Sunday, October 4, 2009

ಕೋಣ ಕೊಳ್ಳುವವರಿಲ್ಲ!

ಮಹಿಷ, ರಕ್ತಾಕ್ಷ ಎಂದೆಲ್ಲ ಕರೆಯಲ್ಪಡುವ ಕೋಣಗಳನ್ನು ಕೇಳುವವರಿಲ್ಲ!

ಕಂಬಳದ ಸಂದರ್ಭ ಬಿಟ್ಟರೆ ಕೋಣಗಳು ಇತ್ತೀಚಿನ ದಿನಗಳಲ್ಲಿ ಗದ್ದೆಗಳಿಂದಲೇ ದೂರವಾಗುತ್ತವೆ. ಇನ್ನು ಹಟ್ಟಿಯಲ್ಲಿ ಕಂಡು ಬರುವುದಾದರೂ ಹೇಗೆ?ಕೊಂಚ ಬುದ್ದಿ ಮಂದ ಎಂದು ಹೇಳಲ್ಪಡುವ ಕೋಣಗಳು ಗದ್ದೆ ಉಳುವುದಕ್ಕೆ ಬಳಸಲ್ಪಡುವುದು ಜಾಸ್ತಿ. ಆದರೆ ಇತ್ತೀಚಿನ ದಿನಗಳಲ್ಲಿ ಭತ್ತದ ಕೃಷಿ ಬಿಟ್ಟು, ಕಂಗು, ತೆಂಗು, ರಬ್ಬರು ಅಂತ ತೋಟಗಳೆಡೆಗೆ ಬದಲಾವಣೆ ಹೊಂದಿದ ಮೇಲೆ ಕೋಣಗಳ ಮಹತ್ವ ಹೊರಟು ಹೋಗತೊಡಗಿತು. ಭತ್ತದ ಕೃಷಿ ಮಾಡುವ ಮಂದಿಯೂ ಹದಗೊಳಿಸಲು ಟಿಲ್ಲರ್, ಟ್ರಾಕ್ಟರ್‌ಗಳಂತಹ ಯಂತ್ರ ಗಳನ್ನು ಗದ್ದೆಗಳಿಗೆ ಇಳಿಸಿದ ಮೇಲೆ ಕೋಣಗಳಿಗೆಲ್ಲಿದೆ ಕೆಲಸ?ಪರಿಣಾಮ ಹತ್ತು ವರುಷಗಳ ಹಿಂದೆ ದಿನವೊಂದಕ್ಕೆ ಹತ್ತು ಹದಿನೈದು ಜೋಡಿ ಕೋಣಗಳನ್ನು ಮಾರುತ್ತಿದ್ದ ವ್ಯಾಪಾರಿ ಈಗ ತಿಂಗಳಿಗೆ ಐದು ಜೋಡಿಗಳನ್ನು ಮಾರಿದರೆ ದೊಡ್ಡದು. ಹಿಂದೆ ದಿನವೊಂದಕ್ಕೆ ಹತ್ತರಿಂದ ಹದಿನೈದು ಜೋಡಿ ಕೋಣಗಳು ಮಾರಲ್ಪಡುತ್ತಿದ್ದರೆ ಈಗ ತುಂಬ ಕಡಿಮೆ. ಮಾರ್ಚ್, ಎಪ್ರಿಲ್, ಮೇ, ಜೂನ್ ತಿಂಗಳಲ್ಲಿ ಹತ್ತಿಪ್ಪತ್ತು ಜೋಡಿ ಮಾರಲ್ಪಡುತ್ತವೆ. ಉಳಿದ ತಿಂಗಳು ನಾಲ್ಕೈದು ಹೋದರೇ ಹೆಚ್ಚು ಅನ್ನುತ್ತಾರೆ ವ್ಯಾಪಾರಿಗಳು. ಜೋಡಿ ಕೋಣಗಳಿಗೆ ೨೦ರಿಂದ ೩೦ಸಾವಿರ ರೂಪಾಯಿಗಳಷ್ಟು ಬೆಲೆಯಿರುತ್ತದೆ. ಕಂಬಳದ ಕೋಣಗಳಾದರೆ ಒಂದಕ್ಕೇ ಇಪ್ಪತ್ತೈದು ಸಾವಿರ ರೂಪಾಯಿ ಇರುವುದೂ ಇದೆ. ಕೋಣಗಳಲ್ಲಿ ಘಟ್ಟದ(ಮಲೆನಾಡು) ಕೋಣಗಳು, ಊರ ಕೋಣಗಳು ಅಂತಿವೆ. ಘಟ್ಟದ ಕೋಣಗಳು ಊರಿನ(ಕರಾವಳಿಯ) ಕೋಣಗಳಷ್ಟು ಚಲಾಕು ಅಲ್ಲ. ಹಲ್ಲುಗಳು ಮೂಡಿದ ಬಳಿಕ ಕೋಣಗಳನ್ನು ಉಳಲು ಆರಂಭಿಸುತ್ತಾರೆ. ಆಗ ಅವು ಜೋರಾಗದಂತೆ ಅವುಗಳ ಬೀಜ ಕೊಟ್ಟ ಗುದ್ದುವುದು ಅಂತಿದೆ. ಪಳಗಿಸಲು ಇದು ಸಹಾಯಕಾರಿ.ಓಟದ(ಕಂಬಳ) ಕೋಣಗಳನ್ನು ಮಳೆಗಾಲದಲ್ಲಿ ಒಂದೆರಡು ಸಲ ಮಾತ್ರ ಗದ್ದೆ ಉಳಲು ಬಳಸುತ್ತಾರೆ. ಈ ಕೋಣಗಳನ್ನು ಓಟಕ್ಕೆ ಎಣ್ಣೆ ಹಚ್ಚಿ, ಹುರುಳಿ ಕೊಟ್ಟು, ತರಬೇತಿ ನೀಡುತ್ತಾರೆ. ಇವುಗಳನ್ನು ನೋಡಲಿಕ್ಕೆಂದೇ ಜನ ನೇಮಿಸುತ್ತಾರೆ. ಕಂಬಳದ ಕೋಣಗಳು ಗೆಲ್ಲುವುದು ಆ ಯಜಮಾನನಿಗೆ ಪ್ರತಿಷ್ಟೆಯ ಸಂಗತಿ. ಉಳುವ ಕೋಣಗಳಿಗೆ ಹುರುಳಿ, ಗಂಜಿ ಕೊಟ್ಟು ತಯಾರು ಮಾಡುತ್ತಾರೆ.ಆದರೆ ಕೋಣಗಳನ್ನು ಕೊಳ್ಳುವವರಿಲ್ಲದ, ಪಾಲಿಸುವವರೂ ಇಲ್ಲದ ದಿನಗಳು ಬಂದಿವೆ. ಕಂಬಳಕ್ಕಷ್ಟೇ ಸೀಮಿತವಾಗುತ್ತಿರುವ ಕೋಣಗಳು ಕೃಷಿಯ ಬದಲು ಮೋಜಿನ ಕ್ರೀಡೆಯ ಪ್ರಾಣಿಗಳಾಗುತ್ತಿರುವುದು ವಾಸ್ತವ.

Saturday, October 3, 2009

ಮನೆಯೊಳಗಿಲ್ಲ ಒಲೆ, ಹೊರಗೆ ಹೊಗೆ










ಅಲ್ಲಿ ದೂರದಲ್ಲೆಲ್ಲೋ ಹೊಗೆ ಕಾಣಿಸುತ್ತಿದ್ದರೆ ಮನೆಯಿದೆ ಅಂತ ನಿರ್ಜನ ಪ್ರದೇಶದಲ್ಲಿ, ಗುಡ್ಡ ಗಾಡಿನಲ್ಲಿ, ಕಾಡಿನಲ್ಲಿ ನಡೆದುಕೊಂಡು ಹೋಗುತ್ತಿದ್ದ ವರು ಲೆಕ್ಕಾಚಾರ ಹಾಕುತ್ತಿದ್ದರು. ಮನೆಯಿದ್ದರೆ ಅಲ್ಲಿ ಮಂದಿಯಿರುತ್ತಾರೆ. ಅವರಿದ್ದರೆ ಅಡುಗೆಯ ಒಲೆಯೋ, ಬಚ್ಚಲಿನ ಒಲೆಯೋ, ಭತ್ತ ಕಾಯಿಸುವ ಒಲೆಯೋ ಉರಿಯುತ್ತಲಿರುತ್ತದೆ. ಒಲೆ ಯಿಲ್ಲದ ಮನೆಯಿದ್ದರೆ ಅದು ಅಚ್ಚರಿಯ ಸಂಗತಿಯೇ! ಮನೆಯೇ ಇಲ್ಲದಿದ್ದರೂ, ಕಟ್ಟಿಕೊಂಡಿರುವ ಜೋಪಡಿ ಪಕ್ಕದಲ್ಲೊಂದು ಒಲೆ ಉರಿಯುತ್ತಿರುತ್ತಿದೆ.ಆದರೆ ಈಗ ಒಲೆಗಳಿಲ್ಲದ, ಹೊಗೆಯೂ ಇಲ್ಲದ ದಿನಗಳು ಬಂದಿವೆ!ಈಗ ಸೀಮೆ ಎಣ್ಣೆ ಸ್ಟೌವ್ಗಳು ಕೂಡ ಹಳತಾಗಿವೆ. ಗ್ಯಾಸ್ಹಂಡೆಗಳು ಮನೆಗಳನ್ನು ಆವರಿಸಿವೆ. ಪೇಟೆಗಳ ಮನೆಗಳಿಗೆ ವಿದ್ಯುತ್ ಒಲೆ ಬಂದಿದೆ. ಸೌರಶಕ್ತಿಯ ಒಲೆಯೂ ಬಂದಿದೆ. ಆದರೆ ಕಟ್ಟಿಗೆಯನ್ನು ಉಪಯೋಗಿಸಿ ಬೇಯಿಸುವ, ಕಾಯಿಸುವ ಒಲೆ ಇಲ್ಲವಾಗುತ್ತಿದೆ.ಕಟ್ಟಿಗೆಯ ಜೊತೆಗೆ ಸೆಗಣಿಯ ತಟ್ಟಿ, ಒಣಗಿಸಿದ ಬೆರಣಿಯಿಂದ ಬೆಂಕಿ ಉರಿಸಲಾಗುತ್ತಿತ್ತು. ಕಡಿಮೆ ಕಟ್ಟಿಗೆ ಅಥವಾ ಮರದ ಚೂರುಗಳನ್ನು ಬಳಸಿ, ಪೇಪರ್, ಕಸ ಗಳನ್ನು ಬಳಸಿ ಬೆಂಕಿಯಿಂದ ಕಾಯಿಸುವ, ಬೇಯಿಸುವ ಒಲೆಗಳೂ ಬಂದಿದ್ದವು. ಆದರೂ ಅವು ಕಟ್ಟಿಗೆಯಷ್ಟು ಜನಪ್ರಿಯವಾಗಲಿಲ್ಲ. ನಗರಗಳಲ್ಲಿ ಕಟ್ಟಿಗೆ ಒಲೆಗಳನ್ನು ಬಳಸುವುದು ಕಷ್ಟವೇ. ಆದರೆ ಇತ್ತೀಚಿಗೆ ಅಭಿವೃದ್ಧಿಯ ವೇಗಕ್ಕೆ ಹಳ್ಳಿಗಳಲ್ಲೂ ಸೌದೆ ಉರಿಸುವ ಒಲೆಗಳು ಕಾಣೆ ಯಾಗುತ್ತಿವೆ. ಅಲ್ಲಿಗೆ ಗ್ಯಾಸ್ ಸ್ಟೌವ್ ಬಂದು ಕೂರುತ್ತಿದೆ. ಸೂರ್ಯಶಕ್ತಿಯ ಒಲೆಗಳು ನೀರು ಬಿಸಿ ಮಾಡಲು ವಿದ್ಯುತ್ಗೆ ಓಕೆ. ಆದರೆ ಅಡುಗೆಗೆ ಮಳೆಗಾಲಗಳಲ್ಲಿ ಕಷ್ಟ. ಇನ್ನು ವಿದ್ಯುತ್ ಒಲೆಗಳು ಹೆಚ್ಚು ವೆಚ್ಚವನ್ನು ಬಯಸುತ್ತವೆ. ಕಟ್ಟಿಗೆಗೆ ಪರಿಸರ ನಾಶವಾಗುತ್ತದೆ ಎಂಬುದು ಹೌದಾದರೂ ಒಲೆಗಳ ಮುಂದಿನ ಸಂಭ್ರಮ ಅನುಭವಿಸಿದವರಿ ಗಷ್ಟೇ ಗೊತ್ತು.ಗಡಗಡ ನಡುಗುವ ಚಳಿಗೆ ಬೆಂಕಿ ಹಾಕಿ ಒಲೆ ಮುಂದೆ ಕೂತರೆ ವಾಹ್ ಪರಮಾದ್ಭುತ ಸುಖ.ಕೆಲವರು ಹೇಳುವುದುಂಟು ಕಟ್ಟಿಗೆ ಒಲೆಯಲ್ಲಿ ಮಾಡುವ ಚಹಾ, ಕಾಫಿಯ ಸ್ವಾದಿಷ್ಟ, ರುಚಿಯೇ ಬೇರೆ ಅಂತ. ಒಲೆ ಮುಂದೆ ಕೂತು ಹುಹೂಹೂ ಅಂತ ಊದುಕೊಳವೆಯಿಂದ ಗಾಳಿ ಊದೀ ಊದಿ ಕೆಂಡ ದಿಂದ ಹೊಗೆಯನ್ನೂ, ಬೆಂಕಿಯನ್ನೂ ಹುಟ್ಟಿಸಿ, ಅದರಲ್ಲಿ ಪಾತ್ರೆಯಿಟ್ಟು ಹಾಲನ್ನೋ, ಅನ್ನವನ್ನೋ, ಸಾರನ್ನೋ, ಪಾಯಸವನ್ನೋ ಮಾಡುವ ರೀತಿ ಇನ್ನು ನೆನಪುಗಳು ಮಾತ್ರ. ಸಣ್ಣ ಒಲೆ, ಮಧ್ಯಮ ಒಲೆ, ದೊಡ್ಡ ಒಲೆಗಳನ್ನು ಕಲ್ಲು ಇಟ್ಟು ಕಟ್ಟಿ, ಅದಕ್ಕೆ ಸೆಗಣಿಯನ್ನೋ ಸಿಮೆಂಟನ್ನೋ ಬಳಿದು ರಚಿಸುವ ಕಾಯಕ ಗ್ರಾಮೀಣ ಬದುಕು ದೂರ ವಾದಂತೆ ಕಡಿಮೆಯಾಗುತ್ತಲೇ ಹೋಗುತ್ತಿದೆ.ಫೋನು, ಮೊಬೈಲು, ಇಂಟರ್ನೆಟ್ಗಳೆಲ್ಲ ಬಂದ ಮೇಲೆ ಓಲೆಗಳು ಕಡಿಮೆಯಾದಂತೆ, ಕಟ್ಟಿಗೆ ಒಲೆಗಳೂ ಆಧುನಿಕತೆಯ ಹೊಡೆತಕ್ಕೆ ಓಡಿ ಹೋಗುತ್ತಿವೆ