Saturday, December 13, 2008

ಪಿಸ್ತೂಲು ಕಥೆ

ಸುಖಾನಂದನ ನುಡಿ ನಮನ ಬರೆದ ಬಳಿಕ ಬಂದ ಪ್ರತಿಕ್ರಿಯೆ ನೋಡಿ ಆತನದ್ದೇ ಕೆಲ ಕಥೆ ಕುಟ್ಟುವ ಅಂತ ಮನಸ್ಸಾಗಿದೆ.
ಜಿಲ್ಲಾ ಪಂಚಾಯತ್ ಚುನಾವಣೆಯ ಬ್ಯುಸಿ. ಮತದಾನದಂದು ಬೂತುಗಳಲ್ಲಿ ಕೂತುಕೊಳ್ಳುವ ಕಾರ್ಯಕರ್ತರ ಗುರುತು ಪತ್ರ ತರಲಿಕ್ಕೆಂದು ಸುಖಾನಂದ ಮಂಗಳೂರು ಜಿಲ್ಲಾಧಿಕಾರಿ ಕಚೇರಿಗೆ ಹೋದ. ಆತನೊಂದಿಗೆ ಗೆಳೆಯರಾದ ದೇವದಾಸ್ ಮುಂತಾದವರಿದ್ದರು. ಸುಖಾನಂದನಿದ್ದಲ್ಲಿ ನಾನೂ ಇರುವುದು ಸಾಮಾನ್ಯವಾದುದರಿಂದ ಮಂಗಳೂರಿನಲ್ಲಿ ಜೊತೆಗೆ ಊಟ ಮಾಡೋಣ ಅಂತ ಆತನನ್ನು ಕಾಯುತ್ತ ಕೂತಿದ್ದೆ.
ಆತ ತನ್ನ ಕ್ವಾಲಿಸ್ ಕಾರಿನಲ್ಲಿ ತನ್ನ ಗ್ಯಾಂಗ್(?)ನೊಂದಿಗೆ ಬಂದು ನಾನೂ ಸೇರಿದಂತೆ ಎಲ್ಲರೂ ಜೊತೆಯಾಗಿ ಊಟ ಮಾಡಿದ್ದೂ ಆಯಿತು. ಅಲ್ಲಿಗೇ ಬಂದ ಸದಾನಂದ ಗೌಡ್ರು, ಶೋಭಕ್ಕ, ಯೋಗೀಶ್ ಭಟ್ ಎಲ್ಲ ಬಿಜೆಪಿಯ ಮುಖಂಡರೂ ವಿಶ್ ಮಾಡಿ ಹೋದ್ರು. ಆದರೆ ಸುಖಾನಂದ ಸೇರಿದಂತೆ ಎಲ್ಲರೂ ಚಡಪಡಿಸತೊಡಗಿದ್ದರು.
ಏನು ಅಂತ ಕೇಳಿದೆ ಕೊನೆಗೆ ಗೊತ್ತಾದದ್ದು: ಹಿಂದೂ ಜಾಗರಣ ವೇದಿಕೆಯವರು ಮುಲ್ಕಿಯಲ್ಲಿ ದೀಪಾವಳಿಗೆ ಪಟಾಕಿ ಅಂಗಡಿ ಇಟ್ಟಿದ್ರು. ಆವಾಗ ಮಾರಾಟಕ್ಕೆಂದು ಇಟ್ಟಿದ್ದ ಪಟಾಕಿ ಪಿಸ್ತೂಲನ್ನು ತಮಾಷೆಗೆಂದು ಸುಖಾನಂದ ತನ್ನ ಕ್ವಾಲಿಸ್ನಲ್ಲಿಟ್ಟಿದ್ದ. ಆವತ್ತು ಹೀಗೇ ಮಂಗಳೂರಿಗೆ ಹೋಗುವಾಗ ಎದುರಿನಲ್ಲಿ ಈತನ ಮನೆ ಪಕ್ಕದ ಗೆಳೆಯರಿಬ್ಬರು ಬೈಕ್ನಲ್ಲಿ ಹೋಗುತ್ತಿದ್ದರು. ದಾರಿಯಲ್ಲಿ ಹೋಗುತ್ತಿರುವಾಗ ಸಿಕ್ಕವರನ್ನು ಕಿಚಾಯಿಸಿ, ತಮಾಷೆ ಮಾಡಿ ಗಮ್ಮತ್ತು ಮಾಡಿಕೊಂಡು ಹೋಗುವುದು ಮಾಮುಲಿ. ಎದುರಿಗೆ ಸಿಕ್ಕವನಲ್ಲಿ ಅದ್ಯಾವುದೋ ಭಾಷೆಯಲ್ಲಿ 'ನಮ್ಗಮ್ನಬಸಜಲಜಜದುಗಡತರೆಡೆಪಞವನಚ್ವಡ್;;ಖಧೋಧಠಾಘಣಣಝ...' ವಿಚಿತ್ರವಾಗಿ ಮಾತಾಡಿ ದಾರಿಹೋಕರಿಗೂ ಗೊಂದಲ ಮಾಡಿ ನಗುತ್ತಾ ಬರುತ್ತೇವೆ ಮಾರಾಯರೇ ಅಂತ ಹೇಳಿ ತಮಾಷೆ ಮಾಡಿಕೊಂಡು ಹೋಗುವ ಸುಖಾನಂದ ಕೆಲ ಸಲ ಉಡುಪಿ ಹಾದಿ ಮಧ್ಯೆ ಕಾರು ನಿಲ್ಲಿಸಿ, ಪುತ್ತೂರಿಗೆ ಹೇಗೆ ಹೋಗಬೇಕು ಮಾರಾಯರೇ ಅಂತ ಕೇಳುತ್ತಿದ್ದ. ಅವರು ಇದು ಉಡುಪಿ ಹಾದಿ, ಪುತ್ತೂರಿಗೆ ಹೀಹೀಹೀ...ಗೆ ಹೋಗಬೇಕು ಅನ್ನುವ ಹೊತ್ತಿಗೆ ಕಾರು ಉಡುಪಿ ಕಡೆ ಹೋಗಿ ಆಗಿರುತ್ತಿತ್ತು. ದಾರಿ ಹೇಳುವವ ಬಾಯಿಮುಚ್ಚಿ ತಲೆ ಬಿಸಿ ಮಾಡಿಕೊಂಡು ಹೋಗಬೇಕು. ಇಂತಹ ಅನೇಕ ಗಮ್ಮತ್ತುಗಳ ಸುಖಾನಂದ ಒಮ್ಮೆ ಸ್ಥಳೀಯವಾಗಿದ್ದ ವೇದಿಕೆಯ ಹುಚ್ಚು ಹಚ್ಚಿಸಿಕೊಂಡಿದ್ದ ರಂಗನಾಥ ಎಂಬವನಿಗೆ ಸಂಮಾನ ಕಾರ್ಯಕ್ರಮವನ್ನು ಗೆಳೆಯರ ಮುಲಕ ಏರ್ಪಡಿಸಿದ್ದ. ತನಗೆ ಸಂಮಾನ ಅಂತ ಸಿಕ್ಕಾಪಟ್ಟೆ ಡೊನೇಶನ್ ಕೊಟ್ಟು ಕಾರ್ಯಕ್ರಮದ ದಿನ ಹೊಸಾ ಬಟ್ಟೆ ಹಾಕಿಕೊಂಡು ಹೋದರೆ ಕಾರ್ಯಕ್ರಮವೇ ಇಲ್ಲ!
ಇಂತಹ ಸುಖಾನಂದನಿಗೆ ಮಂಗಳೂರಿಗೆ ಹೋಗುವಾಗ ಬೈಕಲ್ಲಿ ಗೆಳೆಯರಿಬ್ಬರು ಸಿಕ್ಕರಲ್ಲ; ತನ್ನ ಕ್ವಾಲಿಸ್ನ ಗ್ಲಾಸು ಹಾಕಿ ಬೈಕನ್ನು ನಿಧಾನವಾಗಿ ಫೋಲೋ ಮಾಡತೊಡಗಿದ. ಬೈಕು ನಿಲ್ಲಿಸಿದಾಗ ಕ್ವಾಲಿಸ್ ನ್ನೂ ನಿಲ್ಲಿಸುತ್ತಿದ್ದ. ಮಂಗಳೂರು ಲಾಲ್ ಭಾಗ್ ಸ್ಟಾಪ್ ನಲ್ಲಿ ಸಿಗ್ನಲ್ ಆದಾಗ ಬೈಕ್ ನಿಂತಿತಲ್ಲ. ಬೈಕಿನಲ್ಲಿ ಹಿಂಬದಿಯಲ್ಲಿ ಕೂತಿದ್ದವ ಮೆಲ್ಲನೆ ಹಿಂತಿರುಗಿ ನೋಡಿದ. ಸುಖಾನಂದ ಗ್ಲಾಸಿನಲ್ಲಿ ಪಟಾಕಿ ಅಂಗಡಿಯ ಪಿಸ್ತೂಲು ಹಿಡಿದದ್ದು ಕಂಡಿತು. ಆದರೆ ಸುಖಾನಂದನ ಮುಖ ಕಾಣುತ್ತಿರಲಿಲ್ಲ. ಒಂದು ವೇಳೆ ಮುಖ ಕಾಣುತ್ತಿದ್ದರೆ ಗೆಳೆಯನನ್ನು ನೋಡಿ ಸುಮ್ಮನಾಗಬಹುದಿತ್ತು. ಆದರೆ ಪಿಸ್ತೂಲು ಕಂಡವರೇ ಬೈಕ್ ಅಡ್ಡ ಹಾಕಿ ಓಟಕಿತ್ತರು. ಕೂಗಿ ಕರೆದರೂ ಹಿಂತಿರುಗಿ ನೋಡುವಷ್ಟು ದೈರ್ಯ ಇಲ್ಲ. ಬೈಕನಲ್ಲಿದ್ದವರಿಬ್ಬರೂ ಸೀದಾ ಓಡೀ ಓಡೀ ಬರ್ಕೆ ಪೊಲೀಸ್ ಸ್ಟೇಷನ್ಗೆ ಹೋಗಿ ಪಿಸ್ತೂಲು ಬಗ್ಗೆ ದೂರು ನೀಡಿದರು. ಆದರೆ ಬರ್ಕೆಯವರು ಲಾಲ್ಭಾಗ್ ನಮ್ಮದಲ್ಲ, ನೀವು ಉರ್ವಕ್ಕೆ ಹೋಗಿ ಕಂಪ್ಲೇಟು ಕೊಡಿ ಎಂದರು. ಪಾಪ, ಇವರಿಬ್ಬರೂ ಉರ್ವ ಪೊಲೀಸ್ ಸ್ಟೇಷನ್ಗೆ ಹೋಗಿ ಕಂಪ್ಲೇಂಟು ಕೊಟ್ಟರು.
ಬೈಕ್ ಬಿಟ್ಟು ಓಡಿದ್ದನ್ನು ನೋಡಿದ ಟ್ರಾಫಿಕ್ ಪೋಲಿಸ್ ಕಂಟ್ರೋಲ್ ರೂಂಗೆ ಹೇಳಿದ. ಕೂಡಲೇ ಸ್ಪಾಟಿಗೆ ಎಸ್ಪಿ, ಎಡಿಎಸ್ಪಿ, ರೌಡಿ ನಿಗ್ರಹ ದಳ, ಡಿವೈಎಸ್ಪಿ ಎಲ್ಲ ಬಂದ್ರು. ಹೆದ್ದಾರಿಯಲ್ಲಿ ನಾಕಾ ಬಂದ್ ಹಾಕಲಾಯಿತು. ಸಿಟಿ ಹೊರಗೆ ಎಲ್ಲೆಡೆಯೂ ನಾಕಾ ಬಂದ್, ಎಲ್ಲ ವಾಹನಗಳ ತಪಾಸಣೆ ನಡೆಯುತ್ತಿತ್ತು.
ಇಲ್ಲಿ ಲಾಲ್ ಭಾಗ್ನಲ್ಲಿ ಸಿಗ್ನಲ್ ಓಪನ್ ಆಯಿತಲ್ಲ, ಸುಖಾನಂದ ಕಾರನ್ನು ಡಿಸಿ ಆಫೀಸಿಗೆ ಕೊಂಡೊಯ್ದು ಅಲ್ಲಿ ಕೆಲಸ ಮುಗಿಸಿ, ಬಿಜೆಪಿ ಆಫೀಸಿಗೆ ಬಂದು, ಆಮೇಲೆ ಊಟ ಮಾಡಿಯೂ ಆಗಿತ್ತು. ಆದರೆ ಈ ಪೊಲೀಸು ತನಿಕೆ, ನಾಕಾಬಂದ್ ಇದ್ಯಾವುದೂ ಗೊತ್ತಿರದ ಸುಖಾನಂದ ಗೆಳೆಯರ ಮನೆಗೆ ಫೋನು ಮಾಡಿ, ಅವರ ಮನೆಯವರಲ್ಲಿ ತಾನು ತಮಾಷೆಗೆಂದು ಆಟಿಕೆ ಪಿಸ್ತೂಲು ತೋರಿಸಿದ್ದು, ಅವರು ಓಡಿಹೋಗಿದ್ದನ್ನು ಎಲ್ಲ ಹೇಳಿ, ಅವರನ್ನು ಹುಡುಕುವ ಪ್ರಯತ್ನದಲ್ಲಿದ್ದ. ಕೊನೆಗೆ ಪರಿಚಯದ ಪೊಲೀಸ್ ಅಧಿಕಾರಿಗಳಲ್ಲೂ ಈ ವಿಷಯ ಹೇಳಿದೆವು. ಒಬ್ಬ ಅಧಿಕಾರಿ ನೀವ್ಯಾಕೆ ಹುಡುಗಾಟಿಕೆ ಮಾಡುವುದು, ಪರಿಸ್ಥಿತಿ ಕೈಮೀರಿದೆ, ಪಿಸ್ತೂಲು ಆಟಿಕೆಯದ್ದಾದರೂ ಕೇಸು ಗ್ಯಾರಂಟಿ ಅಂತ ಹೆದರಿಸಿ ಬಿಟ್ಟಿದ್ದರು. ಮತ್ತೊಬ್ಬ ಅಧಿಕಾರಿ ಹೇಳಿದರು; ಪಿಸ್ತೂಲು ತೋರಿಸಿದ್ದು ಯಾರೂಂತ ಗೊತ್ತಿಲ್ಲ, ನೀವು ನಿಮ್ಮ ಪಾಡಿಗೆ ಹೋಗಿ ಮಾರಾಯ್ರೇ, ಸ್ವಲ್ಪ ಹುಡುಕುತ್ತಾರೆ, ಆಮೇಲೆ ಪೋಲೀಸರೂ ಸುಮ್ಮನಾಗುತ್ತಾರೆ ಅಂದರು.
ಆದರೂ ಸುಖಾನಂದನಿಗೆ ಸಮಾಧಾನವಿಲ್ಲ. ಕೊನೆಗೆ ಓಡಿದ ಗೆಳೆಯರು ಉರ್ವ ಸ್ಟೇಷನ್ನಲ್ಲಿದ್ದಾರೆ ಅಂತ ಗೊತ್ತಾಯಿತು. ಅಲ್ಲಿಗೇ ಫೋನು ಮಾಡಿ ಇನ್ಸ್ ಪೆಕ್ಟರ್ ಸಾಹೇಬರಲ್ಲಿ ನಾನು ಸುಖಾನಂದ, ಗಮ್ಮತ್ತಿಗೆ ಹೇಳಿದ್ದು, ಹೀಗೆಲ್ಲ ಆಯಿತು. ಅವರು ಬಂದವರನ್ನು ಹೋಗಲು ಹೇಳಿ, ಅವರಲ್ಲಿ ಮಾತಾಡಲು ಫೋನು ಕೊಡಿ ಅಂತ ಹೇಳಿದರೆ, ಅಧಿಕಾರಿ ರಾಂಗ್ ಆದರು. ನೀವು ಯಾರೇ ಆಗಿರಲಿ, ಮೊದಲು ಇಲ್ಲಿಗೆ ಬನ್ನಿ. ಪಿಸ್ತೂಲು ಆಟಿಕೆಯದ್ದಾದರೂ ಪರವಾಗಿಲ್ಲ ತನ್ನಿ ಅಂತ ಬೈದ್ರು.
ಪೋಲೀಸರು ಹುಡುಕುತ್ತಿದ್ದಾರೆಂದು ಗೊತ್ತಾಗಿ ಆಟಿಕೆ ಪಿಸ್ತೂಲನ್ನು ಪ್ಯಾಕ್ ಮಾಡಿ ಅಂಗಡಿಯೊಂದರಲ್ಲಿ ಈಈಈಗ ಬರುತ್ತೇವೆ ಅಂತ ಅಡಗಿಸಿ ಇಟ್ಟಿದ್ದೆವು. ಸ್ಟೇಷನ್ಗೆ ಪಿಸ್ತೂಲು ತರಲು ಹೇಳಿದರಲ್ಲ, ಅಂಗಡಿಗೆ ಹೋದರೆ ಅವರು ಬೀಗ ಹಾಕಿ ಮನೆಗೆ ಹೋಗಿದ್ದರು. ಕೊನೆಗೆ ಮನೆ ಹುಡುಕಿಕೊಂಡು ಹೋಗಿ, ಅವರನ್ನು ಕರೆದುಕೊಂಡು ಬಂದು ಅಂಗಡಿ ಬೀಗ ತೆಗೆಸಿ, ಪಿಸ್ತೂಲು ಪ್ಯಾಕನ್ನು ಪಡೆದು ಸ್ಟೇಷನ್ಗೆ ಹೋಗಿ ಕೊಡುವ ಹೊತ್ತಿಗೆ ಸಂಜೆ ಆಗಿತ್ತು.
ಈ ಮಧ್ಯೆ ಶಾಸಕ ಯೋಗೀಶ್ ಭಟ್ಟರಲ್ಲಿ ಉರ್ವ ಪೋಲೀಸರಿಗೆ ಸ್ವಲ್ಪ ಹೇಳಿ ಮಾರಾಯ್ರೇ ಅಂತ ವಿನಂತಿಸಿದ್ದಕ್ಕೆ ಅವರು ಮಾರ್ಗದಲ್ಲೇ ಕೈಯೆತ್ತಿ ಟಾಟಾ ಮಾಡಿ ಸೀದಾ ಹೋದರು!
ಸುಖಾನಂದ ನಿಮ್ಮ ಗೆಳೆಯರಾಗಿರಬಹುದು, ಆಟಿಕೆ ಪಿಸ್ತೂಲು ಕಂಡ ಕೂಡಲೇ ನೀವು ಹೀಗೆ ಬೈಕು ಬಿಟ್ಟು ಓಡಿ ಹೋಗಬೇಕಾದ್ರೆ ನೀವೂ ಯಾವುದೋ ಗ್ಯಾಂಗಿನಲ್ಲಿರಬೇಕು. ಬಾಂಬೆಯಲ್ಲಿದ್ರಾ? ಹಾಗಾದ್ರೆ ಯಾವುದಾದರೂ ಮರ್ಡರ್ ನಲ್ಲಿದ್ದೀರಾ? ಎಷ್ಟು ಕೇಸುಗಳಿವೆ ನಿಮ್ಮ ಮೇಲೆ ಸತ್ಯ ಹೇಳಿ? ನೀವು ಹೀಗೆ ಓಡಿ ಬಂದಿರಬೇಕಾದ್ರೇ ನೀವೂ ರೌಡಿಗಳಾಗಿರಬೇಕು ಅಂತ ಸ್ಟೇಷನ್ನಿನಲ್ಲಿ ಪೋಲೀಸರು ಕಂಪ್ಲೇಂಟು ಕೊಡಲು ಬಂದ ಇಬ್ಬರನ್ನೂ ಸತಾಯಿಸಿದ್ದರು.
ಕೊನೆಗೂ ಪೋಲೀಸರಿಗೆಲ್ಲ ಒಂದಿಷ್ಟು ಹಂಚಿ, ಪಿಸ್ತೂಲು ಕಂಡು ಹೆದರಿ ಓಡಿದ್ದ ಗೆಳೆಯರನ್ನೂ ಜೊತೆಗೆ ಕರೆದುಕೊಂಡು ವಾಪಾಸಾಗುವ ಹೊತ್ತಿಗೆ ಸುಖಾನಂದ ಹೇಳಿದ್ದ; ನನ್ನ ಜನ್ಮದಲ್ಲಿ ಇನ್ನು ಮುಂದೆ ದಾರಿಯಲ್ಲಿ ಹೋಗುವವರನ್ನು ತಮಾಷೆ ಮಾಡುದಿಲ್ಲ. ಇನ್ಯಾವತ್ತೂ ನಿಜ ಬಿಡಿ, ಆಟಿಕೆ ಪಿಸ್ತೂಲನ್ನೂ ಹಿಡಿಯುವುದಿಲ್ಲ ಅಂತ.
ಆದರೆ ಆ ಅವಕಾಶವನ್ನು ಮುಲ್ಕಿ ರಫೀಕ್ ಟೀಮು ಕೊಡಲಿಲ್ಲ.

Sunday, December 7, 2008

ಸುಖಾನಂದನ ನೆನೆದು







ಸುಖಾನಂದ ಶೆಟ್ಟಿ!
2006ರ ಡಿಸೆಂಬರ್ 1ರಂದು ಬೆಳಿಗ್ಗೆ ಹತ್ತು ಗಂಟೆಯ ಹೊತ್ತಿಗೆ ಮಂಗಳೂರು ಕುಳಾಯಿಯ ಮಾರ್ಬಲ್ ಟ್ರೇಡ್ ಬಳಿ ತನ್ನ ಕ್ವಾಲಿಸ್ನಿಂದ ಇಳಿಯುತ್ತಿರುವಾಗ ಪಾತಕಿ ಮುಲ್ಕಿ ರಫೀಕ್ ಮತ್ತಾತನ ಹಂತಕರ ಗ್ಯಾಂಗ್ ತಲವಾರುಗಳಿಂದ ಕತ್ತರಿಸಿ ಹಾಕಿ ಪರಾರಿಯಾಯಿತಲ್ಲ, ಆವಾಗ ಆತನನ್ನು ಮಂಗಳೂರಿನ ಎ.ಜೆ.ಆಸ್ಪತ್ರೆಗೆ ಕರೆದೊಯ್ಯಲಾಯಿತು. ಹಾದಿಯಲ್ಲಿ ಸಾವಿನೆಡೆಗೆ ಸಾಗುತ್ತಿರುವಾಗಲೇ ಆತ ಅಂದನಂತೆ; ನನ್ನನ್ನು ಒಮ್ಮೆ ಬದುಕಿಸಿ, ಆಮೇಲೆ ಅವರನ್ನು ನಾನು ನೋಡಿಕೊಳ್ಳುತ್ತೇನೆ. ಆದರೆ ಆತ ಬದುಕಲಿಲ್ಲ. ಬದುಕಿದ್ದರೆ ಹಂತಕರಲ್ಲಿ ಅನೇಕರು ಅಂಗವಿಕಲರಾಗುತ್ತಿದ್ದರು!
ಆತ ಮುಲ್ಕಿಯಲ್ಲಿ ಥೇಟು ಸಿನಿಮಾ ಹೀರೋ ಥರ ಕ್ವಾಲಿಸ್ ಕಾರಿನಲ್ಲಿ ಬಂದಿಳಿಯುತ್ತಿದ್ದ. ಇಳಿದ ಕೂಡಲೇ ಸುತ್ತಲೂ ಜನ ಸೇರುತ್ತಿದ್ದರು. ಯಾರೋ ಒಬ್ಬ ಹುಡುಗಿಯನ್ನು ಚುಡಾಯಿಸಿದವನನ್ನು ಪೊಲೀಸರು ಹಿಡಿದು ಕೇಸೇ ಹಾಕದೆ ಹಾಗೆಯೇ ಬಿಟ್ಟು ಬಿಟ್ಟರು ಅಂತ ಗೊತ್ತಾದ ಕೂಡಲೇ ನೇರ ಸ್ಟೇಷನ್ ಮುಂದೆ ನಿಂತು ಪ್ರತಿಭಟನೆಗೆ ನಿಲ್ಲುತ್ತಿದ್ದ. ನೋಡುನೋಡುತ್ತಿದ್ದಂತೆ ಒಂದು ಗಂಟೆಯೊಳಗೆ ಐನೂರು ಮಂದಿ. ನಿಮಗೆ ಗೊತ್ತಿರಲಿ; ನೂರು ಮಂದಿಯನ್ನು ಅದೂ ಪೊಲೀಸ್ ಠಾಣೆಯ ಮುಂದೆ ಸೇರಿಸುವುದೆಂದರೆ ಸುಮ್ಮನೆ ಮಾತಲ್ಲ. ಆ ಕಾರಣಕ್ಕಾಗಿಯೇ ಅನೇಕ ಹುಡುಗಿಯರು ಪುಂಡ ಹುಡುಗರ ಕೀಟಲೆ ಜಾಸ್ತಿಯಾದಾಗ ಸುಖಾನಂದನಿಗೆ ಫೋನು ಮಾಡಿ ಸಹಾಯ ಕೇಳುತ್ತಿದ್ದರು.
ಖಡಕ್ ಮಾತು, ನೇರ ನುಡಿ, ತುಂಬ ಸಪೂರವಾದರೂ ಮಹಾ ತಾಕತ್ತಿನ ದೇಹ, ಆಕರ್ಷಕ ವ್ಯಕ್ತಿತ್ವ, ಶುಭ್ರ ಮನಸ್ಸು, ಸದಾ ಹಾಸ್ಯ, ಲವಲವಿಕೆಯ ಕಾರಣಗಳಿಗಾಗಿ ಒಮ್ಮೆ ಸಂಪರ್ಕಕ್ಕೆ ಬಂದರೆ ಅಭಿಮಾನಿಯಾಗಿ, ಬೆಂಬಲಿಗನಾಗಿ ಮಾಡುವಂತಹ ಶಕ್ತಿ ಸುಖಾನಂದನಿಗಿತ್ತು. ಮುಲ್ಕಿ ನಗರ ಪಂಚಾಯತ್ ನ ಏಕೈಕ ಬಿಜೆಪಿ ಸದಸ್ಯನಾಗಿದ್ದ ಈತ ಸಭೆಗೆ ಹಾಜರಾದರೆ ಮಾತ್ರ ವರದಿಗಾರರಿಗೆ ಸುದ್ದಿ. ಇಲ್ಲದಿದ್ದರೆ ಸಮಸ್ಯೆಗಳ ಬಗ್ಗೆ ಅಲ್ಲಿ ಧ್ವನಿಯೇ ಇರಲಿಲ್ಲ.
ಬದುಕಿದ್ದರೆ ಆತ ಮುಡುಬಿದ್ರೆ ಕ್ಷೇತ್ರಕ್ಕೆ ಶಾಸಕನಾಗಿರುತ್ತಿದ್ದ.
ಮೊನ್ನೆ ಒಂದು ತಾರೀಕಿಗೆ ಆತ ಇಲ್ಲವಾಗಿ ಎರಡು ವರುಷವಾಯಿತು. ಈತನ ಶವಯಾತ್ರೆಯಲ್ಲಿ ಹತ್ತು ಸಾವಿರದಷ್ಟು ಮಂದಿ ಭಾಗವಹಿಸಿದ್ದರು. ಪೊಲೀಸರು ವಿನಾಕಾರಣ ಗೋಲೀಬಾರ್ ಮಾಡಿ ದಿನೇಶ್ ಮತ್ತು ಪ್ರೇಮ್ ಎಂಬವರ ಸಾವಿಗೆ ಕಾರಣವಾಗಿದ್ದರು.
ಇವತ್ತಿಗೂ ದಿನೇಶ್ ಮನೆಯವರಿಗೆ ಗೋಲೀಬಾರ್ ಬಗ್ಗೆ ಛಾರ್ಜ್ ಶೀಟ್ ಹಾಕದ ಕಾರಣ ವಿಮೆ ಸಿಕ್ಕಿಲ್ಲ. ಬಿಜೆಪಿಯ ಯಾವ ನಾಯಕನೂ ಇತ್ತ ತಲೆ ಹಾಕುತ್ತಿಲ್ಲ. ಅಲ್ಲಿ ಮಾನಂಪಾಡಿಯ ಸುಖಾನಂದನ ಮನೆಯಲ್ಲಿ ಬಾಗಿಲಿಗೆ ಬೀಗ ಹಾಕಿ ವರುಷ ಎರಡು ಕಳೆದಿದೆ. ಅಲ್ಲಿ ಮೌನ ಬಿಟ್ಟು ಮತ್ತಾರೂ ಇಲ್ಲ.
ಆತನಿದ್ದಾಗ ಮುಲ್ಕಿಗೇ ಒಂದು ಕಳೆಯಿದ್ದಂತೆ ಇತ್ತು. ಆತ ಮತ್ತೆ ಮತ್ತೆ ನೆನಪಾಗುತ್ತಿದ್ದಾನೆ.
ಸುಖಾನಂದನಿಗೆ ನುಡಿ ನಮನ.

Sunday, October 19, 2008

ಕಾಫಿ ಕುಡಿದು ಬನ್ನಿ!

ನೀವು ಶಿವಮೊಗ್ಗದಿಂದ ಸಾಗರ ಹಾದಿಯಲ್ಲಿ ಏಳು ಕಿಲೋಮೀಟರ್ ದೂರ ಸಾಗಿದರೆ ಸಿಂಹ ಹುಲಿ ಧಾಮ ಸಿಗುತ್ತದೆ.
ಅಲ್ಲಿಗೆ ಎರಡು ವರುಷದ ಹಿಂದೆ ಈಗ ಡೆಲ್ಲಿಯಲ್ಲಿರುವ ತುಂಬ ಚಂದದ, ಮತ್ತು ಚಂದದ ಮಾತುಗಾರ, ಭಯೋತ್ಪಾದಕ ಪತ್ರಕರ್ತ ವಿನಾಯಕ ಭಟ್ಟ, 3ನೆಯ ಕಣ್ಣು ಅದ್ಭುತವಾಗಿರುವ(ಛಾಯಾಗ್ರಹಕ)ಮಂಜುನಾಥ ಅಲಿಯಾಸ್ 'ಮಂಜು' ನೀರೇಶ್ವಾಲ್ಯ, ಮಂಗಳೂರಿನ ಮಹೇಶ, ಶೇಣಿಯವರ ಮೊಮ್ಮಗ ಬಾಲಮುರಳಿ ಎಲ್ಲ ಸೇರಿ ಥೇಟು ಹುಲಿ ಸಿಂಹಗಳಂತಿರುವ ನಾವು ಇಲ್ಲಿಗೆ ಹೋಗಿ ಬಂದಿದ್ದೆವು.
ಈಗ ಮತ್ತೊಮ್ಮೆ ಹೋಗಿ ಬಂದದ್ದು ನನ್ನ ಮನೆ ಮಂದಿಯೊಂದಿಗೆ. ಅಮ್ಮ, ಹೆಂಡ್ತಿ, ತಮ್ಮಂದಿರು, ಸ್ನೇಹಿತ ದಂಪತಿಗಳೊಂದಿಗೆ ಒಂದು ತಿರುಗಾಟ.
ಅಲ್ಲಿ ಚಿರತೆ, ಹೆಬ್ಬಾವು, ನವಿಲು, ಕರಡಿ, ನರಿ ಹೀಗೆ ಬೆರಳೆಣಿಕೆಯ ಪ್ರಾಣಿಗಳಿರುವ ಪುಟ್ಟ ಮ್ರಗಾಲಯವೂ ಇದೆ. ಮಂಗಗಳ ಕಾಟ ವಿಪರೀತ. ಕಾಲೇಜಿನ ಪ್ರೇಮಿಗಳು ಟೈಂ ಪಾಸ್ ಮಾಡಲೂ ಇಲ್ಲಿಗೆ ಬರುತ್ತಾರೆ. ಪೊದೆಗಳೆಡೆಯಲ್ಲಿ ಹೊರಳಾಡುತ್ತಿರುತ್ತಾರೆ. ಪ್ರವಾಸಿಗರು ಪ್ರೇಮಿಗಳ ಆಟ ಕೂಟ, ಹೊರಳಾಟಗಳನ್ನು ನೋಡಿಯೂ, ನೋಡದಂತೆ ನಟಿಸುತ್ತಾ ಮುಂದಕ್ಕೆ ಸಾಗುತ್ತಿರುತ್ತಾರೆ. ಮೆಲ್ಲನೆ ಹಿಂದಿರುಗಿ ಇಣುಕಿ, ತಲೆ ಕೆಡಿಸಿಕೊಂಡು (ಜೊತೆಗೆ ಹೆಂಡ್ತಿಯಿದ್ದರೂ) ಮುಂದಕ್ಕೆ ಹೋಗುತ್ತಿರುತ್ತಾರೆ; ನನ್ನಂತೆ!
ಮಧ್ಯಾಹ್ನ ಒಂದು ಗಂಟೆಯಿಂದ 2.15ರ ತನಕ ಮತ್ತು ಸಂಜೆ 5ರ ಬಳಿಕ ಹುಲಿ ಸಿಂಹ ಧಾಮದೊಳಕ್ಕೆ ಹೋಗುವಂತಿಲ್ಲ. ಪ್ರತಿ ತಲೆಗೆ 30ರೂಪಾಯಿಯಂತೆ ವಸೂಲು ಮಾಡಿ ವ್ಯಾನಿನಲ್ಲಿ ಕೂರಿಸಿ, ಧಾಮದೊಳಕ್ಕೆ ಕರೆದೊಯ್ಯುತ್ತಾರೆ. ವ್ಯಾನಿನ ಪಕ್ಕದಲ್ಲೇ ಹುಲಿಗಳು, ಸಿಂಹಗಳು, ಜಿಂಕೆ, ಕ್ರಷ್ಣಮ್ರಗಗಳು ಸುತ್ತಾಡುತ್ತಿರುತ್ತವೆ.
ಹುಲಿಗಳನ್ನು ಅತ್ಯಂತ ಹತ್ತಿರದಿಂದ, ಸ್ವತಂತ್ರ(!)ವಾಗಿ ಸುತ್ತಾಡುವುದನ್ನು ಇಲ್ಲಿ ಕಾಣಬಹುದು. ಕೋಪದಿಂದ ವ್ಯಾನಿನ ಮೇಲೆ ಅಟಾಕ್ ಮಾಡಿದರೆ, 180ಪೌಂಡ್ ಭಾರದ ಶಕ್ತಿಯಿರುತ್ತದೆ. ಅಂದ್ರೆ ವ್ಯಾನಿನ ಗ್ಲಾಸು, ತಂತಿ ಬಲೆ ಲೆಕ್ಕವೇ ಅಲ್ಲ ಎಂದು ಡ್ರೈವರ್ ಹೇಳುವ ಹೊತ್ತಿಗೆ ಒಳಗಿದ್ದವರೆಲ್ಲ ಬಾಯಿ ಮುಚ್ಚಿ ಕೂರುತ್ತಾರೆ, ಹುಲಿಗೆ ಕೋಪ ಬರದಿರಲೆಂದು.
ಹನ್ನೆರಡು ಕೆಜಿ ಮಾಂಸ ಡೈಲಿ ಕೊಡುತ್ತೇವೆ ಈ ಎಲ್ಲ ಹುಲಿಗಳಿಗೆ. ಸಿಂಹಕ್ಕೂ. ಬ್ಯಾಚ್ ವೈಸ್ ಐದೈದು ಸಿಂಹ ಬಿಡುತ್ತೇವೆ. ಇಲ್ಲದಿದ್ರೆ ಅವು ಕಚ್ಚಾಡಿಕೊಂಡು ಸಾಯುತ್ತವೆ ಅಂತ ವಿವಿರಿಸುತ್ತಾನೆ ಡ್ರೈವರ್. ಪಕ್ಕದಲ್ಲಿ ಅಪ್ಪ ತನ್ನ ಮಗುವಿಗೆ ವಿವರಿಸುತ್ತಾ ಇರುತ್ತಾನೆ, ನೋಡೂ ಹುಲಿ, ಅದರ ಮುಖ ನೋಡು, ಉಗುರು ನೋಡು....
ಕಳೆದ ವರುಷ ಒಬ್ಬ ಹುಲಿ ದಾಳಿಗೆ ಸತ್ತೇ ಹೋಗಿದ್ದಾನೆ. ಆ ಸಿಂಹ ಹೆಣ್ಣು ಸಿಂಹವನ್ನು ಕೊಂದೇ ಹಾಕಿದೆ ಅಂತ ವಿವರಿಸುವ ಡ್ರೈವರ್ ಗಂಭೀರವಾಗಿರುವಾಗಲೇ ಮತ್ತೊಂದು ಹುಲಿಯನ್ನು ತೋರಿಸಿ ವಿವರಿಸುತ್ತಾನೆ; ಅದು ಹೆಣ್ಣುಲಿ. ಊರ್ವಶಿ ಅಂತ. ಮದುವೆ ಮಾಡದೆ, ಬೇಜಾರಿನಿಂದ ಇದೆ! ಭರತ್ ಎಂಬ ಹುಲಿಯ ಬಳಿ ವ್ಯಾನು ನಿಲ್ಲಿಸಿ, ಹಾ, ಐದು ನಿಮಿಷ ರೆಸ್ಟು ಇದೆ. ಟೀ ಕಾಫಿ ಕುಡಿಯುವವರು ಇಳಿಯಬಹುದು ಅನ್ನುತ್ತಾನೆ ಸಹಜ ರೀತಿಯಲ್ಲಿ! ನೀವೂ ಒಮ್ಮೆ ಅಲ್ಲಿಗೆ ಹೋದರೆ ಕಾಫಿ ಕುಡಿದು ಬರಬಹುದು!
ರಾಮಾಯಣದಲ್ಲಿ ಸೀತಾ ಮೇಡಮ್ ಕೇಳಿದ ಜಿಂಕೆ ಇದೇನೇ, ಸಲ್ಮನ್ ಖಾನ್ ಕೇಳಿದ ಕ್ರಷ್ಣ ಮ್ರಗ ಇದೇನೇ ಅಂತ ಪರಿಚಯ ಸಾಗುತ್ತದೆ.
ಅಂದ ಹಾಗೆ ಹೇಳಬೇಕಾದುದು ಏನೆಂದರೆ; ಧಾಮದೊಳಗೆ ಒಂದು ಕ್ಯಾಂಟೀನ್ ಇದೆ. ಅಲ್ಲಿ ಎಂಆರ್ಪಿ ಬೆಲೆಗಿಂತ ಜಾಸ್ತಿ ಬೆಲೆಗೆ ಬಿಸ್ಕಿಟ್, ಚಾಕ್ಲೆಟ್ ಮಾರುತ್ತಾರೆ. ಚಿಲ್ಲರೆ ಕೊಡಬೇಕಾದ ಬದಲು ಚಾಕ್ಲೆಟ್ ಕೊಟ್ಟು ಲೂಟುತ್ತಾರೆ. ನನ್ನ ತಮ್ಮಂದಿರು ಇಂಜಿನಿಯರುಗಳಾಗಿ ಮುಂಬೈ, ಚೆನ್ನೈ ಸೇರಿದ ಮೇಲೆ ಥೇಟು ಮಾರವಾಡಿಗಳಂತಾಗಿದ್ದಾರೆ. ನ್ಯಾಯ ಮಾತಾಡುತ್ತಾರೆ. ಚೌಕಾಸಿಗಿಳಿಯುತ್ತಾರೆ. ಇಬ್ಬರೂ ಕ್ಯಾಂಟಿನ್ನವನಲ್ಲಿ ಚರ್ಚೆಗಿಳಿದಿದ್ದರು. ಏಳು ರೂಪಾಯಿ ಎಂಆರ್ ಪಿ ಬರೆದ ಬಿಸ್ಕಿಟನ್ನು ಯಾಕೆ ಹತ್ತು ರೂಪಾಯಿಗೆ ಮಾರುವುದು? ಅಂಗಡಿಯಾತ ಅನಕ್ಷರಸ್ಥರಿಗೆ ವಿವರಿಸುವಂತೆ ಹೇಳುತ್ತಿದ್ದ, ನಾವು ಟ್ಯಾಕ್ಸ್ ಕಟ್ಟುತ್ತೇವೆ. ಹಾಗೆ ರೇಟು ಜಾಸ್ತಿ ಅಂತ!
ಮುಖ್ಯ ಮಂತ್ರಿಯ ಊರಿನಲ್ಲಿ ಹೀಗೆ ಮೋಸ ಮಾಡುವುದು ಸರಿಯಾ? ನೀನ್ಯಾವ ಪೊಟ್ಟು ಪತ್ರಕರ್ತ? ಅಂತ ನನ್ನನ್ನು ಕಿಚಾಯಿಸಿದ್ದಕ್ಕೆ ಧಾಮದಲ್ಲಿದ್ದ ದೂರು ಪೆಟ್ಟಿಗೆಗೆ ಕ್ಯಾಂಟಿನ್ನವನು ಮಾಡುವ ಮೋಸಗಳನ್ನು ಬರೆದು ಹಾಕಿ ಬಂದೆ. ನ್ಯಾಯದ ಬೆಲೆಯಲ್ಲಿ ವಸ್ತುಗಳನ್ನು ಮಾರಾಟ ಮಾಡುವಂತೆ ನೋಡಿಕೊಳ್ಳಬೇಕು. ಮತ್ತೊಂದು ಕ್ಯಾಂಟಿನ್ ಗೆ ಅವಕಾಶ ಕೊಟ್ಟು ಏಕಸ್ವಾಮ್ಯತೆಯನ್ನು ಇಲ್ಲವಾಗಿಸಬೇಕು ಎಂದೆಲ್ಲ ದೂರಿನಲ್ಲಿ ಬರೆದಿದ್ದೆ. ಅದರಿಂದ ಪ್ರಯೋಜನವಾಗದು ಅಂತ ಗೊತ್ತಾಗಿ ನಿಮ್ಮ ಮುಂದೆ ವಿನಂತಿಸುವುದು ಏನೆಂದರೆ, ನೀವೂ ಹುಲಿ ಸಿಂಹ ಧಾಮಕ್ಕೆ ಹೋಗಿ ಬನ್ನಿ. ಅಲ್ಲಿನ ಸುಂದರ ಅನುಭವಗಳನ್ನು ನಿಮ್ಮದಾಗಿಸಿ. ಆಮೇಲೆ ನನಗಾಗಿ ಕ್ಯಾಂಟಿನ್ನವನೊಂದಿಗೆ ನ್ಯಾಯಯುತ ಬೆಲೆಗೆ ಜಗಳವಾಡಿ. ಅದಕ್ಕಾಗಿ ಬಿಸ್ಕಿಟ್ ಖರೀದಿಸಿ, ಕಾಫಿ ಕುಡಿಯಿರಿ!

Monday, September 15, 2008

ಹಕ್ಕಿಗಾಗಿ ಹಕ್ಕಿಗಳ ಹೋರಾಟ

ಗುಬ್ಬಚ್ಚಿ, ಗಿಳಿ, ನವಿಲು, ಕಾಗೆ, ಗೂಬೆ, ಪಾರಿವಾಳ, ಕೊಕ್ಕರೆ, ಹಂಸ,ಗಿಡುಗ, ಗೀಜಗ, ಹದ್ದು, ಮರಕುಟಿಕ, ಕೋಗಿಲೆ, ಕೋಳಿ, ಬಾತು ಕೋಳಿ, ಮರ ಬಾತು, ಮಿಂಚುಳ್ಳಿ, ತರಗೆಲೆ ಪಕ್ಷಿ ಎಂಬ ಹಕ್ಕಿಗಳಂತೆ ನೀಲಕಂಠ, ಶೃಂಗ ಚಂಚು, ತಂತು ಬಾಲ ಭುಜಂಗ, ಮಾಲಿ ಕೋಳಿ, ನವಿಲ ಕೆಂಬೂತ, ಹೆಜ್ಜಾರ್‍ಲೆ, ರಾಜ ಹಂಸ, ಕಡಲ ಕಾಗೆ, ಚಮಚ ಕೊಕ್ಕು, ಗಂಧರ್ವ ಪಕ್ಷಿ, ಬೂದು ಗೌಜಲಕ್ಕಿ, ರಾಜ ಪಾರಿವಾಳ, ಚಂದ್ರ ಮುಕುಟ, ಮಾಸಲು ಗೂಬೆ, ಗುಬುಟು ಬಾತು, ರಾಜ ಹಕ್ಕಿ, ಬೆಟ್ಟ ಗೊರವಂಕ, ಬಸ್ಟರ್‍ಡ್ ಹಕ್ಕಿ, ರಕ್ತ ಕೆಂಬೂತ, ಬುಲ್‌ಬುಲ್, ಮೈನಾ, ಬೂದು ಕಳಿಂಗ, ಹೊನ್ನಕ್ಕಿ, ಬಡಗಿ ಹಕ್ಕಿ, ಮರಕುಟಿಕ, ಉಷ್ಟ್ರ ಪಕ್ಷಿ ಪಟ್ಟಿ ಮಾಡುತ್ತ ಹೋದರೆ ನೂರಾರು, ಸಾವಿರಾರು ಹಕ್ಕಿಗಳ ಲೆಕ್ಕ ಸಿಗಬಹುದು. ಕೋಗಿಲೆ ಇಂಪಾಗಿ ಹಾಡುತ್ತದೆ, ಕುಹೂ ಕುಹೂ ಎಂದು. ನಮ್ಮ ರಾಷ್ಟ್ರ ಪಕ್ಷಿ ನವಿಲು ಕುಣಿಯುತ್ತದೆ ಥೈತಕ ಥೈತಕವೆಂದು. ಹಂಸ ಈಜಾಡುತ್ತದೆ, ನೋಡಲೆಷ್ಟು ಚಂದ ಆಹಾ! ಬನ್ನಿ, ಅತಿಥಿಗಳೇ ಅಂತ ಗಿಳಿ ಮಾತಾಡುತ್ತದೆ ಗೊತ್ತಾ? ಎಂಬಂತಹ ಅಚ್ಚರಿಗಳು ಹಕ್ಕಿಗಳ ಪ್ರಪಂಚದಲ್ಲಿ ನಮಗೆ ಮಾಮೂಲು. ಗಿಳಿಗಳಲ್ಲಿ ಹೆಚ್ಚಿನವು ಹಸಿರು ಬಣ್ಣದವಾದರೂ ಬಿಳಿ, ಕಪ್ಪು, ಕೆಂಪು, ಹಳದಿ, ಪಂಚವರ್ಣ ಮುಂತಾದ ಬಣ್ಣದ ಗಿಳಿಗಳೂ ಕಾಣಸಿಗುತ್ತವೆ. ಭಾರತದಲ್ಲಿ ಸುಮಾರು ಇಪ್ಪತ್ತು ಪ್ರಭೇದದ ಗಿಳಿಗಳಿವೆಯಂತೆ. ಗಿಣಿಶಾಸ್ತ್ರ ಎಂದು ಹೇಳಿಕೊಂಡು ಗೂಡೊಳಗೆ ಗಿಳಿಗಳನ್ನಿಟ್ಟು ಜ್ಯೋತಿಷ್ಯ ಹೇಳಿ ಹೊಟ್ಟೆ ತುಂಬಿಸಿಕೊಳ್ಳುವವರಿಗೇನೂ ಕಡಿಮೆಯಿರಲಿಲ್ಲ. ಗಿಣಿಗಳು ಕಡಿಮೆಯಾದಂತೆ ಶಾಸ್ತ್ರದವರೂ ಕಾಣೆಯಾಗುತ್ತಿದ್ದಾರೆ. ಅದೇ ರೀತಿ ಕುಕ್ಕುಟ ಶಾಸ್ತ್ರ ಅಂತಲೂ ಇದೆ. ಬೆಳಿಗ್ಗೆಯಾಗುವುದೇ ಕೋಳಿ ಕೂಗುವುದರಿಂದ ಎಂಬ ಮಾತಿದೆ. ಕೋಳಿಗಳನ್ನು ಆಧರಿಸಿಯೇ ಇವತ್ತು ಸಾವಿರಾರು ಮಂದಿ ಕೋಟ್ಯಂತರ ರೂಪಾಯಿಯ ವಹಿವಾಟು ನಡೆಸುತ್ತಿಲ್ಲವೆ? ಆಹಾರವಾಗಿ ಕೋಳಿ, ಮಾಂಸದ ರೂಪದಲ್ಲೂ, ಮೊಟ್ಟೆಯ ವಿಧದಲ್ಲೂ ಲಭ್ಯ. ಅದರ ಹಿಕ್ಕೆ ಒಳ್ಳೆಯ ಗೊಬ್ಬರ! ಕೋಳಿ ಅಂಕಗಳಲ್ಲಿ ಕೋಳಿ ಕದನ ನೋಡಲು ಸೇರುವ ನೂರಾರು ಮಂದಿ ಕಟ್ಟುವ ಬಾಜಿ ಸಾವಿರ, ಲಕ್ಷ ರೂಪಾಯಿಗಳ ಲೆಕ್ಕದಲ್ಲಿರುತ್ತದೆ. ಪಾರಿವಾಳಿಗೆ ಟ್ರೈನಿಂಗ್ ಕೊಟ್ಟು ಆಕಾಶದೆತ್ತರ ಹಾರಿಸಿ ಬೆಟ್ಟಿಂಗ್ ಕಟ್ಟಿ ದುಡ್ಡೆಣಿಸುವವರೂ ಇದ್ದಾರೆ.ಕಾಲಿದಾಸನ ಕಾವ್ಯದಲ್ಲಿ ನಳ ದಮಯಂತಿ ನಡುವೆ ಹಂಸ ಪ್ರೇಮ ಪತ್ರ ರವಾನಿಸಿದ ಪರಿಣಾಮವೇ ಅಲ್ಲವೇ ಇವತ್ತು ಪತ್ರ ಬಟಾವಾಡೆ ಮಾಡುವ ಇಲಾಖೆ ಅಂಚೆ(ಹಂಸ) ಇಲಾಖೆಯಾಗಿರುವುದು. ಹಾಗೆಯೇ ಪಾರಿವಾಳವೂ ಪ್ರೇಮ ಪತ್ರ ಕೊಂಡೊಯ್ಯುವ ಕಥೆ ಇದೆ. ಮೇಘಸಂದೇಶದಲ್ಲಿ ಪಾರಿವಾಳ ಪ್ರೇಮ ಪತ್ರ ಕೊಂಡೊಯ್ಯುವಂತೆ ರಾಮಾಯಣದಲ್ಲೂ ಪಕ್ಷಿಗಳ ಪ್ರಸ್ತಾಪ ಬರುತ್ತದೆ. ರಾಮಾಯಣದಲ್ಲಿ ಜಟಾಯು ಪಕ್ಷಿ, ಸೀತೆಯನ್ನು ಕದ್ದೊಯ್ಯುತ್ತಿದ್ದ ರಾವಣನೊಂದಿಗೆ ಹೋರಾಡಿ, ರಾಮನಿಗೆ ಈ ವಿಚಾರ ಹೇಳಿ ಸತ್ತುಹೋದ ಕಥೆ ನೀವು ಕೇಳಿರಬಹುದು.ಶನಿದೇವನಿಗೆ ಕಾಗೆ, ಸುಬ್ರಹ್ಮಣ್ಯನಿಗೆ ನವಿಲು, ವಿಷ್ಣುವಿಗೆ ಗರುಡ, ಸರಸ್ವತೀಗೆ ಹಂಸ ಹೀಗೆ ಅನೇಕ ದೇವರಿಗೆ ಪಕ್ಷಿಗಳೇ ವಾಹನಗಳು. ಗಿಳಿಯೊಂದರ ಮರಿಗಳೆರಡರಲ್ಲಿ ಒಂದು ಸನ್ಯಾಸಿಯ ಮನೆ ಸೇರಿ, ಅಲ್ಲಿಗೆ ಬರುವ ಅತಿಥಿಗಳನ್ನು, ಬನ್ನಿ, ನಿಮಗೆ ಸ್ವಾಗತ ಎಂದು ಉಪಚರಿಸಿದರೆ, ಡಕಾಯಿತನ ಮನೆ ಸೇರಿದ ಮತ್ತೊಂದು ಗಿಳಿ ಮರಿ, ಬಂದ ಅತಿಥಿಗಳಲ್ಲಿ ಕಡಿಯಿರಿ, ಕೊಲ್ಲಿರಿ ಎಂದು ಹೇಳುವ ನೀತಿ ಕಥೆಯನ್ನು ನಾವು ಶಾಲಾ ದಿನಗಳಲ್ಲಿ ಓದಿದ್ದೇವೆ. ಅದೇ ರೀತಿ ಒಗ್ಗಟ್ಟಿನಲ್ಲಿ ಬಲವಿದೆ ಮಾತಿಗೂ ಹಕ್ಕಿಗಳ ಕಥೆಯೇ ಉದಾಹರಣೆ. ಬೇಟೆಗಾರನೊಬ್ಬ ಕಾಳುಗಳನ್ನು ಹಾಕಿ ಬಲೆ ಬೀಸಿದಾಗ, ಬಲೆಯೊಳಗೆ ಸಿಕ್ಕಿ ಹಾಕಿಕೊಂಡ ಪಾರಿವಾಳಗಳೆಲ್ಲ ಒಗ್ಗಟ್ಟಿನಿಂದ ಹಾರಿ ಹೋಗಿ ಬಚಾವಾದವು!ಬುದ್ಧಿವಂತಿಕೆಗೆ; ಕಾಗೆ ಹೂಜಿಗೆ ಕಲ್ಲುಗಳನ್ನು ಹಾಕಿ ನೀರು ಕುಡಿದ ಕಥೆಯೇ ಉದಾಹರಣೆ! ನವಿಲು, ಕೊಕ್ಕರೆ ಮುಂತಾದ ಹಕ್ಕಿಗಳ ಗರಿಗಳಿಂದ ಚಾಮರ ಮಾಡಿಕೊಂಡು ಗಾಳಿ ಬೀಸಿಕೊಂಡು ಹಾ......ಅನ್ನುವ ನಾವು, ರಸ್ತೆಯಲ್ಲಿ ಸತ್ತು ಬಿದ್ದು ವಾಸನೆ ಬರುವ ನಾಯಿ, ಬೆಕ್ಕು, ಇಲಿಗಳ ಹೆಣಗಳನ್ನು ಹೊತ್ತೊಯ್ದು, ನಿರ್ಮಲಗೊಳಿಸುವ ಕಾಗೆ, ಹದ್ದು, ರಣಹದ್ದುಗಳ ಸೇವೆಯನ್ನು ಎಷ್ಟು ಕೊಂಡಾಡಿದರೂ ಕಡಿಮೆಯೇ ಅಲ್ಲವೇ? ಶಾಂತಿ ಸೂಚಕವಾಗಿ ಪಾರಿವಾಳವನ್ನು ಬಳಸುವ ನಾವು ಸ್ವಾತಂತ್ರ್ಯ ಸೂಚಕವಾಗಿಯೂ ಆ ಹಕ್ಕಿಯನ್ನು ಕ್ರೀಡಾಕೂಟ ಮುಂತಾದೆಡೆ ಹಾರಿ ಬಿಡುತ್ತೇವೆ. ಪ್ರಪಂಚದಲ್ಲಿ ಇನ್ನೂರು ಜಾತಿಯ ಪಾರಿವಾಳಗಳಿವೆಯಂತೆ. ಪಾರಿವಾಳಗಳು ನಿರಂತರ ಹದಿನೇಳು ತಾಸು ಹಾರಬಲ್ಲವಂತೆ.ಉಳಿದೆಡೆ ಬಿಡಿ, ಕರ್ನಾಟಕದಲ್ಲೇ ರಂಗನತಿಟ್ಟು, ಗುಡವಿ, ಘಟಪ್ರಭಾ, ಕೂಕೆ ಬೆಳ್ಳೂರು, ಮಂಡ ಗದ್ದೆಯಂತಹ ಹತ್ತಾರು ಪಕ್ಷಿಧಾಮಗಳಿವೆ. ಕೇವಲ ಸಂತಾನೋತ್ಪತ್ತಿಗಾಗಿಯೇ ಪಕ್ಷಿಧಾಮಗಳಿಗೆ ಬಂದು ಹೋಗುವ ಹಕ್ಕಿಗಳಿರುವಲ್ಲಿ ಪರಿಸರ ಚೆನ್ನಾಗಿರುತ್ತದೆ. ಇವತ್ತು ಗುಬ್ಬಿ ಗುಬ್ಬಿ ಚಿಂವ್ ಚಿಂವ್ ಗುಬ್ಬಿ ಹಾಡು ಹಾಡಿದರೂ ಗುಬ್ಬಿಗಳು ಬಾರವು. ಕಾಂಕ್ರೀಟು ಕಟ್ಟಡಗಳು ಹೆಚ್ಚುತ್ತಿದ್ದಂತೆ, ಹಂಚಿನ ಮನೆಗಳಲ್ಲಿರುವಂತೆ ಫೋಟೋಗಳನ್ನಿಡುವುದಿಲ್ಲ. ಆ ಫೋಟೊಗಳ ಹಿಂಬದಿಯಲ್ಲಿ ಗೂಡು ಕಟ್ಟಿ ಚಿಂವ್‌ಚಿಂವ್ ಅನ್ನುವ ಗುಬ್ಬಿಗಳ ಕಾಲ ಅಜ್ಜಿಕಥೆಯಂತೇ ಮುಗಿದು ಹೋಗುತ್ತಿದೆ. ಮೊಬೈಲು ಭರಾಟೆಗೆ, ಅವುಗಳಿಂದ ಹೊರಡುವ ಕಾಣದ ಅಲೆಗಳಿಗೆ ಗುಬ್ಬಿಗಳು ಪತರಗುಟ್ಟುತ್ತಿವೆ. ಹೀಗೆ ಹಕ್ಕಿಗಳ ಬಗ್ಗೆ ಬರೆಯುತ್ತ ಕೂತರೆ ಮಹಾಗ್ರಂಥವೇ ರಚನೆಯಾಗಬಹುದು. ಪಂಜರದಲ್ಲಿ ಹಕ್ಕಿಗಳನ್ನು ಕೂಡಿ ಹಾಕಿ, ಅವುಗಳ ಕೂಗು, ಹಾರಲಾಗದಿದ್ದರೂ ಅವುಗಳ ಹಾರಾಟ, ನಾವು ಹಾಕಿದ ಕಾಳು, ತಿಂಡಿಗಳನ್ನು ತಿನ್ನುವ ಪರಿಗಳನ್ನೆಲ್ಲ ನೋಡುತ್ತ ಕೂತರೆ, ಅಕ್ವೇರಿಯಂನಲ್ಲಿ ಬಣ್ಣ ಬಣ್ಣದ ಮೀನುಗಳ ಬಂಧನದೊಳಗಿನ ಆಟದಂತೆಯೇ ಕಾಣುತ್ತದೆ. ಪಕ್ಷಿವೀಕ್ಷಣೆಗೆ ಅಂತ ಕೂರುವುದು ಕಷ್ಟ. ಆದರೂ ಪ್ರಯತ್ನಿಸಿ. ಹಾರಿ ಬಂದು ಕೂರುವ ಹಕ್ಕಿ, ಕ್ರಿಮಿಕೀಟ, ಹುಳ ಹುಪ್ಪಟೆಗಳನ್ನು ಪಟಕ್ಕೆಂದು ಹೊತ್ತೊಯ್ಯುವ ರೀತಿ, ಕಷ್ಟಪಟ್ಟು ಕಟ್ಟಿದ ಗೂಡೊಗಳಗಿನಿಂದ ಬಾಯಿತೆರೆದು ತಲೆ ಹೊರಹಾಕುವ ಮರಿಗಳಿಗೆ ಆಹಾರ ಉಣಿಸುವ ಪರಿಯನ್ನು ನೀವೆಲ್ಲಾದರೂ ನೋಡಿದ್ದೀರಾ? ಹುಲ್ಲುಕಡ್ಡಿಗಳನ್ನು ಹೆಕ್ಕಿ ಹೆಕ್ಕಿ ತಂದು ಗೂಡು ಕಟ್ಟುವುದನ್ನು ನೋಡುವ ಅವಕಾಶ ನಿಮಗೆಲ್ಲಾದರೂ ಸಿಕ್ಕಿದೆಯೇ? ಅವುಗಳ ಕೂಗಾಟ, ಚೀರಾಟ, ಹಾಡು, ಮಾತು ನಮಗೆ ಅರ್ಥೈಸಲು ಸಾಧ್ಯವಾಗಿದೆಯೇ? ಮೊನ್ನೆ ಒಂದೆಡೆ ಭಾಷಣಕಾರರೊಬ್ಬರು, ಪಕ್ಷಿಗಳು ಹೇಗೆ ರೈತನ ಮಿತ್ರ ಎಂಬುದನ್ನು ವಿವರಿಸುತ್ತಿದ್ದರು; ಒಂದು ಇಲಿ ಜೋಡಿ ವರುಷಕ್ಕೆ ನಾಲ್ಕು ಲಕ್ಷದಷ್ಟು ಇಲಿಗಳ ಹುಟ್ಟಿಗೆ ಕಾರಣವಾಗುತ್ತವೆ. ಈ ಇಲಿಗಳನ್ನು ಹದ್ದು, ಕಾಗೆ, ರಣಹದ್ದು, ಗಿಡುಗಗಳಂತಹ ಹಕ್ಕಿಗಳು ತಿಂದು ರೈತನನ್ನು ಉಳಿಸುತ್ತವೆ ಅಂತ ! ಪರಾಗ ಸ್ಪರ್ಶ, ಬೀಜಗಳ ಪ್ರಸರಣದಲ್ಲೂ ಹಕ್ಕಿಗಳ ಪಾತ್ರ ಮಹತ್ತರ. ಆ ಮೂಲಕ ಅವು ಕಾಡಿನ ಬೆಳವಣಿಗೆಗೆ ದೊಡ್ಡ ಕೊಡುಗೆ ನೀಡುತ್ತವೆ. ಛಾಯಾಗ್ರಾಹಕರಿಗೆ ಹಕ್ಕಿಗಳು ದೊಡ್ಡ ಸಂಪತ್ತು. ಇವತ್ತು ವಿಮಾನದ ಕಲ್ಪನೆಯ ಹಿಂದೆ ಹಕ್ಕಿಗಳ ಹಾರಾಟದ ಸ್ಫೂರ್ತಿಯಿದ್ದಂತೆ ನಮ್ಮ ನೂರಾರು ಕವಿಗಳ ಕವನಗಳಿಗೆ ಹಕ್ಕಿಗಳೇ ಸ್ಫೂರ್ತಿ. ಹಕ್ಕಿ ಹಾರುತಿದೆ ನೋಡಿದಿರಾ ಅಂತ ಪ್ರಸಿದ್ಧ ಕವಿಯ ಕವನ ನಮಗೆಲ್ಲ ಗೊತ್ತಿದೆ. ಚೆನ್ನಾಗಿ ಹಾಡುವವರನ್ನು ಹಾಡು ಹಕ್ಕಿ ಅಂತ ಕರೆಯುತ್ತೇವೆ. ಚೆನ್ನಾಗಿ ಕುಣಿಯುವವರನ್ನು ನವಿಲು ಅನ್ನುತ್ತೇವೆ. ಚೆಂದದ ಹುಡುಗಿಯರನ್ನು ಹಕ್ಕಿ ಎಂದೇ ಯುವಕರು ಕರೆಯುತ್ತಾರೆ. ಗಬಗಬ ತಿನ್ನುವವನಿಗೆ ಬಕ ಪಕ್ಷಿ ಅನ್ನುತ್ತೇವೆ. ಒಂದು ಕೈಗಾರಿಕೆಗಾಗಿ, ವಿಮಾನ ನಿಲ್ದಾಣಕ್ಕಾಗಿ ಇತ್ಯಾದಿ ಅಭಿವೃದ್ಧಿ ಕಾರ್‍ಯಗಳ ನೆಪದಲ್ಲಿ ನಮ್ಮನ್ನು ಒಕ್ಕಲೆಬ್ಬಿಸಿದರೆ ಪ್ರತಿಭಟಿಸುತ್ತೇವೆ. ಪುನರ್‌ವಸತಿಗಾಗಿ ಹೋರಾಡುತ್ತೇವೆ. ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ. ಆದರೆ ಹಕ್ಕಿಗಳ ಜೀವಾಳ ಆಗಿರುವ ಕಾಡನ್ನು, ಮರಗಳನ್ನು ಕಡಿಯುವ ನಾವು ಹಕ್ಕಿಗಳ ಆವಾಸ ಸ್ಥಾನವನ್ನೇ ನಾಶಗೈಯುತ್ತಿದ್ದೇವಲ್ಲ? ಆ ಹಕ್ಕಿಗಳು ಹೇಗೆ ಪ್ರತಿಭಟಿಸಬೇಕು? ಯಾರಲ್ಲಿ ತಮ್ಮ ಅಳಲನ್ನು ಹೇಳಿಕೊಳ್ಳಬೇಕು? ಅವುಗಳು ತಮ್ಮ ಆವಾಸ ಸ್ಥಾನದ ಹಕ್ಕಿಗಾಗಿ ಹೋರಾಟ ಮಾಡಿದ್ರೆ ಅದು ನಮಗೆ ಅರ್ಥವಾದೀತೆ? ಹಕ್ಕಿಗಳಿಗೆ ಪುನರ್ ವಸತಿ ಕಲ್ಪಿಸುವವರು ಯಾರು? ಈಗಾಗಲೇ ಕೊಳಕು ನೀರು, ಗಾಳಿ, ಆಧುನಿಕತೆಯ ಭರಾಟೆ, ವಿಮಾನಗಳ ಹಾರಾಟದ ಸದ್ದು, ಮರಗಳ ನಾಶ, ಕಾರ್ಖಾನೆಗಳ ಹೊಗೆ, ಮೊಬೈಲು ಮುಂತಾದ ಉಪಕರಣಗಳ ಕಾಣದ ವಿದ್ಯುದಲೆಗಳ ಪರಿಣಾಮ ಅನೇಕ ಹಕ್ಕಿಗಳ ಸಂತತಿಯೇ ನಾಶವಾಗಿದೆ. ಕೆಲ ಜಾತಿಗಳ ಸಂಖ್ಯೆ ಇಳಿಮುಖವಾಗುತ್ತಿದೆ. ನಾವಿನ್ನೂ ಎಚ್ಚರಗೊಳ್ಳದಿದ್ದರೆ ಹೇಗೆ? ಅಲ್ಲವೇ?ನೆನಪಿರಲಿ; ಪಕ್ಷಿ ಪ್ರೀತಿ ನಮ್ಮ ನಾಡಿನ ಸ್ವಾಸ್ಥ್ಯಕ್ಕೆ ಪೂರಕ.

Tuesday, September 2, 2008

ಮಣ್ಣಿಗಾಗಿ


ಗಣೇಶೋತ್ಸವವನ್ನು ಸಾರ್ವಜನಿಕವಾಗಿ ಆಚರಿಸುವುದನ್ನು ತಿಲಕರು ಆರಂಭಿಸಿದ್ದು; ಈ ಮಣ್ಣಿನ ಸ್ವಾತಂತ್ರ್ಯಕ್ಕಾಗಿ ಜನರನ್ನು ಸಂಘಟಿಸಿ, ಹೋರಾಟ ಬಲಗೊಳಿಸಬೇಕು ಎಂಬ ಉದ್ದೇಶದಿಂದ.

ಗಣೇಶನ ವಿಗ್ರಹವನ್ನು ಮಾಡುವುದು ಕೂಡ ಮಣ್ಣಿನಿಂದಲೇ.

ಇವತ್ತು ನಮ್ಮ ಮಣ್ಣು ಎಸ್ಇಝಡ್, ನಾಗಾರ್ಜುನ ಅಂತೆಲ್ಲ ಕಾರ್ಖಾನೆಗಳಿಗೆ ಆಹುತಿಯಾಗುತ್ತಿರುವ, ವಿದೇಶಿ ಕಂಪೆನಿಗಳ ಪಾಲಾಗುತ್ತಿರುವ ಹೊತ್ತು.

ಅವತ್ತು ನಮ್ಮ ಮಣ್ಣನ್ನು(ದೇಶವನ್ನು) ಉಳಿಸಿದ ಮಣ್ಣ ಗಣೇಶನನ್ನು ಮಾಡಿ ಉತ್ಸವ ಆಚರಿಸುವ ಸಮಿತಿಗಳು, ಸಂಘಟನೆಗಳು, ಇವತ್ತು ಮತ್ತೆ ವಿದೇಶಿ ಕಂಪೆನಿಗಳಿಂದ, ವಿಷಕಾರಕ ಕಾರಖಾನೆಗಳಿಂದ ನಮ್ಮ ಮಣ್ಣನ್ನು ಉಳಿಸಿಕೊಳ್ಳಬೇಡವೇ?

ಅವತ್ತು ಉದ್ದೇಶ ಬೇರೆಯಿತ್ತು, ಇವತ್ತೂ ಗಣೇಶೋತ್ಸವದ ನೆಪದಲ್ಲಿ ಸಂಘಟಿತರಾಗುತ್ತಲೇ ನಮ್ಮ ಮಣ್ಣನ್ನು ಹಾಳಾಗದಂತೆ, ಕೈಗಾರಿಕೆಗಳ ಪಾಲಾಗದಂತೆ ಕಾಪಾಡಬೇಕಾದ ಜವಾಬ್ದಾರಿ ಹೊರಬೇಕಲ್ಲ?

ಬದಲಾಗಿ ಜೈ ಗಣೇಶ ಅಂತೆಲ್ಲ ಕುಣಿಸುವ, ಒಂಚೂರೂ ಭಕ್ತಿ ಹುಟ್ಟಿಸದ ಫಿಲ್ಮ್ ಡಾನ್ಸ್ ಗಳಿಗೆ ಕುಪ್ಪಳಿಸಲು ಪ್ರೇರೇಪಿಸಿ, ತಿಲಕರ ಕನಸು, ಉದ್ದೇಶವನ್ನೇ ಬುಡಮೇಲಾಗಿಸುವುದು ಸರಿಯಾ?

Monday, September 1, 2008

ಸೂಪರ್ ಮ್ಯಾನ್


ಮೊನ್ನೆ ಒಬ್ಬ ಬಡಾಯಿಕೊಚ್ಚಿಕೊಳ್ಳುತ್ತಿದ್ದ.

ನನಗೂ ಸೂಪರ್ ಮ್ಯಾನ್ ಗೂ ಇರೋದು ಒಂದೇ ವ್ಯಾತ್ಯಾಸ!

ಅದೇನು ಮಾರಾಯ ಅಂತ ಕೇಳಿದೆ, ನಿಮ್ಮಂತೆ ಕುತೂಹಲದಿಂದ.

ಸೂಪರ್ ಮ್ಯಾನ್ ಪ್ಯಾಂಟಿನ ಹೊರಗೆ ಚಡ್ಡಿ ಹಾಕುತ್ತಾನೆ! ನಾನು......

Sunday, August 31, 2008

ಭೂತ ಗೀತ

ನಮ್ಮನ್ನೂ ಸೇರಿಸಿ ಅನೇಕರು ಮಾತನಾಡುವಾಗ ಸುಮ್ಮನೆ ಗಮನಿಸಿ; ಮಾತನ್ನು 'ಆಡುವಾಗ' ಪದಗಳ ಬಳಕೆ ಮಜಾ ಕೊಡುತ್ತದೆ.
ನಿಮ್ದು ಊಟ ಗೀಟ ಆಯಿತಾ? ಅಂತ ಕೇಳುತ್ತಾರೆ.
ಊಟ ಸರಿ. ಇದೆಂತಾ ಮಾರಾಯರೆ, ಗೀಟಾ?!
ತಿಂಡಿ ಗಿಂಡಿ ತಿಂದ್ರಾ? ಕಾಫಿ ಗೀಫಿ ಏನಾದ್ರೂ ಬೇಕಾ? ಅಂತೆಲ್ಲ ಕೇಳುವಾಗ ನಾವೂ ವಾಪಾಸು ಕೇಳಬಹುದೇನೋ?
ತಿಂಡಿ ಕೊಡಿ. ತಿಂದದ್ದು ಹೆಚ್ಚಾದರೆ ಬೇಕಾಗುತ್ತದೆ, ಗಿಂಡಿ(ಚೆಂಬು).
ಇವತ್ತು ಸ್ಟ್ರೈಕು ಗಿಯ್ಕು ಉಂಟಾ? ಬಸ್ಸು ಗಿಸ್ಸು ಇಲ್ದಿದ್ರೆ ಕಷ್ಟ ಅಲ್ವಾ? ಹೀಗೆ ಸಾಗುತ್ತದೆ ಮಾತು.
ಒಂದು ಜೋಕು ಇಂತಹ ಪದಗಳ ಬಳಕೆಯಿಂದಾಗಿಯೇ ಚಾಲ್ತಿಯಲ್ಲಿದೆ;
ರಾತ್ರಿ ಹೋಗುವಾಗ ಭೂತ ಗೀತ ಬಂದ್ರೆ ಏನು ಮಾಡ್ತೀಯಾ ಅಂತ ಒಬ್ಬ ಕೇಳಿದನಂತೆ. ಅದಕ್ಕೆ ಇನ್ನೊಬ್ಬ, ಭೂತ ಬಂದ್ರೆ ಏನು ಮಾಡ್ತೀನಂತ ಗೊತ್ತಿಲ್ಲ, ಆದ್ರೆ ಗೀತ ಬಂದ್ರೆ ಆಚೆ ಕರೆದುಕೊಂಡು ಹೋಗ್ತೇನೆ!
ಅವ ದುಡ್ಡು 'ಗಿಡ್ಡು' ಖರ್ಚು ಮಾಡುವುದಕ್ಕೆ ಹಿಂದು ಮುಂದು ನೋಡೋದಿಲ್ಲ. ಆದ್ರೆ ಅವ ಹೇಳಿದ ಕೆಲ್ಸ ಗಿಲ್ಸ ಆಗಿಲ್ಲಾಂದ್ರೆ ಕೋಪ ಗೀಪ ಮಾಡಿಕೊಂಡ್ರೆ ಅಬ್ಬಬ್ಬಾ!
ಅವ ತುಂಬ ಜಾಣ; ಸಂಮಾನ ಗಿಂಮಾನ ಮಾಡಿ ನಿಮ್ಮನ್ನು ಓಲೈಸಿ ಗೀಲೈಸಿ ಎಲ್ಲೈಸಿ ಪಾಲಿಸಿ ಮಾಡಿಬಿಟ್ಟಾನು!
ನೀವೂ ಇಂತಹ ಪದಗಳನ್ನು ಗಮನಿಸಿ ನನ್ಗೂ ಕಳಿಸಿ ಆಯ್ತಾ...
ತುಂಬ ಕಳುಹಿಸಿಕೊಟ್ರೆ ಫ್ರೈಜು ಗಿಯ್ಜು ಗ್ಯಾರಂಟಿ!

Saturday, August 23, 2008

ಯಾರಲ್ಲಿ ಕೇಳಲಿ?

ಕೈಗಾರಿಕೆ ಬರುತ್ತದೆ. ಉದ್ಯೋಗ ಸಿಗುತ್ತದೆ. ಹಳ್ಳಿ ಪೇಟೆಯಾಗಿ ಜನರಲ್ಲಿ ದುಡ್ಡಾಗುತ್ತದೆ...
ಸರಿ, ನಮ್ಮ ಜಮೀನು ಕೊಡುತ್ತೇವೆ. ಆದರೆ ಪರಿಹಾರ ಕೊಡಿ.
ಎಸ್ಇಝಡ್ ನವರು ಎಕರೆಗೆ ಎಂಟು ಲಕ್ಷ ಕೊಡ್ತಾರಂತೆ! ಒಳ್ಳೇ ರೇಟು. ಆದರೆ ಪಕ್ಕದೂರಿನಲ್ಲಿ ಒಂದು ಫ್ಲಾಟ್ ಕೊಳ್ಳೋಣವೆಂದರೆ ಮಿನಿಮಮ್ ಹದಿನೈದು ಲಕ್ಷ ಬೇಕು! ಮಂಗಳೂರಿನಂತಹ ನಗರದಲ್ಲಿ ಕನಿಷ್ಟ ಇಪ್ಪತ್ತೈದು!
ಆದರೂ ನಮಗೆ ಪರಿಹಾರ ಸಿಕ್ಕರೆ ಲಾಭವೇ. ಇಲ್ಲದಿದ್ದರೆ ಸರಕಾರ ಕಾನೂನು ಮಾಡಿದರೆ ನಮ್ಮ ಜಾಗ ಹೋಗುವುದು ಗ್ಯಾರಂಟಿ. (ಜಾಗ ಇದ್ದಲ್ಲೇ ಇರುತ್ತದೆ. ಹೋಗುವುದು ನಾವು !)
ಎಲ್ಲ ಸರಿ ಮಾರಾಯರೇ, ನಮ್ಮ ಜಮೀನು, ವಾಸಸ್ಥಳ ನಮ್ಮ ಕೈತಪ್ಪಿ ಹೋಗುವಾಗ ಒಂದಿಷ್ಟು ಪರಿಹಾರವಾದರೂ ಸಿಗುತ್ತದೆ. ಆದರೆ ಕೈಗಾರಿಕೆ ಬರುವಾಗ ನೂರಾರು ಮರಗಳು ಸತ್ತು ಹೋಗುತ್ತವಲ್ಲಾ? ಗುಡ್ಡಗಳು ಅಡ್ಡಡ್ಡ ಮಲಗುತ್ತದಲ್ಲಾ?
ಅವುಗಳಲ್ಲಿ ವಾಸವಾಗಿರುವ ಗಿಳಿ, ಪಾರಿವಾಳ, ನವಿಲು, ಕಾಗೆ, ಗೂಬೆಯಂತಹ ಸಾವಿರಾರು ಹಕ್ಕಿಗಳು ಎಲ್ಲಿಗೆ ಹೋಗಬೇಕು?
ಮುಂಗುಸಿ, ಹಾವು, ಮೊಲಗಳಂತಹ ನೂರಾರು ಪ್ರಾಣಿಗಳು ತಮಗೆ ಪುನರ್ವಸತಿಯನ್ನು ಯಾರಲ್ಲಿ ಕೇಳಬೇಕು?
ಅವುಗಳಿಗೆ ಪರಿಹಾರ ನೀಡುವವರಾರು? ಅವುಗಳು ಪ್ರೆಸ್ಮೀಟ್ ಕರೆದು ಪರಿಹಾರ ಕೊಡಿ ಅಂತ ಕೇಳಲಿಕ್ಕಾಗುತ್ತದಾ? ಪ್ರತಿಭಟನೆ ನಡೆಸುವುದಾದರೂ ಹೇಗೆ? ಪಾಪ ಅವುಗಳಿಗೆ ಸಂಘಗಳೇನಾದರೂ ಇವೆಯಾ? ಪ್ರಾಣಿ ಪಕ್ಷಿಗಳ ಹೆಸರಿನಲ್ಲಿ ಇಲಾಖೆ, ಸಂಘಗಳು ಇರಬಹುದು, ಆದರೆ ಅವರಾರೂ ಪುನರ್ವಸತಿ ಕಲ್ಪಿಸಿ ಅಂತ ಕೇಳುವುದಿಲ್ಲವಲ್ಲ!
ಕೈಗಾರಿಕೆಗಳಿಗಾಗಿ ಕೊಲೆಯಾಗುವ ಮರಗಳಿಗೆ ಪರಿಹಾರ ಸಿಗದಿದ್ದರೂ, ಅವು ಪ್ರತಿಭಟಿಸಿ, ಮನವಿ ನೀಡಲು ಆಗದಿರುವುದರಿಂದ ತಮಗಾಗುವ ಅನ್ಯಾಯವನ್ನು ಯಾರಲ್ಲಿ ಕೇಳಬೇಕು?

ನಿನ್ನೆ ನನ್ನ ಕನಸಲ್ಲಿ ಒಂದಷ್ಟು ಮರಗಳು, ಪಕ್ಷಿಗಳು, ಪ್ರಾಣಿಗಳು ನನ್ನ ಮನೆಯ ಮುಂದೆ ಪ್ರತಿಭಟಿಸಿದಂತಾಯಿತು!
ಅವುಗಳ ಪ್ರಶ್ನೆಗಳಿಗೆ ನನ್ನಲ್ಲಿ ಉತ್ತರವಿರಲಿಲ್ಲ, ನಿಮ್ಮಲ್ಲಿ ಇವೆಯಾ?!



Wednesday, August 20, 2008

ಸಿಗದೆ ಹೋದವಳು


ಪಕ್ಕನೆ ಸಿಕ್ಕವಳು ನಕ್ಕಳು; ಅದ್ಭುತವಾಗಿ!
'ನಕ್ಕು ಬಿಡಿ' ಜೋಕ್ಸ್ ಪುಸ್ತಕ ತರುತ್ತೀಯಾ...ಅಂತ ಗೆಳತಿ ಹೇಳಿದಳೆಂದು ಆ ನಗೆ ಹನಿಗಾಗಿ ಪುಸ್ತಕದ ಅಂಗಡಿಗಳನ್ನು ಹುಡುಕಿಕೊಂಡು ಹೊರಟವನಿಗೆ ರಸ್ತೆಯ ಆ ಬದಿಯಲ್ಲಿ ಹೋಗುತ್ತಿದ್ದವಳು ಕಣ್ಣಿಗೆ ಕಂಡಳು; ಅದೇ ಅದ್ಭುತ ನಗುವಿನವಳು! ನಾನು ನೋಡುತ್ತಿದ್ದಂತೇ ಅವಳೂ ನೋಡಿದಳು, ನಕ್ಕಳು.
ಅರೆ ಇವಳ್ಯಾರು? ಈ ಹಿಂದೆ ನೋಡಿದ ನೆನಪಾಗುತ್ತಿಲ್ಲ. ಆದರೂ ನಕ್ಕಳಲ್ಲ; ನನ್ನನ್ನು ನೋಡಿ ನಗಬೇಕಾದರೆ ಪರಿಚಯಸ್ಥಳೇ ಇರಬೇಕು.ಬಹುಶಃ ನನ್ನ ಪರಿಚಯ ಇರಬೇಕು. ಅಥವಾ ನಾನು ಸುರಸುಂದರಾಂಗನಲ್ಲವೇ?! ಹಾಗಾಗಿ ಲೈನ್ ಹೊಡೆದಿರಬೇಕು! ಅಥವಾ ಬೇರೆ ಯಾರಿಗೋ ನಕ್ಕಿರಬೇಕು. ನಾನು, ನನ್ನನ್ನು ನೋಡಿ ನಕ್ಕಿದ್ದೆಂದು ತಪ್ಪಾಗಿ ತಿಳಿದುಕೊಂಡಿರಬಹುದು. ಅವಳು ನನ್ನನ್ನು ನೋಡಿಯೇ ನಗಾಡಿದ್ದೆಂದು ಹೇಗೆ ಖಾತರಿಯಾಗುವುದು ಎಂದು ತೀರ್ಮಾನಿಸಲು ಹಿಂತಿರುಗಿ ನೋಡಿದರೆ ಆ ಬದಿಯಲ್ಲಿ ಮುಂದಕ್ಕೆ ಹೋಗಿರುವ ಅವಳೂ ಹಿಂತಿರುಗಿ ನೋಡುತ್ತಿದ್ದಾಳೆ ಮತ್ತು ನಗುತ್ತಿದ್ದಾಳೆ; ಮತ್ತಷ್ಟು ಅದ್ಭುತವಾಗಿ!ವಾಹ್, ಹೊಡಿ ಮಗ ಹೊಡಿ ಮಗಾ ಲೈನ್ ಹೊಡಿ ಮಗ, ಬಿಡಬೇಡ ಅವಳ್ನ ಅಂತ ಮನಸ್ಸಿನಲ್ಲೇ ಅಂದುಕೊಳ್ಳುವಷ್ಟರಲ್ಲಿ ನಾನು ಸಾಕಷ್ಟು ಮುಂದಕ್ಕೆ ನಡೆದು ಹೋಗಿಯಾಗಿತ್ತು. ಮತ್ತೆ ಹಿಂತಿರುಗಿ ನೋಡಿದರೆ ಅವಳು ಮಾಯ!
ಶ್ಶೆ,ನಕ್ಕು ಹುಚ್ಚು ಹಿಡಿಸಿದವಳು ಎಲ್ಲಿ ಮಾಯವಾದಳು ಎಂದು ತಲೆ ಎಬೌಟರ್ನ್ ಆಗಿ ವಾಪಾಸು ನಡೆಯತೊಡಗಿದೆ, ಆಕೆಯನ್ನು ಹುಡುಕುತ್ತ! ಊಹು ಅವಳು ಕಾಣಿಸುತ್ತಿಲ್ಲ. ಅಯ್ಯೋ ಇಲ್ಲಿ ಮೂರು ಕವಲುಗಳು; ಆ ದಾರಿಯಲ್ಲಿ ಹೋದಳೋ, ಈ ಮಾರ್ಗದಲ್ಲಿದ್ದಾಳೋ, ಆ ರಸ್ತೆಯಲ್ಲಿ ಹೋಗಿದ್ದಾಳೋ ತಲೆ ಕೆಡತೊಡಗಿತು.ನಗೆ ಹನಿ ಪುಸ್ತಕ ಹುಡುಕುವುದನ್ನು ಮರೆತು ನಗುವಿನ ಹುಡುಗಿಯನ್ನು ಹುಡುಕುವುದೇ ಕೆಲಸವಾಯಿತಲ್ಲ ಛೆ. ಸಾಮಾನ್ಯವಾಗಿ ಹುಡುಗಿಯರು ಯಾವ ಅಂಗಡಿಗೆ ಹೋಗುತ್ತಾರೆ? ಬಟ್ಟೆ ಅಂಗಡಿಗೆ. ಹಾಗಾದರೆ ಈ ಸಾಲಿನಲ್ಲಿ ಬಟ್ಟೆ ಅಂಗಡಿಗಳು ತುಂಬ ಇವೆಯಲ್ಲ, ಅಂತ ಆ ಕಡೆ ಈ ಕಡೆ ಇಣುಕುತ್ತ, ನೋಡುತ್ತ, ಹುಡುಕುತ್ತ ಹಾದಿ ಸಾಗಿದ್ದೇ ಗೊತ್ತಾಗಲಿಲ್ಲ. ಆ ಬಟ್ಟೆ ಅಂಗಡಿಗಳಲ್ಲಿ ಹುಡುಗಿಯರು ಇದ್ದರು, ಉದ್ದ ಜಡೆಯವರು, ಅರ್ಧ ಲಂಗದವರು, ಟೈಟು ಪ್ಯಾಂಟು ತೊಟ್ಟವರು, ಅಂಗಡಿಗಳಲ್ಲಿದ್ದ ಸೇಲ್ಸ್ ಗರ್ಲ್ಸ್.
ಆದರೆ ನನ್ನನ್ನು ನೋಡಿ ಅದ್ಭುತವಾಗಿ ನಕ್ಕ ಆ ಗುಲಾಬಿ ಬಣ್ಣದ ಚೂಡಿದಾರದ ಹುಡುಗಿ ಕಾಣಸಿಗಲಿಲ್ಲ. ಬಹುಶಃ ಫ್ಯಾನ್ಸಿ ಅಂಗಡಿಯಲ್ಲಿರಬಹುದು ಎಂದು ಮತ್ತೊಂದು ಹಾದಿಯಲ್ಲಿ ಹುಡುಕುತ್ತ ಆಸೆ ಕಣ್ಣುಗಳೊಂದಿಗೆ ಹೊರಟವನಿಗೆ ಮತ್ತೆ ನಿರಾಸೆ. ಹೋಗಲಿ, ಹಾಳಾಗಿ ಹೋಗಲಿ ಎಂದು ಹುಳಿ ದ್ರಾಕ್ಷಿಯ ನೆನಪು ಮಾಡಿಕೊಂಡಾಗ ನಗೆ ಹನಿ ಪುಸ್ತಕವೂ ನೆನಪಾಯಿತು. ನಗುವಿನ ಹುಡುಗಿಯ ಚಿತ್ರ ಮನಸ್ಸಿನಲ್ಲಿ ಬ್ಲರ್ರ್ ಆಗತೊಡಗಿತು. ಮತ್ತೆ ಪುಸ್ತಕದ ಅಂಗಡಿ ಹುಡುಕುತ್ತ ಹುಡುಕುತ್ತ ಕೊನೆಗೆ ಸಿಕ್ಕಿತು. ಒಳ ಕಾಲಿಡುತ್ತಿದ್ದಂತೆ ಹೊರ ಬಂದದ್ದು ಅದೇ ಅದ್ಬುತ ನಗುವಿನ ಹುಡುಗಿ!ಮತ್ತೆ ನನ್ನನ್ನು ನೋಡಿ ನಕ್ಕಳಲ್ಲ,ವಾರೆವಾಹ್! ಅನ್ನುವಷ್ಟರಲ್ಲಿ ಆಕೆ ಅಲ್ಲಿಂದ ಹೊರಹೋಗಿಯಾಗಿತ್ತು....?
ಏನು ಬೇಕು?
ಹುಡುಗಿ! ಅಂದವನು ನಾಲಗೆ ಕಚ್ಚಿಕೊಂಡೆ!...ಏನು?...ಏನು ಹೇಳಿದಿರಿ? ಯಾವ ಪುಸ್ತಕ? ಕೇಳಿದರು ಅಂಗಡಿ ಯಜಮಾನರು. ಅದೇ ನಗು.. ನಗೆ ಹನಿ, ಜೋಕ್ಸ್...ಪುಸ್ತಕ...
ಆಕೆ ಮತ್ತೆ ಮಾಯವಾದಳೆಂಬ ಹತಾಶೆ, ನಿಂತು ಮಾತಾಡಿಸಬಹುದಿತ್ತಲ್ವ ಎಂಬ ಧೈರ್ಯ, ಆಸೆ, ದುರಾಸೆ!
ಒಂದೇ ಒಂದು ಪುಸ್ತಕ, ಈ...ಈಗ... ಹೋದರಲ್ವ, ಮೇಡಂ, ಅವರು ಕೊಂಡೊಯ್ದರು. ಇದ್ದ ಸ್ಟಾಕ್ ಮುಗಿದಿದೆ. ನಾಡಿದ್ದು ಬನ್ನಿ...ಅನ್ನುತ್ತಲೇ ಇದ್ದ ಪುಸ್ತಕದಂಗಡಿಯವ.
ನನಗೆ ಅರ್ಥವಾಗುತ್ತಿರಲಿಲ್ಲ...

Saturday, August 16, 2008

ದೇವರ ಹೆಸರು ಯಾಕೆ ಸ್ವಾಮೀ...


ದುರ್ಗಾ ಬಾರ್ ಎಂಡ್ ರೆಸ್ಟೋರೆಂಟ್, ಶ್ರೀ ಗಣೇಶ ವೈನ್ ಶಾಪ್, ಲಕ್ಷ್ಮೀ ನಾನ್‌ವೆಜ್ ಹೊಟೇಲ್, ಈಶ್ವರ ಪಾನ್‌ಶಾಪಿಗೆ ದೇವರ ಹೆಸರನ್ನೆಲ್ಲ ಬಾರು, ವೈನು ಶಾಪು, ಮಾಂಸದ ಹೊಟೇಲುಗಳಿಗೆ ಇಡುವುದು ಸರಿಯಾ ಹೇಳಿ ಸ್ವಾಮಿ?
ಆ ಹೊಟೇಲು, ಬಾರುಗಳ ಮಾಲಕರು ವಾದಿಸಬಹುದು; ನಾವು ಭಕ್ತಿಯಿಂದ ನಮ್ಮ ವ್ಯವಹಾರಕ್ಕೆ ಇಟ್ಟರೆ ತಪ್ಪೇನು ಅಂತ.
ಅವರ ವಾದ ಸರಿ ಅಂತಿಟ್ಟುಕೊಳ್ಳೋಣ. ಆದರೆ ಕುಡಿದು ತೂರಾಡುವವರನ್ನು ಸೃಷ್ಟಿಸುವ, ಮನೆ ಮುರಿಯುವ ಹೆಂಡದಂಗಡಿಗೆ ಹೀಗೆ ದೇವರ ಹೆಸರಿಡುವುದು ಸರಿ ಕಾಣುತ್ತದಾ?
ಬಸ್ಸುಗಳ ಹೆಸರೂ ಹಾಗೆಯೇ; ಶ್ರೀ ಗಣೇಶ ಟ್ರಾವೆಲ್ಸ್, ದುರ್ಗಾಂಬಾ ಮೋಟರ್ಸ್, ಶ್ರೀ ಕಟೀಲ್, ಶ್ರೀ ದುರ್ಗಿ, ಶ್ರೀ ಮಂಜುನಾಥ...
ಬಸ್ಸು ಅಫಘಾತವಾಗಿ ನಾಲ್ಕು ಮಂದಿ ಸತ್ತರೆ; ದೇವರ ಹೆಸರಿನ ಬಸ್ಸನ್ನು ಕುರಿತು ಜನ ಮಾತಾಡುವುದು ಹೇಗೆ ಗೊತ್ತಾ? ಅವ ಗಣೇಶದವ ಯಾವಾಗಲೂ ಹಾಗೆಯೇ, ಕುಡಿದು ಬಿಡುವುದು. ಮೊನ್ನೆ ಕೂಡ ಒಬ್ಬರ ಕಾಲು ತೆಗೆದಿದ್ದ....
ಬೇಕಾ, ಡ್ರೈವರನ ತಪ್ಪಿಗೆ ದೇವರ ಹೆಸರಿಗೆ ಬೈಯ್ಗುಳ.

Friday, August 15, 2008

ಸಭ್ಯತೆ


ನಗುವುದರಲ್ಲಿ ತಪ್ಪೇನಿದೆ?ದಾರಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಯಾರಾದರೂ ಸಿಕ್ಕರೆ ಒಂದು ಮುಗುಳ್ನಗೆ ಚೆಲ್ಲಿದರೆ ನಮ್ಮ ಗಂಟೇನೂ ಹೋಗುವುದಿಲ್ಲವಲ್ಲ?ಎದುರಿಗೆ ಸಿಕ್ಕವರು ನಕ್ಕರೆ ನಾವೂ ಮುಗುಳ್ನಗುವುದು ಸಭ್ಯತೆಯ ಲಕ್ಷಣ, ಏನಂತೀರಿ
ನೋಡಿ ಇವ್ರೇ, ಕಾಲೇಜಿಗೆ ಹೋಗುವ ಆ ಹುಡುಗಿಗೆ ಅದೆಷ್ಟು ಕೊಬ್ಬು ಅಂತೀರಾ? ನಾನು ಆಕೆಯ ಹಿಂದೆ ಮುಂದೆ ಹತ್ತಾರು ಸಲ ಹೋಗಿ, ಅಷ್ಟೆಲ್ಲ ನಕ್ಕರೂ ಆಕೆ ಮುಖವೆತ್ತಿ ನಗುವುದೇ ಇಲ್ಲ. ಅಬ್ಬಾ ಆಕೆಯ ಅಹಂಕಾರವೇ! ನಕ್ಕರೆ ವಾಪಾಸು ನಗಬೇಕು. ಅದು ಸಭ್ಯತೆಯ ಲಕ್ಷಣ ಅಂತ ಗೊತ್ತಿಲ್ಲವಾ?!

Thursday, August 14, 2008

ಫ್ಯಾನಿನ ಗಾಳಿಗೆ ದೀಪ ಆರಿ ಹೋದಾಗ


ನೀವು ಸಭೆ ಸಮಾರಂಭಗಳಲ್ಲಿ ಗಮನಿಸಿರಬಹುದು; ಕಾರ್ಯಕ್ರಮದ ಉದ್ಘಾಟನೆಗಾಗಿ ದೀಪ ಹೊತ್ತಿಸುವುದನ್ನು. ಅದುವರೆಗೂ ಸುತ್ತುತ್ತಿದ್ದ ಫ್ಯಾನನ್ನು, ಕ್ಯಾಂಡಲನ್ನೋ ಆರತಿಯನ್ನೋ ಹಿಡಿದ ಅಭ್ಯಾಗತ ದೀಪದ ಹತ್ತಿರ ತರುವ ಹೊತ್ತಿಗೆ ಎಲ್ಲರ ಗಮನ ಮೇಲೆ ತಿರುಗುವ ಫ್ಯಾನಿನೆಡೆಗೆ. ಸ್ವಿಚ್ಛ್ ಆಫ್ ಮಾಡಿ ಫ್ಯಾನಿನ ರೆಕ್ಕೆಗಳನ್ನು ನಿಲ್ಲಿಸಿ ದೀಪ ಹಚ್ಚಲಾಗುತ್ತದೆ. ವಾಪಾಸು ಫ್ಯಾನು ತಿರುಗುತ್ತದೆ. ಉದ್ಘಾಟಕರ ಭಾಷಣ ಮುಗಿಯುವ ಹೊತ್ತಿಗೆ ದೀಪ ಆರಿ ಹೋಗಿರುತ್ತದೆ! ಅಥವಾ ಫೋಟೋಕ್ಕಾಗಿ ನಡುವೆ ನಿಲ್ಲಿಸಿಲಾದ ದೀಪ ಮುಲೆ ಸೇರಿರುತ್ತದೆ. ಆದರೂ ಉದ್ಘಾಟಕರು ಈ ದೀಪದಂತೆ ಪ್ರಜ್ವಲಿಸಲಿ, ಬೆಳಕು ನೀಡಲಿ ಎಂದೆಲ್ಲ ಭಾಷಣ ಮಾಡಿರುತ್ತಾರೆ.ದೀಪ ಹೊತ್ತಿಸಿ ಉದ್ಘಾಟಿಸುವುದು ಒಳ್ಳೆಯ ಸಂಪ್ರದಾಯ ಅಂತ ವಾದಿಸುವುದಾದರೆ ಸರಿ; ಆದರೆ ವೈದ್ಯಕೀಯ ತಪಾಸಣೆಗೆ, ಪರಿಸರ ಸಂಘ ಉದ್ಘಾಟನೆಗೆ, ಪುಸ್ತಕ ಬಿಡುಗಡೆಗೆ, ಕಬಡ್ಡಿ, ವಾಲಿಬಾಲ್ ಉದ್ಘಾಟನೆಗೆ, ಸಾಲ, ವಿದ್ಯಾರ್ಥಿ ವೇತನ ವಿತರಣೆಗೆ ದೀಪ ಪ್ರಜ್ವಲಿಸುವುದು ಯಾಕೆ?
ಪತ್ರಿಕಾ ಛಾಯಾಗ್ರಾಹಕರೂ ಕೂಡ ಯಾಕೋ ದೀಪ ಹೊತ್ತಿಸುವಾಗಲೇ ಫೋಟೋಕ್ಕಾಗಿ ಮುಗಿ ಬೀಳುತ್ತಾರೆ.
ಉದ್ಘಾಟಕರೆಂದ ಮೇಲೆ ಮುಗಿಯಿತು; ಉದ್ಘಾಟಕರೇ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಬೇಕು. ನೀವು ನೋಡಿ, ಆ ಉದ್ಘಾಟಕ ಒಂದೇ ದೀಪ ಬೆಳಗಿಸುತ್ತಾನೆ. ಉಳಿದ ಐದೋ ಆರೋ ದೀಪಗಳನ್ನು ವೇದಿಕೆಯಲ್ಲಿದ್ದವರೆಲ್ಲ ಒಬ್ಬೊಬ್ಬರಾಗಿ ಹೊತ್ತಿಸತೊಡಗುತ್ತಾರೆ, ತಾವು ಹಾಕಿರುವ ಚಪ್ಪಲು, ಶೂಗಳನ್ನು ತೆಗೆದು!
ಕೆಲವೊಮ್ಮೆ ದೀಪ ಹಚ್ಚುವವರೊಳಗೇ ಚರ್ಚೆ ನಡೆಯಲಿಕ್ಕುಂಟು; ನೀವು ಹಚ್ಚಿ, ನೀವು ಮೊದಲು ಬೆಳಗಿಸಿ ಅಂತ.
ಈ ಮಧ್ಯೆ ಫೋಟೋಕ್ಕಾಗಿ ಒದ್ದಾಡುವವರದ್ದು ಅಯ್ಯೋ ದೇವಾ ಪರಮಾತ್ಮಾ... ಹೇಳಿ ಪ್ರಯೋಜನವಿಲ್ಲ, ಅವರ ಅವಸ್ಥೆ, ನಾಟಕ..

Wednesday, August 13, 2008

ರಾಜೀನಾಮೆ


ಎಲ್ಲೋ ಒಂದು ಕಡೆ ರೈಲು ಅಪಘಾತವಾಗುತ್ತದೆ. ವಿರೋಧ ಪಕ್ಷದವರು ಬೊಬ್ಬಿಡುತ್ತಾರೆ, ರೈಲ್ವೆ ಸಚಿವ ರಾಜೀನಾಮೆ ಕೊಡಲಿ ಅಂತ.

ಮೊನ್ನೆ ಮಂಗಳೂರಿನಲ್ಲಿ ಪ್ರತಿಭಟನಾಕಾರರ ಮೇಲೆ ಲಾಠಿ ಬೀಸಲಾಯಿತು. ಮೇಯರ್ ರಾಜೀನಾಮೆ ಬಿಸಾಕಲಿ ಅಂತ ಕೆಲವರು ಹೇಳಿದರು.

ರೈತರು ಗೋಲೀಬಾರ್ನಲ್ಲಿ ಸತ್ತರು. ಮುಖ್ಯಮಂತ್ರಿ ರಾಜೀನಾಮೆ ಕೊಡಲಿ ಎಂದರು.

ರಘುಪತಿ ಭಟ್ಟರ ಹೆಂಡ್ತಿ ಆತ್ಮಹತ್ಯೆ ಮಾಡಿಕೊಂಡರೆ ಗ್ರಹ ಸಚಿವರು ಯಾಕೆ ರಾಜೀನಾಮೆ ಕೊಡಬೇಕು?

ಹೀಗೆಲ್ಲ ಪ್ರಚಾರಕ್ಕೆ ಹೇಳಿಕೆ ಕೊಡುವವರು

ಮಳೆ ಜೋರು ಬಂದು ನೆರೆ ನುಗ್ಗಿ, ಬೆಳೆ ಹಾನಿಯಾಗಿ, ಜನ ಸತ್ತರೆ ಅಥವಾ ಮಳೆ ಬರದೆ ಬರ ಬಂದರೆ ನೀರಾವರಿ ಸಚಿವರ ರಾಜೀನಾಮೆ ಕೇಳುತ್ತಾರಾ? ಹೆಂಗೆ?

ಪೋನಿಗೆ ಹೋಗಲಿಕ್ಕೆ ಕಾಲುಗಳಿವೆಯಾ...


ಕೆಲವರು ಫೋನ್ ಮಾಡ್ಲಾ? ಅಂತ ಕೇಳುತ್ತಾರೆ.
ಮಾಡಲಿಕ್ಕಾಗುತ್ತದಾ? ಅದನ್ನು ಮಾಡಿಯೇ ಇರುತ್ತಾರೆ. ಆದರೂ ಇನ್ನೊಬ್ಬನಿಗೆ ಫೋನಾಯಿಸಬೇಕಾದರೆ ಫೋನ್ ಮಾಡಬೇಕಾ ಅಂತಲೇ ಕೇಳುತ್ತಾರೆ.
ಹಾಗೆ ಫೋನ್ ಮಾಡುವಾಗ ಆ ಕಡೆ ರಿಂಗ್ ಆಗದಿದ್ದರೆ ಫೋನ್ ಹೋಗ್ತಾ ಇಲ್ಲ ಅನ್ನುತ್ತಾರೆ. ಹಾಗೆ ಹೋಗಲು ಅದಕ್ಕೆ ಕಾಲುಗಳಿವೆಯಾ?
ಕೆಲವರು ಫೋನ್ ತಾಗ್ತಾ ಇಲ್ಲ ಅನ್ನುತ್ತಾರೆ. ತಾಗಿಸುವುದು ಹೇಗೆ? ಒಂದಕ್ಕೊಂದು ಟಚ್ ಮಾಡಿ ಚಿಯರ್ಸ್ ಅಂದ ಹಾಗೆ ತಾಗಿಸುವುದಾ? ಗೊತ್ತಿಲ್ಲ!
ಪೋನ್ ಮಾಡಿದೆ, ಆದರೆ ಅವರು ಸಿಗಲಿಲ್ಲ ಅನ್ನುತ್ತಾರಲ್ಲ? ಅನ್ನುವ ವಾಕ್ಯವನ್ನು ಮತ್ತೊಮ್ಮೆ ಹೇಳಿ, ಪ್ರಯೋಗ ಸರಿ ಅನಿಸುತ್ತದಾ?
ಇನ್ನು ಕೆಲವರು ಮಾತಾಡಿ ಮುಗಿದಾದ ಬಳಿಕ ಪೋನ್ ಬಿಡ್ಲಾ ಕೇಳುತ್ತಾರೆ! ಬಿಟ್ಟರೆ ತುಂಡಾದೀತು, ಮೆಲ್ಲನೆ ಇಡಿ ಅನ್ನಬೇಕಾಗುತ್ತದೆ! ರಿಸೀವರ್ ಇಡುವುದಾದರೆ ಸರಿ, ಪೋನ್ ಟೇಬಲ್ನಲ್ಲೆಲ್ಲೋ ಇರುತ್ತದೆ ಅಲ್ವಾ?
ಮೊಬೈಲನ್ನು ಇಟ್ಟು ಹೋಗುವುದೆಲ್ಲಿಗೆ? ಎಂಬುದು ಮತ್ತೆ ಕೇಳಬೇಕಾದ ಪ್ರಶ್ನೆ?
ರಿಂಗ್ ಆದ ತಕ್ಷಣ ಹಲೋ ಹಲೋ...ಲೋ..ಲೋ ಅಂತ ಬಾಯಿಬಡ್ಕೋಳುವವರು ಕೆಲವರಾದರೆ, ಆರ್ಎಸ್ಎಸ್ನವರದ್ದು ಆರಂಭದಲ್ಲಿ ಹರಿಃ ಓಂ ಹರಿ ಓಂ... ಕೊನೆಗೆ ರಾಮ್ ರಾಮ್ ಅಥವಾ ಜೈಶ್ರೀರಾಂ...
ಮಾತು ಮುಗಿದ ಮೇಲೆ ಹೇಳುವುದುಂಟು; ಫೋನ್ ಕಟ್ ಮಾಡ್ಲಾ? ಕಟ್ ಮಾಡಿದ್ರೆ ನಾಳೆ ಮಾತಾಡುವುದು ಹೇಗೆ? ಅಥವಾ ಅಷ್ಟು ಒಳ್ಳೆಯ ಫೋನನ್ನು ಕಟ್(ತುಂಡು) ಮಾಡುವುದು ಯಾಕೆ ಅಲ್ವಾ?!
ಹೀಗೆ ಫೋನ್ ಕಥೆ ಇನ್ನೂ ಇದೆ. ಇನ್ನೊಮ್ಮೆ ನೋಡೋಣ.

ಇಲ್ಲಿ ಕೆಲವರು ಅಂತ ಬರೆದುದರಿಂದ ಹಾಗೆ ಮಾತಾಡುವವರು ಬೇಜಾರು ಮಾಡ್ಕೋಬೇಡಿ, ಹ್ಹಿ, ಹ್ಹಿ ನಾನೂ ಹೀಗೇ ಮಾತಾಡೋಡು; ಫೋನ್ ಇಡ್ಲಾ, ಬಿಡ್ಲಾ, ಹೋಗಲಿಲ್ಲ, ತಾಗಲಿಲ್ಲ....ಹ್ಹಿ ಹ್ಹಿ!

Tuesday, August 12, 2008

ಹಾಯ್
ನಿನಾಯಕ ಭಟ್ಟ, ಮಂಜು, ವೇಣು, ರಾಜೇಶ್, ಶ್ರೀನಿಧಿ... ಹೀಗೆ ನನ್ನೆಲ್ಲ ಗೆಳೆಯರು ಬಂದಂತೆ ಬ್ಲಾಗ್ ಜಗತ್ತಿಗೆ ನಾನೂ ಬಂದಿದ್ದೇನೆ. ಹೆಂಗೆ?