ್ತಿರಬೇಕಾದರೆ ಮತ್ತೊಬ್ಬರು, ಇಲ್ಲೊಂದು ಹಾವು ಹೋದ ಹಾಗೆ ಆಯಿತು ಅಂದರು. ಅಷ್ಟಾಗುವಾಗ ಚಾ ಕುಡಿಯುತ್ತಿದ್ದವರು, ಹೌದಾ, ಇನ್ನು ನನ್ನ ಚೀಲದೊಳಗೆ ಹೋಗುವುದು ಬೇಡ ಎಂದು ಚೀಲವನ್ನೆತ್ತಿ ಟೇಬಲಿನ ಮೇಲಿಟ್ಟು, ಲೋಟವನ್ನು ತುಟಿಗೆ ಹಿಡಿದು ಚಾ ಹೀರಬೇಕು ಎನ್ನುವಷ್ಟರಲ್ಲಿ ಚೀಲದೊಳಗಿಂದ ಅದೇ ಹಾವು ಹೆಡೆಯೆತ್ತಿ ಹೊರ ನೋಡಬೇಕಾ?...ಇವತ್ತಿಗೂ ಈ ಹೊಟೇಲಿನ ಆಸುಪಾಸಿನಲ್ಲಿ ಹಾವು ಬಂದು ಹೋಗುತ್ತಲೇ ಇರುತ್ತದೆ. ನಮಗೆಲ್ಲ ಇಂತಹ ಕಥೆಗಳು ಸಿಕ್ಕುತ್ತಲೇ ಇರುತ್ತವೆ.ಅಂದ ಹಾಗೆ ಇದು ಕಾಲ್ಪನಿಕ ಕಥೆಯಲ್ಲ.

3 comments:

Anonymous said...

aa havanna nodade hedari ashtu jana serkondiddare andare paapa aa havu yeshtu hedarira beda. nija nammuralli naagarahavannu kandare modala kelasa yeradu kaiyannu mugidu nillodu nantara arashina niru amele kudupu devasthanakke harake alva sir

shivu.k said...

ಮನಸು,

ಹಾವಿನ ಘಟನೆ ತುಂಬಾ ಚೆನ್ನಾಗಿ ಬರೆದಿದ್ದೀರಿ.....ಬೇರೆ ಸಮಯದಲ್ಲಿ ಹಾವಿನ ಬಗ್ಗೆ ಏನೇನೋ ಮಾತಾಡಿದರೂ ಇಂಥ ಸಮಯದಲ್ಲಿ ಎಲ್ಲರಿಗೂ...ಭಯ...ಗೊಂದಲ...ಹರಕೆ...ಶಾಪಗಳೆಲ್ಲಾ ನೆನಪಾಗುತ್ತವೆ..ಅಲ್ಲವೇ....

ವಿನಾಯಕ ಭಟ್ಟ said...

ಅದ್ಭುತ ನಿರೂಪಣೆ ಮಿಥುನ್. ಕಟೀಲು, ಕಿನ್ನಿಗೋಳಿಯಂತಹ ಪ್ರದೇಶದಲ್ಲಿ ಇರುವವರಿಗೆ ಮಾತ್ರ ಇಂತಹ ಅನುಭವ ದಕ್ಕಲು ಸಾದ್ಯ.
ಚೆಂದದ ಬರಹ.