Thursday, January 28, 2010

ವಾಲಿಕುಂಜದ ಸೊಬಗು

ಕಾರ್ಕಳದಿಂದ ಅಜೆಕಾರು ಮೂಲಕ ಸಾಗಿ ಅಂಡಾರು ತಲುಪಿದರೆ ವನ್ಯಜೀವಿ ವಿಭಾಗದಿಂದ ಅನುಮತಿ ದೊರೆತರೆ ವಾಲಿಕುಂಜವನ್ನು ಹತ್ತುವುದು ಕಷ್ಟವಲ್ಲ.ವಾಲಿ ಸಮುದ್ರಗಳಲ್ಲಿ 3ಹೊತ್ತು ಸೂರ್ಯನಿಗೆ ಅರ್ಘ್ಯ ಕೊಡುತ್ತಿದ್ದನಂತೆ. ಹಾಗೆ ಆತ ಈ ಬೆಟ್ಟದ ತುದಿಯಿಂದ ಪಶ್ಚಿಮ ಸಮುದ್ರಕ್ಕೆ ಹಾರಿದ್ದು ಅಂತ ಕಥೆ ಇದ್ದು, ವಾಲಿಕುಂಜ ಅಂತ ಹೆಸರು ಬಂತೆನ್ನುತ್ತಾರೆ. ಮರಗಳು ಒತ್ತೊತ್ತಾಗಿ ಬೆಳೆದ ಪ್ರದೇಶವನ್ನು ಕುಂಜ ಅಂತ ಸ್ಥಳನಾಮ ಸಂಶೋಧಕರು ಹೇಳುತ್ತಾರೆ. ಬೆಟ್ಟದ ಮೇಲ್ಗಡೆ ದೊಡ್ಡ ಕಲ್ಲೊಂದರಲ್ಲಿ ಪಾದಗಳೆರಡರ(ವಾಲಿ ಪಾದ!?) ಚಿತ್ರ ಕೆತ್ತಲಾಗಿದೆ. ವಾಲಿಕುಂಜಕ್ಕೆ ಪೌರಾಣಿಕವಾಗಿ ಹೀಗೆ ಹೆಸರಿದ್ದರೆ, ಕಾಡಿನ ಮಧ್ಯೆ ಮನೆ ಮಾಡಿಕೊಂಡಿದ್ದ ನರ್ಸು ಗೌಡ್ರ ಅಜ್ಜಿ ಇಲ್ಲಿ ಬಂದು ತೀರಿ ಹೋದ ಕಾರಣಕ್ಕಾಗಿ ಅಜ್ಜಿ ಕುಂಜ ಅಂತಲೂ ಸ್ಥಳೀಯವಾಗಿ ಹೇಳುತ್ತಾರೆ.ಸೂಜಿಗುಡ್ಡ, ನಾಯಿಬೇರು ಗುಡ್ಡ, ರಕ್ಕಸ ಪಾದೆ, ಯುರೇನಿಯಂ ನಿಕ್ಷೇಪವಿದೆ ಅಂತ ಬ್ರಿಟಿಷರ ಕಾಲದಲ್ಲಿ ಹುಡುಕಲ್ಪಟ್ಟ ಬಂಗಾರಗುಡ್ಡ, ಪೆದ್ಮಿದೆಕಲ್ಲು, ಸಿರಿಕಲ ಗುಂಡಿ, ಶಿರ್ಲಾಲು ಹಳ್ಳ ಮುಂತಾದ ನೋಡಬೇಕಾದ ಸ್ಥಳಗಳು ಸಿಗುತ್ತವೆ.ವಾಲಿಕುಂಜ ಚಾರಣಗೈಯುವವರು ಕುದುರೆ ಮುಖ ವನ್ಯಜೀವಿ ವಿಭಾಗದಲ್ಲಿ ದುಡ್ಡು ಕೊಟ್ಟು ಅನುಮತಿ ಪಡೆಯಬೇಕು. ಅವರು ಮಾರ್ಗದರ್ಶಕರನ್ನು ಒದಗಿಸುತ್ತಾರೆ. ಪಶ್ಚಿಮ ಘಟ್ಟದಲ್ಲಿರುವ ಕುದುರೆಮುಖ ಬೆಟ್ಟದ ಸಾಲಿನಲ್ಲಿ ಸಿಗುವ ವಾಲಿಕುಂಜವನ್ನು ಹತ್ತುವಾಗ ಒಂದೆಡೆ ಕಾರ್ಕಳ ರೇಂಜ್ ಇನ್ನೊಂದೆಡೆ ಚಿಕ್ಕಮಗಳೂರು ರೇಂಜ್ ಸಿಗುತ್ತದೆ. ಕೆಲಬಾರಿ ನಕ್ಸಲರು ಸಿಗುವುದೂ ಉಂಟು!ಸಾಮಾನ್ಯವಾಗಿ ಕಾರ್ಕಳದ ಅಜೆಕಾರಿನಿಂದ ಚಾರಣಗೈದರೆ ಹೆಚ್ಚಾಗಿ ಬರು ಗೈಡ್ ಅರಣ್ಯ ಇಲಾಖೆಯಲ್ಲಿ ಕಳೆದ ೨೨ ವರ್ಷಗಳಿಂದ ಇರುವ ಮಂಜುನಾಥ. ಅವರ ಅನುಭವಗಳ ಬುತ್ತಿ ಕುತೂಹಲಭರಿತ. ಕರ್ತವ್ಯಕ್ಕೆ ಸೇರಿದ ಆರಂಭದಲ್ಲಿ ಕಾಡು, ಇಂಬಳ, ಜಿಗಣೆಗಳಿಗೆ ಹೆದರಿ ಮನೆ ಸೇರಿದ್ದರಂತೆ! ಆಮೇಲೆ ಕಾಡಿನಲ್ಲಿ ಹಾದಿ ಮಾಡುವುದು, ಚಾರಣಿಗರಿಗೆ ಹಾದಿ ತೋರಿಸುವುದು, ಹುಲಿ, ಜಿಂಕೆ, ಹಾವು ಮುಂತಾದ ವನ್ಯಜೀವಿಗಳ ಅಧ್ಯಯನಕ್ಕೆ ಬಂದವರನ್ನು ಕರೆದೊಯ್ಯುವುದು ಇತ್ಯಾದಿ ಕರ್ತವ್ಯಗಳಿಂದ ಮಂಜುನಾಥರ ಅನುಭವ ವಿಸ್ತಾರವಾಗಿದೆ. ಸುಮಾರು ಹತ್ತು ವರುಷಗಳ ಹಿಂದೆ ವಿದೇಶದಿಂದ ಬಂದ ಚಾರಣಿಗರನ್ನು ಕರೆದೊಯ್ಯುವ ಅವಕಾಶ ಸಿಕ್ಕಿತ್ತು. ನಡೆದುಕೊಂಡು ಹೋಗುತ್ತ ಹೋಗುತ್ತ ತಂಡದಲ್ಲಿದ್ದ ನಾಲ್ಕು ಮಂದಿ ಹಿಂದೆ ಉಳಿದು ಅವರ ಹಾದಿ ತಪ್ಪಿತ್ತು. ಜೊತೆಗಿದ್ದ ಒಬ್ಬನನ್ನು ಒಂದೆಡೆ ಕುಳ್ಳಿರಿಸಿ, ಹಾದಿ ತಪ್ಪಿದ ನಾಲ್ಕು ಮಹಿಳೆಯರನ್ನು ಕರೆತರುವಷ್ಟರಲ್ಲಿ, ಕುಳ್ಳಿರಿಸಿ ಹೋಗಿದ್ದವನನ್ನು ಹೆಬ್ಬಾವೊಂದು ಸೊಂಟದ ತನಕ ತಿಂದಾಗಿತ್ತು! ಕೊನೆಗೆ ಆ ವಿದೇಶೀ ಮಹಿಳೆಯರೇ ಕತ್ತಿಯಿಂದ ಹಾವನ್ನು ಇಬ್ಬಾಗಿಸಿ, ಜೊತೆಗಾರನನ್ನು ಬದುಕಿಸಿದರಂತೆ.ಹಿಂದಿನ ಅರಣ್ಯಾಧಿಕಾರಿಗಳು ಇಲ್ಲಿ ರಸ್ತೆ ನಿರ್ಮಿಸಿದ್ದರು. ಈಗ ಹಾಳಾಗಿದೆ. ಇತ್ತೀಚಿಗೆ ಆನೆ ಊರ ಕಡೆಗೆ ಬಂದಿತ್ತು. ಹುಲಿ, ಚಿರತೆ, ಜಿಂಕೆ ಒಮ್ಮೊಮ್ಮೆ ಕಂಡು ಬಂದರೆ, ಕರಡಿ, ಕಾಡೆಮ್ಮೆ, ಹಾವುಗಳು ಈ ವಾಲಿಕುಂಜದ ಕಾಡಿನಲ್ಲಿ ಸಾಮಾನ್ಯ. ಸ್ವರ್ಣಾ ನದಿಯನ್ನು ಸೇರುವ ಪುಟ್ಟ ಝರಿಯೂ ಇಲ್ಲಿ ಸಿಗುತ್ತದೆ. ಬೆಟ್ಟದ ಬುಡದಿಂದ ಆರಂಭಿಸಿ ಬೆಟ್ಟದ ತುದಿ ತಲುಪಲು ನಾಲ್ಕು ಗಂಟೆಯ ನಡಿಗೆ ಇದೆ. ಕುಂಜದ ಹಾದಿಯಲ್ಲಿ ಹೋಗುತ್ತ ಬಲಗಡೆಗೆ ಇರುವ ಕವಲಿನಲ್ಲಿ ಕೊಂಚ ನಡೆದರೆ ಕಾಡ ಮಧ್ಯೆ ನಾಗಿ ಗೌಡ್ತಿ ಮನೆ ಸಿಗುತ್ತದೆ. ಸುಮಾರು ಇಪ್ಪತ್ತೈದು ಮಂದಿ ಇಲ್ಲಿದ್ದಾರಂತೆ. ಒಂದಿಷ್ಟು ಕೃಷಿ ಮಾಡಿಕೊಂಡಿರುವ ಇವರ ಬೆಳೆಗಳಿಗೆ ಕಾಡು ಪ್ರಾಣಿಗಳು ಯಾವುದೇ ಹಾನಿ ಮಾಡುವುದಿಲ್ಲವಂತೆ. ಇತ್ತೀಚಿಗೆ ಊರ ಕಡೆ ಬಂದ ಆನೆಯೂ ಈ ಮನೆಯ ತೋಟದೆಡೆಗೆ ಹೋಗಿಲ್ಲವಂತೆ! ಇಲ್ಲಿರುವ ಶಕ್ತಿ(!)ಗಳು ಪ್ರಾಣಿಗಳಿಂದ ತೊಂದರೆಯಾಗದಂತೆ ತಡೆಯುತ್ತವೆಯಂತೆ. ಹೀಗೆ ಕಾಡು, ಗುಡ್ಡದ ಬಗ್ಗೆ ಒಂದಿಷ್ಟು ದಂತ ಕಥೆಗಳೂ ಸಿಗುತ್ತವೆ. ಬ್ರಿಟಿಷ್ ಅಧಿಕಾರಿಯೊಬ್ಬ ಕುಳಿತುಕೊಳ್ಳಲು ಮಾಡಿದ ಕಟ್ಟೆಯೂ ಕಾಡ ಹಾದಿಯಲ್ಲಿ ಸಿಗುತ್ತದೆ. ವಾಲಿಕುಂಜದ ಮೇಲೆ ಹತ್ತಿ ಅಲ್ಲಿರುವ ಅರಣ್ಯ ಇಲಾಖೆಯ ಮುರಿದು ಬಿದ್ದ ಟವರ್‌ನ ಪಕ್ಕದಲ್ಲಿರುವ ಬಂಡೆಕಲ್ಲಿನ ಮೇಲೆ ನಿಂತು ಬೆಟ್ಟದ ಕೆಳಗಿನ ಊರ ಸೊಬಗು ಕಾಣುವುದು ಸುಂದರ ಅನುಭವ. ಹಾಗೆಂದು ಆಗಾಗ ಮೈಮೇಲೆಯೇ ಹಾದು ಹೋಗುವ ಮೋಡಗಳು ಸುತ್ತಲೂ ಮಬ್ಬನ್ನು ಉಂಟುಮಾಡಿರುತ್ತವೆ. ಕಾಡ ಹಾದಿಯಲ್ಲಿ ಸಾಗಿ ಬೆಟ್ಟವನ್ನು ಹುಲ್ಲುಗಳ ಮಧ್ಯೆ ಹತ್ತುತ್ತ ಸಾಗುವ ರೋಚಕ ಅನುಭವಕ್ಕೆ ಮತ್ತಷ್ಟು ಕುತೂಹಲವನ್ನು ಹುಟ್ಟಿಸಲು ಹಾದಿಯುದ್ದಕ್ಕೂ ಕರಡಿ, ಕಾಡುಕೋಣಗಳ ಹಿಕ್ಕೆ, ವಿಸರ್ಜನೆಗಳ ಕುರುಹು ಸಿಗುತ್ತವೆ! ವಾಲಿಕುಂಜದ ಚಾರಣದಲ್ಲಿ ಸಿಗುವ ಖುಷಿಯ ಪಾಲು ದೊಡ್ಡದೇ.

1 comment:

ಮಹೇಶ ಭಟ್ಟ said...

ವಾಲಿಕುಂಜವನ್ನು ಇನ್ನೂ ನೋಡಿಲ್ಲವಾಗಿತ್ತು. ಪರಿಚಯಿಸಿದ್ದಕ್ಕೆ ಧನ್ಯವಾದಗಳು. ಚಿತ್ರಗಳು ಸುಂದರವಾಗಿ ಬಂದಿವೆ