Saturday, December 5, 2009

ಬಳೆಗಾರ



ಭಾಗ್ಯದಾ ಬಳೆಗಾರ ಹೋಗಿ ಬಾ ತವರೀಗೆಹಾಡು ಕೇಳದವರಾರು?ಆದರೆ ಈಗ ಬಳೆ ತೊಡುವವರೂ ಕಡಿಮೆಯಾಗುತ್ತಿದ್ದಾರೆ!ಸಾಮಾನ್ಯವಾಗಿ ಹುಡುಗಿಯರು, ಮಹಿಳೆಯರು ಇಡುವ ಕುಂಕುಮ, ಸರ, ಕಿವಿಯೋಲೆ, ಮೂಗುತಿ, ಜಡೆಗಳೆಲ್ಲ ಇಲ್ಲವಾಗುತ್ತಿರುವಂತೆಯೇ ಬಳೆ ಇಡುವವರೂ ವಿರಳವಾಗುತ್ತಿದ್ದಾರೆ. ಬಂಗಾರದ ಬೆಲೆ ಜಾಸ್ತಿಯಾಗುತ್ತಿದ್ದರೂ ಬಳೆ ಮಾಡಿಸುವವರು ಹೆಚ್ಚು ಇದ್ದಾರಾದರೂ ತಮ್ಮ ಕೈಗಳಿಗೆ ತೊಡುವವರು ಕಡಿಮೆಯಾಗುತ್ತಿದ್ದಾರೆ.ಮಣ್ಣಿನ, ಗಾಜಿನ ಬಳೆಗಳು ಸಾಮಾನ್ಯವಾಗಿ ಇರುತ್ತಿದ್ದವು. ದೇವೀ ದೇಗುಲಗಳಲ್ಲಿ ಇವುಗಳನ್ನು ಪ್ರಸಾದವಾಗಿ ಕೊಡುವ ಕ್ರಮವೂ ಇತ್ತು. ಇತ್ತೀಚಿಗೆ ಎಲ್ಲವೂ ಪ್ಲಾಸ್ಟಿಕ್‌ಮಯವಾದಂತೆ ಪ್ಲಾಸ್ಟಿಕ್‌ನ, ಮರದ ಬಳೆಗಳೂ ಬರತೊಡಗಿವೆ. ಬೆಳ್ಳಿ, ಚಿನ್ನದ ಬಳೆಗಳಿಗೂ ಬೇಡಿಕೆ ಇದ್ದು, ಜ್ಯುವೆಲ್ಲರ್‍ಸ್‌ಗಳಲ್ಲಿ ಕೊಂಡುಕೊಳ್ಳಬಹುದಾಗಿದೆ. ಗಂಡಸರೂ ಕಡಗವನ್ನು(ಬಳೆ) ಹರಕೆ, ಗೌರವ, ಆರೋಗ್ಯದ ಸಂಕೇತವಾಗಿ ತೊಟ್ಟುಕೊಳ್ಳುತ್ತಾರೆ. ದರ್ಶನಪಾತ್ರಿಗಳು, ಭೂತಕೋಲ ಕಟ್ಟುವ ನಲಿಕೆಯವರು, ದೇವಸ್ಥಾನಗಳಲ್ಲಿ ದೇವರ ಮೂರ್ತಿ ಹೊರುವವರು ಕಡಗ, ಬಳೆಯನ್ನು ತೊಟ್ಟುಕೊಳ್ಳುವುದನ್ನು ಕಾಣಬಹುದಾಗಿದೆ.ಹೆಚ್ಚಾಗಿ ಹೆಂಗಸರೇ ಬಳೆ ತೊಡುತ್ತಾರೆ. ಕೆಲವು ಗಂಡಸರು ತನ್ನ ಗಂಡಸುತನವನ್ನು ಪ್ರತಿಪಾದಿಸುತ್ತ, ಕೋಪದಿಂದ ಹೇಳುವುದುಂಟು; ನಾನೇನು ಬಳೆತೊಟ್ಟುಕೊಂಡಿಲ್ಲ ಅಂತ!ಸಾಮಾನ್ಯವಾಗಿ ಸಂತೆಗಳಲ್ಲಿ, ಜಾತ್ರೆಗಳಲ್ಲಿ, ದೇವಸ್ಥಾನಗಳ ಹತ್ತಿರ ಬಳೆ ಮಾರುವ ಅಂಗಡಿಗಳು, ಮಾರುವವರು ಸಿಗುತ್ತಾರೆ. ಬಳೆಗಾರರು ಅಂತಲೇ ಉಪಜಾತಿ ಇದೆ. ಹಿಂದೆಲ್ಲ ಮನೆಮನೆಗಳಿಗೆ ಬಂದು ಮಾರಾಟ ಮಾಡುವವ ಬಳೆಗಾರರು ಕಂಡುಬರುತ್ತಿದ್ದರು. ಇತ್ತೀಚಿಗೆ ಇಂತಹ ಬಳೆಗಾರರು ಸಿಗುವುದೇ ಇಲ್ಲ ಎಂಬಷ್ಟು ಅಪರೂಪವಾಗಿದ್ದಾರೆ. ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಣಸಿಗುವುದೇ ಇಲ್ಲ. ಮೂಲ್ಕಿಯ ಲಿಂಗಪ್ಪಯ್ಯಕಾಡಿನ ಬಳಿ ಉತ್ತರಕನ್ನಡದ ಮಂದಿ ಸಾವಿರಗಟ್ಟಲೆ ಸಂಖ್ಯೆಯಲ್ಲಿದ್ದಾರೆ. ಅವರು ಬಡವರಾದರೂ ಮಣ್ಣು, ಪ್ಲಾಸ್ಟಿಕ್ ಮುಂತಾದವುಗಳಿಂದ ತಯಾರಿಸಲ್ಪಟ್ಟ ಸರ, ಬಳೆ, ಕಿವಿಯೋಲೆ, ಮೂಗುತಿಗಳನ್ನು ತೊಟ್ಟುಕೊಳ್ಳುವುದನ್ನು ಕಾಣಬಹುದು. ಈ ಪರಿಸರದಲ್ಲಿ ಇತ್ತೀಚಿಗೆ ಕಂಡು ಬಂದ ಬಳೆಗಾರ ನನ್ನ ಮೂರನೆಯ ಕಣ್ಣಿಗೆ ಕಂಡದ್ದು ಹೀಗೆ!

Sunday, October 4, 2009

ಕೋಣ ಕೊಳ್ಳುವವರಿಲ್ಲ!

ಮಹಿಷ, ರಕ್ತಾಕ್ಷ ಎಂದೆಲ್ಲ ಕರೆಯಲ್ಪಡುವ ಕೋಣಗಳನ್ನು ಕೇಳುವವರಿಲ್ಲ!

ಕಂಬಳದ ಸಂದರ್ಭ ಬಿಟ್ಟರೆ ಕೋಣಗಳು ಇತ್ತೀಚಿನ ದಿನಗಳಲ್ಲಿ ಗದ್ದೆಗಳಿಂದಲೇ ದೂರವಾಗುತ್ತವೆ. ಇನ್ನು ಹಟ್ಟಿಯಲ್ಲಿ ಕಂಡು ಬರುವುದಾದರೂ ಹೇಗೆ?ಕೊಂಚ ಬುದ್ದಿ ಮಂದ ಎಂದು ಹೇಳಲ್ಪಡುವ ಕೋಣಗಳು ಗದ್ದೆ ಉಳುವುದಕ್ಕೆ ಬಳಸಲ್ಪಡುವುದು ಜಾಸ್ತಿ. ಆದರೆ ಇತ್ತೀಚಿನ ದಿನಗಳಲ್ಲಿ ಭತ್ತದ ಕೃಷಿ ಬಿಟ್ಟು, ಕಂಗು, ತೆಂಗು, ರಬ್ಬರು ಅಂತ ತೋಟಗಳೆಡೆಗೆ ಬದಲಾವಣೆ ಹೊಂದಿದ ಮೇಲೆ ಕೋಣಗಳ ಮಹತ್ವ ಹೊರಟು ಹೋಗತೊಡಗಿತು. ಭತ್ತದ ಕೃಷಿ ಮಾಡುವ ಮಂದಿಯೂ ಹದಗೊಳಿಸಲು ಟಿಲ್ಲರ್, ಟ್ರಾಕ್ಟರ್‌ಗಳಂತಹ ಯಂತ್ರ ಗಳನ್ನು ಗದ್ದೆಗಳಿಗೆ ಇಳಿಸಿದ ಮೇಲೆ ಕೋಣಗಳಿಗೆಲ್ಲಿದೆ ಕೆಲಸ?ಪರಿಣಾಮ ಹತ್ತು ವರುಷಗಳ ಹಿಂದೆ ದಿನವೊಂದಕ್ಕೆ ಹತ್ತು ಹದಿನೈದು ಜೋಡಿ ಕೋಣಗಳನ್ನು ಮಾರುತ್ತಿದ್ದ ವ್ಯಾಪಾರಿ ಈಗ ತಿಂಗಳಿಗೆ ಐದು ಜೋಡಿಗಳನ್ನು ಮಾರಿದರೆ ದೊಡ್ಡದು. ಹಿಂದೆ ದಿನವೊಂದಕ್ಕೆ ಹತ್ತರಿಂದ ಹದಿನೈದು ಜೋಡಿ ಕೋಣಗಳು ಮಾರಲ್ಪಡುತ್ತಿದ್ದರೆ ಈಗ ತುಂಬ ಕಡಿಮೆ. ಮಾರ್ಚ್, ಎಪ್ರಿಲ್, ಮೇ, ಜೂನ್ ತಿಂಗಳಲ್ಲಿ ಹತ್ತಿಪ್ಪತ್ತು ಜೋಡಿ ಮಾರಲ್ಪಡುತ್ತವೆ. ಉಳಿದ ತಿಂಗಳು ನಾಲ್ಕೈದು ಹೋದರೇ ಹೆಚ್ಚು ಅನ್ನುತ್ತಾರೆ ವ್ಯಾಪಾರಿಗಳು. ಜೋಡಿ ಕೋಣಗಳಿಗೆ ೨೦ರಿಂದ ೩೦ಸಾವಿರ ರೂಪಾಯಿಗಳಷ್ಟು ಬೆಲೆಯಿರುತ್ತದೆ. ಕಂಬಳದ ಕೋಣಗಳಾದರೆ ಒಂದಕ್ಕೇ ಇಪ್ಪತ್ತೈದು ಸಾವಿರ ರೂಪಾಯಿ ಇರುವುದೂ ಇದೆ. ಕೋಣಗಳಲ್ಲಿ ಘಟ್ಟದ(ಮಲೆನಾಡು) ಕೋಣಗಳು, ಊರ ಕೋಣಗಳು ಅಂತಿವೆ. ಘಟ್ಟದ ಕೋಣಗಳು ಊರಿನ(ಕರಾವಳಿಯ) ಕೋಣಗಳಷ್ಟು ಚಲಾಕು ಅಲ್ಲ. ಹಲ್ಲುಗಳು ಮೂಡಿದ ಬಳಿಕ ಕೋಣಗಳನ್ನು ಉಳಲು ಆರಂಭಿಸುತ್ತಾರೆ. ಆಗ ಅವು ಜೋರಾಗದಂತೆ ಅವುಗಳ ಬೀಜ ಕೊಟ್ಟ ಗುದ್ದುವುದು ಅಂತಿದೆ. ಪಳಗಿಸಲು ಇದು ಸಹಾಯಕಾರಿ.ಓಟದ(ಕಂಬಳ) ಕೋಣಗಳನ್ನು ಮಳೆಗಾಲದಲ್ಲಿ ಒಂದೆರಡು ಸಲ ಮಾತ್ರ ಗದ್ದೆ ಉಳಲು ಬಳಸುತ್ತಾರೆ. ಈ ಕೋಣಗಳನ್ನು ಓಟಕ್ಕೆ ಎಣ್ಣೆ ಹಚ್ಚಿ, ಹುರುಳಿ ಕೊಟ್ಟು, ತರಬೇತಿ ನೀಡುತ್ತಾರೆ. ಇವುಗಳನ್ನು ನೋಡಲಿಕ್ಕೆಂದೇ ಜನ ನೇಮಿಸುತ್ತಾರೆ. ಕಂಬಳದ ಕೋಣಗಳು ಗೆಲ್ಲುವುದು ಆ ಯಜಮಾನನಿಗೆ ಪ್ರತಿಷ್ಟೆಯ ಸಂಗತಿ. ಉಳುವ ಕೋಣಗಳಿಗೆ ಹುರುಳಿ, ಗಂಜಿ ಕೊಟ್ಟು ತಯಾರು ಮಾಡುತ್ತಾರೆ.ಆದರೆ ಕೋಣಗಳನ್ನು ಕೊಳ್ಳುವವರಿಲ್ಲದ, ಪಾಲಿಸುವವರೂ ಇಲ್ಲದ ದಿನಗಳು ಬಂದಿವೆ. ಕಂಬಳಕ್ಕಷ್ಟೇ ಸೀಮಿತವಾಗುತ್ತಿರುವ ಕೋಣಗಳು ಕೃಷಿಯ ಬದಲು ಮೋಜಿನ ಕ್ರೀಡೆಯ ಪ್ರಾಣಿಗಳಾಗುತ್ತಿರುವುದು ವಾಸ್ತವ.

Saturday, October 3, 2009

ಮನೆಯೊಳಗಿಲ್ಲ ಒಲೆ, ಹೊರಗೆ ಹೊಗೆ










ಅಲ್ಲಿ ದೂರದಲ್ಲೆಲ್ಲೋ ಹೊಗೆ ಕಾಣಿಸುತ್ತಿದ್ದರೆ ಮನೆಯಿದೆ ಅಂತ ನಿರ್ಜನ ಪ್ರದೇಶದಲ್ಲಿ, ಗುಡ್ಡ ಗಾಡಿನಲ್ಲಿ, ಕಾಡಿನಲ್ಲಿ ನಡೆದುಕೊಂಡು ಹೋಗುತ್ತಿದ್ದ ವರು ಲೆಕ್ಕಾಚಾರ ಹಾಕುತ್ತಿದ್ದರು. ಮನೆಯಿದ್ದರೆ ಅಲ್ಲಿ ಮಂದಿಯಿರುತ್ತಾರೆ. ಅವರಿದ್ದರೆ ಅಡುಗೆಯ ಒಲೆಯೋ, ಬಚ್ಚಲಿನ ಒಲೆಯೋ, ಭತ್ತ ಕಾಯಿಸುವ ಒಲೆಯೋ ಉರಿಯುತ್ತಲಿರುತ್ತದೆ. ಒಲೆ ಯಿಲ್ಲದ ಮನೆಯಿದ್ದರೆ ಅದು ಅಚ್ಚರಿಯ ಸಂಗತಿಯೇ! ಮನೆಯೇ ಇಲ್ಲದಿದ್ದರೂ, ಕಟ್ಟಿಕೊಂಡಿರುವ ಜೋಪಡಿ ಪಕ್ಕದಲ್ಲೊಂದು ಒಲೆ ಉರಿಯುತ್ತಿರುತ್ತಿದೆ.ಆದರೆ ಈಗ ಒಲೆಗಳಿಲ್ಲದ, ಹೊಗೆಯೂ ಇಲ್ಲದ ದಿನಗಳು ಬಂದಿವೆ!ಈಗ ಸೀಮೆ ಎಣ್ಣೆ ಸ್ಟೌವ್ಗಳು ಕೂಡ ಹಳತಾಗಿವೆ. ಗ್ಯಾಸ್ಹಂಡೆಗಳು ಮನೆಗಳನ್ನು ಆವರಿಸಿವೆ. ಪೇಟೆಗಳ ಮನೆಗಳಿಗೆ ವಿದ್ಯುತ್ ಒಲೆ ಬಂದಿದೆ. ಸೌರಶಕ್ತಿಯ ಒಲೆಯೂ ಬಂದಿದೆ. ಆದರೆ ಕಟ್ಟಿಗೆಯನ್ನು ಉಪಯೋಗಿಸಿ ಬೇಯಿಸುವ, ಕಾಯಿಸುವ ಒಲೆ ಇಲ್ಲವಾಗುತ್ತಿದೆ.ಕಟ್ಟಿಗೆಯ ಜೊತೆಗೆ ಸೆಗಣಿಯ ತಟ್ಟಿ, ಒಣಗಿಸಿದ ಬೆರಣಿಯಿಂದ ಬೆಂಕಿ ಉರಿಸಲಾಗುತ್ತಿತ್ತು. ಕಡಿಮೆ ಕಟ್ಟಿಗೆ ಅಥವಾ ಮರದ ಚೂರುಗಳನ್ನು ಬಳಸಿ, ಪೇಪರ್, ಕಸ ಗಳನ್ನು ಬಳಸಿ ಬೆಂಕಿಯಿಂದ ಕಾಯಿಸುವ, ಬೇಯಿಸುವ ಒಲೆಗಳೂ ಬಂದಿದ್ದವು. ಆದರೂ ಅವು ಕಟ್ಟಿಗೆಯಷ್ಟು ಜನಪ್ರಿಯವಾಗಲಿಲ್ಲ. ನಗರಗಳಲ್ಲಿ ಕಟ್ಟಿಗೆ ಒಲೆಗಳನ್ನು ಬಳಸುವುದು ಕಷ್ಟವೇ. ಆದರೆ ಇತ್ತೀಚಿಗೆ ಅಭಿವೃದ್ಧಿಯ ವೇಗಕ್ಕೆ ಹಳ್ಳಿಗಳಲ್ಲೂ ಸೌದೆ ಉರಿಸುವ ಒಲೆಗಳು ಕಾಣೆ ಯಾಗುತ್ತಿವೆ. ಅಲ್ಲಿಗೆ ಗ್ಯಾಸ್ ಸ್ಟೌವ್ ಬಂದು ಕೂರುತ್ತಿದೆ. ಸೂರ್ಯಶಕ್ತಿಯ ಒಲೆಗಳು ನೀರು ಬಿಸಿ ಮಾಡಲು ವಿದ್ಯುತ್ಗೆ ಓಕೆ. ಆದರೆ ಅಡುಗೆಗೆ ಮಳೆಗಾಲಗಳಲ್ಲಿ ಕಷ್ಟ. ಇನ್ನು ವಿದ್ಯುತ್ ಒಲೆಗಳು ಹೆಚ್ಚು ವೆಚ್ಚವನ್ನು ಬಯಸುತ್ತವೆ. ಕಟ್ಟಿಗೆಗೆ ಪರಿಸರ ನಾಶವಾಗುತ್ತದೆ ಎಂಬುದು ಹೌದಾದರೂ ಒಲೆಗಳ ಮುಂದಿನ ಸಂಭ್ರಮ ಅನುಭವಿಸಿದವರಿ ಗಷ್ಟೇ ಗೊತ್ತು.ಗಡಗಡ ನಡುಗುವ ಚಳಿಗೆ ಬೆಂಕಿ ಹಾಕಿ ಒಲೆ ಮುಂದೆ ಕೂತರೆ ವಾಹ್ ಪರಮಾದ್ಭುತ ಸುಖ.ಕೆಲವರು ಹೇಳುವುದುಂಟು ಕಟ್ಟಿಗೆ ಒಲೆಯಲ್ಲಿ ಮಾಡುವ ಚಹಾ, ಕಾಫಿಯ ಸ್ವಾದಿಷ್ಟ, ರುಚಿಯೇ ಬೇರೆ ಅಂತ. ಒಲೆ ಮುಂದೆ ಕೂತು ಹುಹೂಹೂ ಅಂತ ಊದುಕೊಳವೆಯಿಂದ ಗಾಳಿ ಊದೀ ಊದಿ ಕೆಂಡ ದಿಂದ ಹೊಗೆಯನ್ನೂ, ಬೆಂಕಿಯನ್ನೂ ಹುಟ್ಟಿಸಿ, ಅದರಲ್ಲಿ ಪಾತ್ರೆಯಿಟ್ಟು ಹಾಲನ್ನೋ, ಅನ್ನವನ್ನೋ, ಸಾರನ್ನೋ, ಪಾಯಸವನ್ನೋ ಮಾಡುವ ರೀತಿ ಇನ್ನು ನೆನಪುಗಳು ಮಾತ್ರ. ಸಣ್ಣ ಒಲೆ, ಮಧ್ಯಮ ಒಲೆ, ದೊಡ್ಡ ಒಲೆಗಳನ್ನು ಕಲ್ಲು ಇಟ್ಟು ಕಟ್ಟಿ, ಅದಕ್ಕೆ ಸೆಗಣಿಯನ್ನೋ ಸಿಮೆಂಟನ್ನೋ ಬಳಿದು ರಚಿಸುವ ಕಾಯಕ ಗ್ರಾಮೀಣ ಬದುಕು ದೂರ ವಾದಂತೆ ಕಡಿಮೆಯಾಗುತ್ತಲೇ ಹೋಗುತ್ತಿದೆ.ಫೋನು, ಮೊಬೈಲು, ಇಂಟರ್ನೆಟ್ಗಳೆಲ್ಲ ಬಂದ ಮೇಲೆ ಓಲೆಗಳು ಕಡಿಮೆಯಾದಂತೆ, ಕಟ್ಟಿಗೆ ಒಲೆಗಳೂ ಆಧುನಿಕತೆಯ ಹೊಡೆತಕ್ಕೆ ಓಡಿ ಹೋಗುತ್ತಿವೆ

Sunday, September 27, 2009

ಕಟೀಲು ಕ್ಷೇತ್ರದಲ್ಲಿ ನವರಾತ್ರಿ ಮತ್ತು ಸಾವಿರ ಹುಲಿಗಳು





ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ನವರಾತ್ರಿ ಉತ್ಸವ ವೈಭವದಿಂದ ನಡೆಯಲು ಕಾರ್ಣಿಕ ದೇವೀ ಕ್ಷೇತ್ರ ಎಂಬುದು ಒಂದು ಕಾರಣವಾದರೆ, ಭಕ್ತರಿಂದ ನೀಡಲ್ಪಟ್ಟ ಸೀರೆಗಳನ್ನು ಲಲಿತಾ ಪಂಚಮಿ ದಿನ ಸಾವಿರಾರು ಮಹಿಳಾ ಭಕ್ತರಿಗೆ ಶ್ರೀ ದೇವರ ಶೇಷವಸ್ತ್ರ ನೀಡುವುದೂ ಮತ್ತೊಂದು ಕಾರಣ. ಕಟೀಲು ದೇಗುಲಕ್ಕೆ ವರುಷಕ್ಕೆ ಸುಮಾರು ೧೩ಸಾವಿರ ಸೀರೆ ಹರಕೆ ರೂಪದಲ್ಲಿ ಬರುತ್ತದೆ. ಹಿಂದೆ ಒಂದು ಸೀರೆಯನ್ನು ನಾಲ್ಕೈದು ತುಂಡು ಮಾಡಿ ಕೊಡುತ್ತಿದ್ದರು. ಈಗ ದೇಗುಲದಲ್ಲೇ ಸೀರೆ ಮಾರಾಟದ ಕೌಂಟರ್ ಮಾಡಿದ ಪರಿಣಾಮ ಹರಕೆ ರೂಪದಲ್ಲಿ ಬರುವ ಸೀರೆಗಳ ಸಂಖ್ಯೆ ಜಾಸ್ತಿಯಾಗಿದೆ. ಈಗ ಒಂದು ಸೀರೆಯನ್ನು ಎರಡು ತುಂಡು ಮಾಡಿ ರವಕೆ ಕಣ ರೂಪದಲ್ಲಿ ಒಂದು ತಿಂಗಳ ಹೆಣ್ಣು ಮಕ್ಕಳಿಂದ ಮುದುಕಿಯರವರೆಗೆ ಜಾತಿಮತ ಭೇದವಿಲ್ಲದೆ ರಾತ್ರಿ ಭೋಜನಕ್ಕೆ ಕೂತ ಸಂದರ್ಭ ಮಹಿಳಾ ಭಕ್ತರಿಗೆ ಸುವಾಸಿನಿ ಪೂಜೆಯ ನೆನಪಿನಲ್ಲಿ ನೀಡಲಾಗುತ್ತದೆ. ಎಂಟನೆಯ ದಿನ ಕಡುಬು ಮುಹೂರ್ತವನ್ನು ಅದಕ್ಕೆಂದೇ ಇರು ವಿಶೇಷ ದೋಣಿಯಲ್ಲಿ ಮಾಡಿ, ಮಹಾನವಮಿಯಂದು ರಾತ್ರಿ ಭಕ್ತರಿಗೆ ಕಡುಬಿನಲ್ಲೇ ಭೋಜನ ಪ್ರಸಾದ ನೀಡಲಾಗುತ್ತದೆ. ನವರಾತ್ರಿಯ ಕಾಲದಲ್ಲಿ ನಾಲ್ಕು ರಂಗದಲ್ಲಿ ಪೂಜೆಯ ಸಂದರ್ಭ ೯ ತಾಳದ ಮನೆಯವರಿಂದ ನಡೆಯುವ ಸಂಕೀರ್ತನೆ ವಿಶೇಷ.ಕಟೀಲು, ಕೊಡೆತ್ತೂರು, ಎಕ್ಕಾರು ಗ್ರಾಮಗಳಿಂದ ಹುಲಿ ವೇಷ ವೈಭವದ ಮೆರವಣಿಗೆಯಲ್ಲಿ ಬರುವುದು ದಶಕಗಳಿಂದ ನಡೆಯುತ್ತ ಬಂದಿದೆ. ಕಟೀಲು ಸಮಿತಿಯಿಂದ ತೃತೀಯ ದಿನ, ಕೊಡೆತ್ತೂರು ಸಮಿತಿಯಿಂದ ಲಲಿತಾ ಪಂಚಮಿ ಯಂದು, ಎಕ್ಕಾರಿನಿಂದ ಮೂಲಾನಕ್ಷತ್ರ ದಿನ ಹುಲಿ ಮೆರವಣಿಗೆ ಬರುವುದು ವಿಶೇಷ. ಹುಲಿವೇಷಗಳ ಜೊತೆಗೆ ವಿವಿಧ ವೇಷಗಳನ್ನೂ ಹಾಕಿಕೊಂಡು ಮೆರವಣಿಗೆಯಲ್ಲಿ ಬರುವುದನ್ನು ನೋಡಲಿಕ್ಕೆಂದೇ ಸಾವಿರಾರು ಮಂದಿ ಸೇರುತ್ತಾರೆ.ಕಷ್ಟ, ಸಮಸ್ಯೆ ಪರಿಹಾರಕ್ಕಾಗಿ, ಇಷ್ಟಾರ್ಥ ಸಿದ್ದಿಗಾಗಿ ವೇಷ ಹಾಕುತ್ತೇನೆ ಎಂದು ಹರಕೆ ಹೊತ್ತವರು ವೇಷಗಳನ್ನು ಹಾಕಿಕೊಂಡು ದೇಗುಲಕ್ಕೆ ಬಂದು ಕುಣಿದು ಹರಕೆ ತೀರಿಸಿ ಹೋಗುತ್ತಾರೆ. ಮೂರು ಗ್ರಾಮಗಳಿಂದ ಹೊರತು ಪಡಿಸಿ, ನವರಾತ್ರಿಯ ದಿನಗಳಲ್ಲಿ ಕಟೀಲಿಗೆ ಸುಮಾರು ಮುನ್ನೂರಕ್ಕೂ ಹೆಚ್ಚು ಹುಲಿ, ಕರಡಿ, ಸಿಂಹ ವೇಷಗಳ ತಂಡಗಳು ಬಂದು ಕುಣಿದು ಹೋಗುತ್ತವೆ. ಲೆಕ್ಕ ಹಾಕಿದರೆ ಕಟೀಲಿನಲ್ಲಿ ಕುಣಿದು ಹರಕೆ ತೀರಿಸುವ ಹುಲಿ ವೇಷಗಳ ಸಂಖ್ಯೆ ಒಂದು ಸಾವಿರ ದಾಟೀತು. ಶ್ರವಣಾ ನಕ್ಷತ್ರದಂದು ದೇವೀ ಸಮ್ಮುಖದಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ನಡೆಯುತ್ತದೆ.ಇವಲ್ಲದೆ ಕಟೀಲು ದೇಗುಲದಲ್ಲಿ ನವರಾತ್ರಿಯ ದಿನಗಳಲ್ಲಿ ಸಾಂಸ್ಕೃತಿಕ ಕಾರ್‍ಯಕ್ರಮಗಳು, ಯಕ್ಷಗಾನಗಳು ಜನರನ್ನು ರಂಜಿಸುತ್ತವೆ.

Thursday, July 2, 2009

ನಾಗರಹಾವು ಹೆಬ್ಬಾವನ್ನೇ ನುಂಗಿತ್ತಾ..!

ಹೆಬ್ಬಾವು ಕೋಳಿ, ನಾಯಿ, ಮನುಷ್ಯರನ್ನು ನುಂಗುವುದನ್ನು ಕೇಳಿದ್ದೇವೆ, ನೋಡಿದ್ದೇವೆ. ಆದರೆ ಕಿನ್ನಿಗೋಳಿ ಟೆಂಪೋ ಪಾರ್ಕ್ ಬಳಿ ಮಂಗಳವಾರ ಸಂಜೆ ನಾಗರಹಾವೊಂದು ಹೆಬ್ಬಾವನ್ನೇ ನುಂಗಿ ಹಾಕಿತು. ಆಲದ ಮರವೊಂದರ ಮೇಲಿಂದ ರಸ್ತೆಗೆ ಬಿದ್ದ ಹೆಬ್ಬಾವಿನ ಮೇಲೆ ವಾಹನವೊಂದು ಹೋಯಿತು. ಹಾಗೆ ಗಾಯಗೊಂಡ ಹೆಬ್ಬಾವನ್ನು ಸ್ಥಳೀಯರು ಚರಂಡಿಗೆ ಹಾಕಿ ಹೋದರು. ಸ್ವಲ್ಪ ಹೊತ್ತಾದ ಬಳಿಕ ನಾಗರ ಹಾವೊಂದು ಬಂದು ಹೆಬ್ಬಾವನ್ನು ನುಂಗತೊಡಗಿತು. ತನಗಿಂತಲೂ ದೊಡ್ಡದಾದ, ಉದ್ದವಾದ ಹೆಬ್ಬಾವನ್ನು ಹತ್ತೇ ನಿಮಿಷಗಳಲ್ಲಿ ನುಂಗಿದ ನಾಗರಹಾವು ಆಮೇಲೆ ನಿಧಾನಕ್ಕೆ ಮರದ ಪೊಟರೆಯೊಳಗೆ ಹೋಯಿತು. ಸೇರಿದ್ದ ನೂರಕ್ಕೂ ಹೆಚ್ಚು ಮಂದಿಗೆ ರೋಮಾಂಚನ!








ಎಲ್ಲ ತಿಂದು ಹೊರಟು ನಿಂತ ನಾಗರಾಜ!

Saturday, June 27, 2009

ಕಡಲ ದಡದಲ್ಲಿ ಮುಂದುವರಿದ ನಡಿಗೆ










ಪಡುಬಿದ್ರೆ ದಾಟಿ ಉಚ್ಚಿಲದ ಬಳಿ ಕಡಲಿನಿಂದ ನೀರು ಕೊಂಡೊಯ್ದು, ಬಳಿಕ ವಾಪಾಸು ವಿಷಕಾರಿ ತ್ಯಾಜ್ಯವನ್ನು ಕಡಲಿಗೇ ಬಿಡುವ ನಾಗಾರ್ಜುನ ಕಂಪನಿಯವರ ಪೈಪ್ ಲೈನ್ ಕಾಮಗಾರಿ ಭರದಿಂದ ಸಾಗಿದೆ. ನೋಡುವ ಕರ್ಮ, ದುರಂತ ನಮ್ಮದು!



ಕಡಲಿನಲ್ಲಿ ಬಂಡೆಗಳ ರಾಶಿ, ತೆರೆಗಳು ಓಡಿ ಬಂದು, ಬಂಡೆಗೆ ಬಡಿದು ಹಾರಿ ಸಂಭ್ರಮಿಸುವುದನ್ನು ನೊಡುವ ಕಣ್ಣುಗಳ ನಮ್ಮವು!

Thursday, June 25, 2009

ಕಡಲ ದಡದಲ್ಲಿ ನಡಿಗೆ

ನಾವು ಒಂದಿಷ್ಟು ಗೆಳೆಯರು ಹೆಜಮಾಡಿಯಿಂದ ಕಾಪು ತನಕ ಹದಿನೈದು ಕಿ.ಮೀ.ಗಳಷ್ಟು ದೂರ ಕಡಲ ತೀರದಲ್ಲೇ ನಡೆದುಕೊಂಡು ಹೋದೆವು. ಅಮೇರಿಕಾದಿಂದ ಗೆಳೆಯರಾದ ಗಿಲ್ಬರ್ಟ್ ಡಿಸೋಜ ಪ್ರೀತಿಯಿಂದ ಕಳುಹಿಸಿದ ಕೆಮರಾದಿಂದ ಕ್ಲಿಕ್ಕಿಸಿದ ಬೀಚ್ ನಡಿಗೆಯ ಒಂದಿಷ್ಟು ಚಿತ್ರಗಳು ನಿಮಗಾಗಿ.
ನಮ್ಮ ಆರಂಭವಾದದ್ದು ಹೀಗೆ.
ಬೀಚ್ ಪಕ್ಕದಲ್ಲೊಂದು ಹೊಳೆ. ಕಾಮಿನಿ ಅಂತ. ಕಡಲ ಸೇರುವ ತವಕದಲ್ಲಿತ್ತು. ಅಲ್ಲೇ ದೋಣಿಯೊಂದಕ್ಕೆ ರಜೆ ಇತ್ತಾದರಿಂದ ನನ್ನ ಕೆಮರಾ ಕಣ್ಣಿಗೆ ಸಿಕ್ಕಿ ಬಿತ್ತು.
ಅದೇ ಹೊಳೆಯಲ್ಲಿ ಒಬ್ಬರು ಬಲೆ ಬೀಸಿ ಮೀನು ಹಿಡಿಯುತ್ತಿದ್ದರು.
ನೋಡಿ, ಆ ಕಡೆಯ ಕಡಲ ತೆರೆ ಈ ಕಡೆಯ ಹೊಳೆಯ ನೀರು ಒಂದಾಗುತ್ತಿದೆ. ಮಳೆ ಜೋರು ಬಂದರೆ ಬೀಚ್ ನಡಿಗೆ ಬಂದ್!
ಮಳೆ ಇಲ್ಲದಿದ್ದರೂ ಕಡಲ ಅಬ್ಬರಕ್ಕೇನೂ ಅಡ್ಡಿಯಿಲ್ಲ. ಒಂದರ ಹಿಂದೊಂದು ಎಂದು ತೆರೆಗಳು ಬರುತ್ತಲೇ ಇರುತ್ತವೆ. ಅವು ಸೋಲುವುದಿಲ್ಲ. ಮತ್ತೆ ಎದ್ದು ಬಂದು ದಡಕ್ಕೆ ಅಪ್ಪಳಿಸುತ್ತವೆ.
ಸಮುದ್ರ ಕಿನಾರೆಯಲ್ಲಿ ನಮ್ಮದು ಸಾವಿರ ಸಾವಿರ ಹೆಜ್ಜೆಗಳ ಪಯಣ! ನೋಡಿದಷ್ಟೂ ಮುಗಿದು ಹೋಗದ ಕಡಲರಾಶಿಯ ಪಕ್ಕದಲ್ಲಿ ನಾವೆಷ್ಟೆಂದರೂ ಅಷ್ಟೆ.
ಮನೆಯಲ್ಲಿ ಭೂತ ಪ್ರೇತ ದೈವಗಳ ಉಪಟಳವಿದ್ದಾಗ ಅವನ್ನು ಮಣಿಮಂಚದ ಸಮೇತ ಸಮುದ್ರಕ್ಕೆ ಬಿಸಾಡಿ ಉಚ್ಛಾಟಿಸುವ ನಂಬಿಕೆ ತುಳುನಾಡ ಕರಾವಳಿಯಲ್ಲಿದೆ. ಇದು ಹಾಗೆ ಬಿಟ್ಟು ಹೋದ ಅನಾಥ ಭೂತದ ಮಂಚ. ಇಂತಹ ನೂರಾರು ಮರದ ಆಸನ, ಮಂಚಗಳು ಕಡಲ ತಡಿಯಲ್ಲಿ ಕಾಣ ಸಿಕ್ಕವು.
ಬಾಟಲಿಗಂಟಿದ ಜೀವಂತ ಚಿಪ್ಪು ಪ್ರಾಣಿಯ ರಾಶಿ.







ಬೀಚ್ನಲ್ಲಿ ಬಾಟಲಿ, ಪ್ಲಾಸ್ಟಿಕ್, ಬಲ್ಬ್ ಮುಂತಾದ ವಸ್ತುಗಳು ರಾಶಿರಾಶಿ ಸಿಗುತ್ತಲೇ ಹೋಗುತ್ತವೆ.





ನಿಂತ ದೋಣಿಯಲ್ಲಿ ಕೂತು ಕೊಂಚ ವಿಶ್ರಾಂತಿ ಪಡೆದ ನಮಗೆ ಪ್ರಕ್ರತಿ ಎಂಬ ಖಾಸಗಿ ರೆಸಾರ್ಟ್ ನೋಡುವ ಅವಕಾಶವೂ ಸಿಕ್ಕಿತು.



ಗೆಳೆಯ ಯಶವಂತ ವಿಶ್ರಾಂತಿಗೆಂದು ಸುಮ್ಮನೆ ಕೂತು ಸಮುದ್ರದ ಫೊಟೋ ತೆಗೆಯುತ್ತಿದ್ದ. ಅದನ್ನು ನೋಡುತ್ತಿದ್ದ ನಾಯಿಯೊಂದು ಕೆಮರಾ ಮುಂದೆ ಬಂದು ನಿಂತು ನಗುತ್ತ ಫೋಸು ಕೊಟ್ಟದ್ದನ್ನು ನನ್ನ ಕೆಮರಾ ಕಂಡಿತು!
ಇನ್ನಷ್ಟು ನಡಿಗೆಯನ್ನು ಮುಂದಿನ ಕಂತಿನಲ್ಲಿ ಕೊಡುತ್ತೇನೆ.

Thursday, June 4, 2009

ನೀರು ಮತ್ತು ವಿದ್ಯುತ್


ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆಯ ನಾಲ್ಕು ಸಾವಿರ ಕೋಟಿ ರೂಪಾಯಿಯ ಯೋಜನೆಗೆ ಮುಂದಾಗುವ ಸರಕಾರಗಳು ಇಪ್ಪತ್ತು ಕೋಟಿ ಕೊಡಿ, ಸಮುದ್ರದ ಅಲೆಗಳಿಂದ ವಿದ್ಯುತ್ ತಯಾರಿಸಿ ಕೊಡುತ್ತೇನೆ ಎಂದು ಕೇಳುವ ಮಲ್ಪೆಯ ವಿಜಯ್‌ರ ಮಾತಿಗೆ ಮನ್ನಣೆ ಕೊಡುವುದೇ ಇಲ್ಲ.ತಮಿಳುನಾಡಿನಲ್ಲಿ ಅನೇಕ ಕಡೆ ಗಾಳಿಯಿಂದ ವಿದ್ಯುತ್ ಉತ್ಪಾದಿಸುವ ದೊಡ್ಡ ದೊಡ್ಡ ಸಾವಿರಾರು ಫ್ಯಾನುಗಳನ್ನು ಕಾಣಬಹುದು. ಆದರೆ ನಮ್ಮ ಕರಾವಳಿಯಲ್ಲಿ ಯಾಕೆ ಇನ್ನೂ ಅಳವಡಿಸದೆ, ಪರಿಸರ ನಾಶ ಮಾಡುವ ಕಲ್ಲದ್ದಲು ಆಧಾರಿತವಾದ ಯೋಜನೆಗೇ ಮಣೆ ಹಾಕುತ್ತಿದ್ದಾರೆನ್ನುವುದೇ ಸೋಜಿಗ. ನಾಲ್ಕು ಸಾವಿರ ಕೋಟಿಯಲ್ಲಿ ಅನೇಕರಿಗೆ ಪಾಲು ಇದೆ ಅಂತ ಜನ ಸಾಮಾನ್ಯರೂ ಸುಲಭವಾಗಿ ತರ್ಕಿಸಬಹುದು. ನೀರಿನಿಂದ ವಿದ್ಯುತ್ ಉತ್ಪಾದಿಸುವ ನಮ್ಮ ತಂತ್ರಜ್ಞಾನ ಹೆಮ್ಮೆಯದ್ದೇ.ಆದರೆ ವಿದ್ಯುತ್ ಸೋರಿಕೆ, ಕಳ್ಳತನದ ಪ್ರಮಾಣವನ್ನು ಕಡಿಮೆ ಮಾಡುವುದು ಸಾಧ್ಯವಾಗುತ್ತಿಲ್ಲ. ಅಭಿವೃದ್ಧಿಯಲ್ಲಿ ಅಥವಾ ಯೋಜನೆಗಳ ಅನುಷ್ಟಾನದಲ್ಲಿ ನಮ್ಮ ನಡುವಿನ ಹೆಚ್ಚಿನ ಜನ ಪ್ರತಿನಿಧಿಗಳಿಗೆ ವಿಶೇಷ ಆಸಕ್ತಿ ಅಥವಾ ಮುತುವರ್ಜಿ ಇರುವುದಿಲ್ಲ. ಯೋಜನೆಗಳ ಪ್ರಕಟನೆ ಆಗುವಾ ಗಲೂ ಕೋಟಿ ಲೆಕ್ಕದಲ್ಲೇ ಹೇಳಿಕೆ ಕೊಡುವ ಮಂತ್ರಿಗಳು, ಶಾಸಕರು ಯೋಜನೆಗಳ ಕಾಮಗಾರಿ ಎಷ್ಟರಮಟ್ಟಿಗೆ ಸಮರ್ಪಕವಾಗಿ ಆಗಿವೆ ಎಂಬುದನ್ನು ಚಿಂತಿಸುವುದೇ ಇಲ್ಲ.ವಾರಾಹಿ ಯೋಜನೆ ನೂರಾರು ಕೋಟಿಗಳ ಖರ್ಚಿನ ಬಳಿಕವೂ ಪೂರ್ತಿಗೊಂಡಿಲ್ಲ. ಅದರ ಬಳಕೆಯೂ ಆರಂಭವಾಗಿಲ್ಲ. ಆದರೆ ಇಂಜಿನಿ ಯರು, ಗುತ್ತಿಗೆದಾರರು ದುಂಡಗಾಗುತ್ತಲೇ ಹೋದರು. ಅನೇಕರು ನಿವೃತ್ತರಾದರು!ಈಗ ನದಿ ತಿರುಗಿಸುತ್ತೇವೆ ಅಂತ ಕೆಲವರು ಹೊರಟಿದ್ದಾರೆ! ಪಕೃತಿ ಸಹಜವಾಗಿ ಸಮುದ್ರದೆಡೆಗೆ ಹರಿಯುವ ನದಿಯನ್ನು ಉಲ್ಟಾ ತಿರುಗಿಸುವುದೆಂದರೆ ಒಂದರ್ಥದಲ್ಲಿ ನದಿಯನ್ನೇ ಇಲ್ಲವಾಗಿಸುವ ಪ್ರಯತ್ನವಲ್ಲವೆ?ಪತ್ರಿಕೆಗಳಲ್ಲಿ ಪುಟಗಟ್ಟಲೆ ಬರೆಹಗಳು ಪ್ರಕಟವಾದರೂ ಹೆಚ್ಚಿನ ಜನ ಮಳೆಗಾಲದಲ್ಲಿ ನೀರು ಇಂಗಿಸುವ ಪುಟ್ಟ ಪ್ರಯತ್ನವನ್ನೂ ಮಾಡುತ್ತಿಲ್ಲ. ಕೆರೆಗಳ ಹೂಳೆತ್ತುವಿಕೆ, ನಿರ್ಮಾಣಗಳ ಬಗ್ಗೆ ಹೆಚ್ಚು ಆಸಕ್ತಿ ವಹಿಸದೆ, ಬೇಗ ಒಣಗಿಹೋಗುವ ಕೊಳವೆ ಬಾವಿಗಳನ್ನೇ ನಿರ್ಮಿಸುವ ಹಠ ಜಲಾನಯನ ದಂತಹ ಅತ್ಯಂತ ಭ್ರಷ್ಟರಿರುವ ಇಲಾಖೆ ಸೇರಿದಂತೆ ಅನೇಕ ಅಧಿಕಾರಿಗಳದ್ದು. ಆದರೂ ನೀರು ಕೊಡಿ ಅಂತ ಜನ ಪ್ರತಿಭಟನೆ ಮಾಡುತ್ತಾರೆ. ಈ ನೀರಿನ ಯೋಜನೆಯಲ್ಲಿ ಆಗುವ ಅವ್ಯವಹಾರಗಳದ್ದೇ ದೊಡ್ಡ ಕಥೆ.ಸಮುದ್ರದ ನೀರನ್ನು ಶುದ್ಧೀಕರಿಸಿ, ಕುಡಿಯಲು ಉಪಯೋಗಿಸುವ ತಂತ್ರಜ್ಞಾನ ನಮ್ಮಲ್ಲಿದ್ದರೂ ಅದನ್ನು ಹೆಚ್ಚು ಬಳಸುವ, ಆ ಮೂಲಕ ನೀರಿನ ಸಮಸ್ಯೆ ಹೋಗಲಾಡಿಸುವ ಪ್ರಯತ್ನ ನಡೆಯುತ್ತಿಲ್ಲ.ದೊಡ್ಡ ದೊಡ್ಡ ಕಾರ್ಖಾನೆಗಳಲ್ಲಿ ವಿಷ ಪೂರಿತ ನೀರನ್ನು ನದಿಗಳಿಗೆ, ಸಮುದ್ರಕ್ಕೆ ಶುದ್ದೀಕರಿಸಿ ಬಿಡುವ ತಾಂತ್ರಿಕತೆ ಇದ್ದರೂ ಹೆಚ್ಚು ಖರ್ಚು ಎಂಬ ನೆಪದಲ್ಲಿ ಆ ಕಾರ್‍ಯವನ್ನು ಕೈಗಾರಿಕೆಗಳೂ ಮಾಡುತ್ತಿಲ್ಲ, ಮಾಡಿಸಬೇಕಾದ ಇಲಾಖಾ ಅಧಿಕಾರಿಗಳೂ ಅಮೇಧ್ಯ ತಿಂದು ಸುಮ್ಮನಾಗುತ್ತಾರೆ. ಉದಾಹರಣೆಗೆ ಸುರತ್ಕಲ್‌ನ ಎಂಆರ್‌ಪಿಎಲ್, ಬಿಎಸ್‌ಎಫ್‌ಗಳು ಸಮುದ್ರಕ್ಕೆ ನೇರ ಕೊಳಕು ನೀರನ್ನು ಕಾನೂನು ಬಾಹಿರವಾಗಿ ಬಿಡುತ್ತಿದ್ದರೂ ಯಾವ ಜನಪ್ರತಿ ನಿಧಿಯೂ, ಅಧಿಕಾರಿಯೂ ಧ್ವನಿ ಎತ್ತುತ್ತಿಲ್ಲ. ಮೀನು ಗಾರರು ಮಾತ್ರ ತಮ್ಮ ಉದ್ಯೋಗವನ್ನು ಕಳೆದು ಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮೀನುಗಳ ಮೇಲೆ ವಿಷ ಪರಿಣಾಮ ಬೀರಿ ತಿನ್ನುವವರ ಮೇಲೂ ಪ್ರಭಾವ ಬೀರಿದರೂ ಉದ್ಯಮಿಗಳ ದುಡ್ಡಿನ ಮುಂದೆ ಯಾರ ಧ್ವನಿಯೂ ಕೇಳಿಸದು ಅಲ್ಲವೇ?

Saturday, May 9, 2009

ನಿಮ್ಗೆ ಗೊತ್ತಾ?

ಒಂದಾನೊಂದು ಕಾಲದಲ್ಲಿ
ಒಬ್ಬ ರಾಜ ಇದ್ದನು
...........
..........
............
...........
.............
............
ಈಗ ಇಲ್ಲ!

ಏನೂ ಇಲ್ಲ!

ಹಿಂದೊಬ್ಬ
...
...
...
...
...
ಅವನ
ಮುಂದೊಬ್ಬ!

Friday, May 1, 2009

ಸಂಮಾನ ಅಭಿನಂದನೆ ಬೇಡ ಅಂದಾಗ.




ಚುನಾವಣೆ ಮುಗಿದು ಸಂಸದರ ಫಲಿತಾಂಶ ಬರುವ ಕಾಲವೂ ಬಂದಿದೆ.
ಒಬ್ಬ ಗೆದ್ದರೆ ಉಳಿದವರು ಸೋಲುವುದು ಸಹಜ. ಆಮೇಲೆ ಸೋತ ಅನೇಕರು ಕಾಣೆ ಯಾಗುವುದು, ಗೆದ್ದವರು ಸಭೆ ಸಮಾರಂಭ ಗಳಲ್ಲಿ ಮಿಂಚು ವುದು, ನಾನು ನಿಮ್ಮವನೇ, ನಿಮ್ಮ ಕೆಲಸ ಮಾಡುತ್ತೇನೆ ಅಂತೆಲ್ಲ ಭರವಸೆ ಕೊಡುವುದು ಎಲ್ಲ ಮಾಮೂಲು.
ಗೆದ್ದೆತ್ತಿನ ಬಾಲದಂತೆ ಒಂದಷ್ಟು ಮಂದಿ ತಮ್ಮ ಕೆಲಸ ಮಾಡಿಸಿಕೊಳ್ಳಲು, ಗೆದ್ದ ಶಾಸಕ, ಸಂಸದ, ಮಂತ್ರಿಯಂತಹ ಅಧಿಕಾರಸ್ಥನನ್ನು ಖುಷಿಗೊಳಿಸಲು ಸಭೆ ಸಮಾರಂಭ ಆಯೋಜಿಸಿ ಸಂಮಾನಿಸುವುದು ಕೂಡ ಹೊಸದಲ್ಲ.
ಸಾವಿರ ಸಂಖ್ಯೆಯಲ್ಲಿ ಜನ ಸೇರಿಸಿ, ಕೆಜಿ ಗಟ್ಟಲೆ ತೂಕದ ಹೂಹಾರ ಹಾಕಿ, ಮೀಟರ್ ಗಟ್ಟಲೆ ಉದ್ದಕ್ಕೆ ಬಿಡಿಸಿಟ್ಟ ಪಟಾಕಿ ಸುಟ್ಟು, ಬೆಳ್ಳಿ ಬಂಗಾರದ ಕಿರೀಟ ತೊಡಿಸಿ, ಖಡ್ಗ ಕೊಟ್ಟು ಜೈಕಾರ ಕೂಗಿ ಪುನೀತರಾಗುವ ಅಭಿಮಾನಿಗಳಿಗೇನೂ ಕೊರತೆಯಿರುವುದಿಲ್ಲ.
ಆದರೆ ಎಚ್ಚರಿಕೆಯಿಂದ ಇರಬೇಕಾದವನು ಗೆದ್ದ ಶಾಸಕ ಅಥವಾ ಸಂಸದ. ಈ ಎಲ್ಲ ಅಭಿಮಾನದ ಸಂಮಾನಗಳನ್ನು ಸ್ವೀಕರಿಸುವುದ ಕ್ಕಿಂತ ಅದಕ್ಕಾಗಿ ಮಾಡುವ ಸಾವಿರ, ಲಕ್ಷಾಂತರ ದುಡ್ಡನ್ನು ವ್ಯರ್ಥಗೊಳಿಸುವುದಕ್ಕಿಂತ ಆ ಹಣವನ್ನು ಒಳಿತು ಕಾರ್‍ಯಕ್ಕೆ ಬಳಸುವಂತೆ ತನ್ನ ಅಭಿಮಾನಿಗಳನ್ನು ಹುರಿದುಂಬಿಸುವುದು ಉತ್ತಮ.
ಒಬ್ಬ ಸಂಸದ ಗೆದ್ದ ಮೇಲೆ ಸುಮಾರು ಇನ್ನೂರೈವತ್ತು ಸಂಮಾನಗಳನ್ನು ಸ್ವೀಕರಿಸುತ್ತಾನೆ ಅಂತ ಲೆಕ್ಕ ಇಟ್ಟುಕೊಂಡರೆ; ಅವುಗಳಲ್ಲಿ ಐವತ್ತು ಸಾವಿರ ರುಪಾಯಿ ವೆಚ್ಚದ ಹತ್ತು, ೨೫ಸಾವಿರ ರೂ. ಖರ್ಚಿನ ನಲವತ್ತು, ಹತ್ತು ಸಾವಿರ ರೂ. ಖರ್ಚಿನ ನೂರು, ಐದು ಸಾವಿರ ರೂ. ವೆಚ್ಚದ ನೂರು ಸಂಮಾನ, ಅಭಿನಂದನೆ ಕಾರ್‍ಯಕ್ರಮಗಳು ಎಂದು ಇಟ್ಟುಕೊಂಡರೆ ಆಗುವ ಮೊತ್ತವೆಷ್ಟು ಗೊತ್ತೇ? ಬರೋಬ್ಬರಿ ಮೂವತ್ತು ಲಕ್ಷ ರೂಪಾಯಿ! ಇನ್ನು ೫ಸಾವಿರ ರೂಪಾಯಿಗಳಿಗಿಂತ ಕಡಿಮೆಯದ್ದು ಲೆಕ್ಕ ಮಾಡಿಲ್ಲ ಬಿಡಿ.
ಇದೇ ಹಣದಲ್ಲಿ ಬಡವರಿಗೆ ನೂರು ಮನೆ ಗಳನ್ನು ಕಟ್ಟಿಸಬಹುದು. ಒಂದು ಹೊಳೆಗೆ ಸೇತುವೆ ಕಟ್ಟಿಸಬಹುದು. ಒಂದು ಹಳ್ಳಿಗೆ ರಸ್ತೆ ಮಾಡಬಹುದು. ಒಂದು ಸಾವಿರ ಮನೆಗಳಿಗೆ ಕರೆಂಟು ಕೊಡಿಸಬಹುದು. ಮೂರು ಸಾವಿರ ಬಡ ಮಕ್ಕಳ ಶಾಲಾ ಫೀಸು ಕೊಡಿಸಬಹುದು. ಸಾವಿರಾರು ಮಂದಿಯ ಆಸ್ಪತ್ರೆಯ, ಔಷಧಿಯ ಖರ್ಚು ಕೊಡಬಹುದು....ಇದೆಲ್ಲವೂ ಸಾಧ್ಯವಾಗುವುದು ಕೇವಲ ಸಂಮಾನ ಅಭಿನಂದನೆ ಸಮಾರಂಭ ಬೇಡ ಅಂದಾಗ.
ಕೆಲವರು ವಾದಿಸಬಹುದು; ಕಾರ್‍ಯಕರ್ತರಿಗೆ, ಅಭಿಮಾನಿಗಳಿಗೆ ಸಂಮಾನ ಬೇಡ ಅಂದರೆ ಬೇಸರವಾಗಬಹುದು ಎಂದು. ಆದರೆ ನಾನೆಲ್ಲೂ ಸಂಮಾನ ಸ್ವೀಕರಿಸುವುದಿಲ್ಲ. ನೀವು ಗೆಲ್ಲಿಸಿರುವುದೇ ನನಗೆ ನೀಡಿದ ಬಹುದೊಡ್ಡ ಸಂಮಾನ. ಸಿಕ್ಕ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ ಬಳಿಕ ಬೇಕಾದರೆ ಸಂಮಾನಿಸಿ ಅಂತ ವಿನಯತೆಯಿಂದ, ಖಡಾ ಖಂಡಿತವಾಗಿ ಹೇಳಿದಾಗ ಎಂಥಾ ಅಭಿಮಾನಿ ಯೂ ಒಪ್ಪಿಕೊಂಡೇಕೊಳ್ಳುತ್ತಾನೆ. ಒಂದು ವೇಳೆ ಆಮೇಲೂ ಸಂಮಾನಿಸಿದರೆ ಅದು ಪ್ರೀತಿಯ ಅಭಿನಂದನೆ ಅಲ್ಲವೇ ಅಲ್ಲ, ಕೇವಲ ಸ್ವಾರ್ಥದ್ದು ಎಂದು ಬೇರೆ ವಿವರಿಸಿ ಹೇಳಬೇಕಿಲ್ಲ.
ಮೊದಲು ಸಮಸ್ಯೆಗಳ ಅಧ್ಯಯನ, ಯೋಜನೆಗಳ ಅನುಷ್ಟಾನ, ಕೆಲಸ, ಸಮಸ್ಯೆಗಳ ಪರಿಹಾರ, ಸಾಧನೆಗಳೆಲ್ಲ ಆದ ಮೇಲೆ ಜನ ಮತ್ತೆ ಹರಸುವ, ಸಂಮಾನಿಸುವ ಕಾರ್‍ಯ ಮಾಡೇ ಮಾಡುತ್ತಾರೆ.

Saturday, April 4, 2009

ನವರಸಗಳು








































ನವರಸಗಳ ಚಿತ್ರ
ನಿಮಗಿಷ್ಟವಾದೀತೆಂದು...





Wednesday, April 1, 2009

ಜಾತ್ರೆ





ಆಚಾರ್ಯ ತಪಸಾಮ್ನಾಯ ಜಪೇನ
ನಿಯಮೇನ ಚ ಉತ್ಸವೇನಾನ್ನ ದಾನೇನ ಕ್ಷೇತ್ರ ವೃದ್ಧಿಸ್ತು ಪಂಚಧಾ
ದೇವಳದಲ್ಲಿ ಪ್ರತಿಷ್ಟೆ ಮಾಡಿದ ತಂತ್ರಿ, ಅರ್ಚಕರ ತಪೋಬಲದಿಂದ ವೇದಪಾರಾಯಣದಿಂದ, ನಿಯಮ ನಿಬಂಧನೆಗಳಿಂದ(ಸಂಪ್ರದಾಯ ಪಾಲನೆಯಿಂದ) ಉತ್ಸವ ಅನ್ನದಾನದಿಂದ ಈ ಐದು ಪ್ರಕಾರಗಳಿಂದ ಕ್ಷೇತ್ರ ವೃದ್ಧಿಯಾಗುತ್ತದೆ.ಆದ್ದರಿಂದ ಕ್ಷೇತ್ರದ ಅಭಿವೃದ್ಧಿಗೆ ಉತ್ಸವವೆನ್ನುವುದು ಅನಿವಾರ್ಯ. ಉತ್ಸವ ಅಥವಾ ಕನ್ನಡದ ಜಾತ್ರೆ ಯಾವ ರೀತಿಯಲ್ಲೂ ಮಾಡಬಹುದು.ಕೆಲವೆಡೆ ವಾರ್ಷಿಕ ದಿನವಾಗಿ, ಇನ್ನು ಕೆಲವೆಡೆ ಧ್ವಜಾರೋಹಣಗೈದು ಮೂರು, ಐದು, ಹತ್ತು ದಿನಗಳ ಕಾಲ, ಇನ್ನು ಕೆಲವೆಡೆ ಭಜನೆಗಳ ಮೂಲಕ ಉತ್ಸವ ನಡೆಸುತ್ತಾರೆ.
ಪ್ರತಿಷ್ಟಾ ವರ್ಧಂತಿ ರೂಪ ದಲ್ಲೂ ಉತ್ಸವ ಆಚರಣೆಯಾಗುತ್ತದೆ.ಉತ್ ಸವ ಎಂದರೆ ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯುವುದು ಎಂದರ್ಥ. ಧ್ವಜವೆಂದರೆ ಚಿಹ್ನೆ. ಆಯಾ ದೇವರ ವಾಹನದ ಚಿತ್ರವಿರುವ ಮೇಲಕ್ಕೇರಿಸಿ, ಧ್ವಜಾರೋಹಣದ ಮೂಲಕ ಇಡೀ ಜಗತ್ತಿಗೆ ಉತ್ಸವವನ್ನು ಸಾರುವ ಸೂಚನೆ. ಕೆಳಗಿನ ಲೋಕಗಳಾದ ಅತಲ, ವಿತಲ. ಸುತಲ, ನಿತಲ, ತಲಾತಲ, ರಸಾತಲ, ಪಾತಾಲ ಹಾಗೂ ಮೇಲಿನ ಭೂಃ, ಭುವ, ಸ್ವ, ಮಹಾ, ಜನಃ, ಸತ್ಯ ಲೋಕಗಳು ಅಂದರೆ ಹದಿನಾಲ್ಕು ಲೋಕಗಳ ದೇವತೆಗಳು ರಥಾರೋಹಣದ ಕಾಲದಲ್ಲಿ ದೇವ ರನ್ನು ನೋಡುತ್ತಾರೆ. ಅಷ್ಟೆಲ್ಲ ದೇವತೆಗಳ ಶಕ್ತಿಯಿರುವ ರಥವನ್ನು ಎಳೆಯುವುದು ಪುಣ್ಯದ ಕೆಲಸ. ರಥಾರೋಹಣ ನೋಡಿದರೆ ಪುನರ್ ಜನ್ಮವಿಲ್ಲ ಎಂಬ ನಂಬಿಕೆ, ಕಲ್ಪನೆಯಿದೆ.ಆ ಕಾರಣಕ್ಕಾಗಿ ಜಾತ್ರೆ ಸಂದರ್ಭ ಜನ ಸೇರುತ್ತಾರೆ. ಪರಿಣಾಮ ಕ್ಷೇತ್ರ ಅಭಿವೃದ್ಧಿಯಾಗುತ್ತದೆ.ನಮ್ಮ ಒಂದು ವರ್ಷ ದೇವರಿಗೆ ಒಂದು ದಿನ. ಪ್ರತಿ ವರ್ಷ ನಡೆಯುವ ಜಾತ್ರೆ ಅಂದರೆ ದೇವರಿಗೆ ಪ್ರತಿ ದಿನವೂ ಉತ್ಸವವೇ.ರಥವನ್ನು ಕಟ್ಟುವ ಕಾಯಕವೂ ಆ ಊರಿನ ಕೆಲ ಮನೆಯವರ ಪಾಲಿಗೆ ಸೇವೆ, ಕರ್ತವ್ಯ.ಪತಾಕೆ, ಸಿಂಹ, ಆನೆ, ಗರುಡ ಮುಂತಾದ ಕೆತ್ತನೆಗಳನ್ನು ಕಟ್ಟಿ ಸಿಂಗರಿಸುವ ಚೆಂದವೇ ಬೇರೆ.ರಥಗಳಲ್ಲೂ ಚಂದ್ರ ಮಂಡಲ, ಚಿಕ್ಕ ರಥ, ಬ್ರಹ್ಮ ರಥ, ಬೆಳ್ಳಿಯ ರಥ, ಚಿನ್ನದ ರಥ ಹೀಗೆ ವಿವಿಧ ವಿಧಗಳು. ರಥದಲ್ಲಿ ದೇವರನ್ನು ಗೋವಿಂದಾ ಅನ್ನಿ ಗೋವಿಂದ ಎಂದು ಕೂಗುತ್ತ ಎಳೆದು ಪುನೀತರಾಗಲು ನೂರಾರು ಮಂದಿ ಸೇರುತ್ತಾರೆ. ಹಾಗೆ ರಥ ಎಳೆಯುವುದನ್ನು ಕೈಮುಗಿದು ನೋಡಲು ಸಾವಿರಾರು ಮಂದಿ ಸೇರುತ್ತಾರೆ. ಪ್ರಸಿದ್ಧ ದೇಗುಲಗಳಲ್ಲಿ ಭಕ್ತರ ಸಂಖ್ಯೆ ಲಕ್ಷದ ಲೆಕ್ಕದಲ್ಲಿರುತ್ತದೆ. ದೇವರನ್ನು ಪಲ್ಲಕಿಯಲ್ಲಿ ಕುಳ್ಳಿರಿಸಿ ಸಂಭ್ರಮಿ ಸುವ ಜೊತೆಗೆ, ಆಯಾ ದೇಗುಲದ ಪರಿಸರದ ಊರುಗಳಿಗೂ ದೇವರನ್ನು ಸವಾರಿ ತರಲಾಗುತ್ತದೆ. ಇವತ್ತು ನಮ್ಮ ಊರಿಗೆ ದೇವರು ಬರುತ್ತಾರೆ ಅಂತ ಆಯಾ ಹಾದಿಗಳ ಮಂದಿ ಕಟ್ಟೆಗಳನ್ನು ನಿರ್ಮಿಸಿ, ಸಿಂಗರಿಸಿ ಪೂಜೆಗೆ ಅನುವು ಮಾಡಿಕೊಂಡಿರುತ್ತಾರೆ.ದೇಗುಲದ ಪಕ್ಕದಲ್ಲಿ ಒಬ್ಬನಿಗಂತೂ ಗರ್ನಲು ಬಿಡುವುದೇ ಕೆಲಸ. ವಾದ್ಯ, ಚೆಂಡೆ, ಡೋಲು ಬಡಿಯುವ ಕಾಯಕದ ತುಂಬ ಜನ ಸೇರುವುದೇ ಜಾತ್ರೆಯಲ್ಲಿ. ಜಾತ್ರೆ ಆ ಊರಿಗೆ ಹಬ್ಬದಂತೆ. ಪ್ರತಿ ಮನೆಗೂ ಸಂಭ್ರಮ. ನೆಂಟರು, ಅತಿಥಿಗಳು ಬರುತ್ತಾರೆ. ಮನೆ ಮಂದಿ ದೂರದೂರುಗಳಿಂದ ಬರುತ್ತಾರೆ. ಬಂಧುಗಳೆಲ್ಲ ಒಂದಾಗಲು ಮದುವೆಯಂತಹ ಶುಭ ಸಮಾರಂಭ ಬಿಟ್ಟರೆ ಉತ್ಸವದಂತಹ ಧಾರ್ಮಿಕ ನಂಬಿಕೆಯೇ ಒಂದು ನೆಪ. ಜಾತ್ರೆಗೆ ಬಟ್ಟೆ ಖರೀದಿ ಸುವುದು, ಜಾತ್ರೆಯ ಸಂತೆಯಲ್ಲಿ ವಸ್ತುಗಳನ್ನು ಕೊಳ್ಳುವುದು, ಊರವರೆಲ್ಲ ಸಿಗುವುದು ಇಂತಹ ಅನನ್ಯ ಅನುಭವಗಳು ಅನೇಕ. .ಅಂದಹಾಗೆ ಜಾನುವಾರು ಜಾತ್ರೆ, ಕೋಣಗಳ ಜಾತ್ರೆ ಅಂದರೆ ಅದು ಬೇರೆಯದೇ ಸ್ವರೂಪ!