Friday, May 1, 2009

ಸಂಮಾನ ಅಭಿನಂದನೆ ಬೇಡ ಅಂದಾಗ.
ಚುನಾವಣೆ ಮುಗಿದು ಸಂಸದರ ಫಲಿತಾಂಶ ಬರುವ ಕಾಲವೂ ಬಂದಿದೆ.
ಒಬ್ಬ ಗೆದ್ದರೆ ಉಳಿದವರು ಸೋಲುವುದು ಸಹಜ. ಆಮೇಲೆ ಸೋತ ಅನೇಕರು ಕಾಣೆ ಯಾಗುವುದು, ಗೆದ್ದವರು ಸಭೆ ಸಮಾರಂಭ ಗಳಲ್ಲಿ ಮಿಂಚು ವುದು, ನಾನು ನಿಮ್ಮವನೇ, ನಿಮ್ಮ ಕೆಲಸ ಮಾಡುತ್ತೇನೆ ಅಂತೆಲ್ಲ ಭರವಸೆ ಕೊಡುವುದು ಎಲ್ಲ ಮಾಮೂಲು.
ಗೆದ್ದೆತ್ತಿನ ಬಾಲದಂತೆ ಒಂದಷ್ಟು ಮಂದಿ ತಮ್ಮ ಕೆಲಸ ಮಾಡಿಸಿಕೊಳ್ಳಲು, ಗೆದ್ದ ಶಾಸಕ, ಸಂಸದ, ಮಂತ್ರಿಯಂತಹ ಅಧಿಕಾರಸ್ಥನನ್ನು ಖುಷಿಗೊಳಿಸಲು ಸಭೆ ಸಮಾರಂಭ ಆಯೋಜಿಸಿ ಸಂಮಾನಿಸುವುದು ಕೂಡ ಹೊಸದಲ್ಲ.
ಸಾವಿರ ಸಂಖ್ಯೆಯಲ್ಲಿ ಜನ ಸೇರಿಸಿ, ಕೆಜಿ ಗಟ್ಟಲೆ ತೂಕದ ಹೂಹಾರ ಹಾಕಿ, ಮೀಟರ್ ಗಟ್ಟಲೆ ಉದ್ದಕ್ಕೆ ಬಿಡಿಸಿಟ್ಟ ಪಟಾಕಿ ಸುಟ್ಟು, ಬೆಳ್ಳಿ ಬಂಗಾರದ ಕಿರೀಟ ತೊಡಿಸಿ, ಖಡ್ಗ ಕೊಟ್ಟು ಜೈಕಾರ ಕೂಗಿ ಪುನೀತರಾಗುವ ಅಭಿಮಾನಿಗಳಿಗೇನೂ ಕೊರತೆಯಿರುವುದಿಲ್ಲ.
ಆದರೆ ಎಚ್ಚರಿಕೆಯಿಂದ ಇರಬೇಕಾದವನು ಗೆದ್ದ ಶಾಸಕ ಅಥವಾ ಸಂಸದ. ಈ ಎಲ್ಲ ಅಭಿಮಾನದ ಸಂಮಾನಗಳನ್ನು ಸ್ವೀಕರಿಸುವುದ ಕ್ಕಿಂತ ಅದಕ್ಕಾಗಿ ಮಾಡುವ ಸಾವಿರ, ಲಕ್ಷಾಂತರ ದುಡ್ಡನ್ನು ವ್ಯರ್ಥಗೊಳಿಸುವುದಕ್ಕಿಂತ ಆ ಹಣವನ್ನು ಒಳಿತು ಕಾರ್‍ಯಕ್ಕೆ ಬಳಸುವಂತೆ ತನ್ನ ಅಭಿಮಾನಿಗಳನ್ನು ಹುರಿದುಂಬಿಸುವುದು ಉತ್ತಮ.
ಒಬ್ಬ ಸಂಸದ ಗೆದ್ದ ಮೇಲೆ ಸುಮಾರು ಇನ್ನೂರೈವತ್ತು ಸಂಮಾನಗಳನ್ನು ಸ್ವೀಕರಿಸುತ್ತಾನೆ ಅಂತ ಲೆಕ್ಕ ಇಟ್ಟುಕೊಂಡರೆ; ಅವುಗಳಲ್ಲಿ ಐವತ್ತು ಸಾವಿರ ರುಪಾಯಿ ವೆಚ್ಚದ ಹತ್ತು, ೨೫ಸಾವಿರ ರೂ. ಖರ್ಚಿನ ನಲವತ್ತು, ಹತ್ತು ಸಾವಿರ ರೂ. ಖರ್ಚಿನ ನೂರು, ಐದು ಸಾವಿರ ರೂ. ವೆಚ್ಚದ ನೂರು ಸಂಮಾನ, ಅಭಿನಂದನೆ ಕಾರ್‍ಯಕ್ರಮಗಳು ಎಂದು ಇಟ್ಟುಕೊಂಡರೆ ಆಗುವ ಮೊತ್ತವೆಷ್ಟು ಗೊತ್ತೇ? ಬರೋಬ್ಬರಿ ಮೂವತ್ತು ಲಕ್ಷ ರೂಪಾಯಿ! ಇನ್ನು ೫ಸಾವಿರ ರೂಪಾಯಿಗಳಿಗಿಂತ ಕಡಿಮೆಯದ್ದು ಲೆಕ್ಕ ಮಾಡಿಲ್ಲ ಬಿಡಿ.
ಇದೇ ಹಣದಲ್ಲಿ ಬಡವರಿಗೆ ನೂರು ಮನೆ ಗಳನ್ನು ಕಟ್ಟಿಸಬಹುದು. ಒಂದು ಹೊಳೆಗೆ ಸೇತುವೆ ಕಟ್ಟಿಸಬಹುದು. ಒಂದು ಹಳ್ಳಿಗೆ ರಸ್ತೆ ಮಾಡಬಹುದು. ಒಂದು ಸಾವಿರ ಮನೆಗಳಿಗೆ ಕರೆಂಟು ಕೊಡಿಸಬಹುದು. ಮೂರು ಸಾವಿರ ಬಡ ಮಕ್ಕಳ ಶಾಲಾ ಫೀಸು ಕೊಡಿಸಬಹುದು. ಸಾವಿರಾರು ಮಂದಿಯ ಆಸ್ಪತ್ರೆಯ, ಔಷಧಿಯ ಖರ್ಚು ಕೊಡಬಹುದು....ಇದೆಲ್ಲವೂ ಸಾಧ್ಯವಾಗುವುದು ಕೇವಲ ಸಂಮಾನ ಅಭಿನಂದನೆ ಸಮಾರಂಭ ಬೇಡ ಅಂದಾಗ.
ಕೆಲವರು ವಾದಿಸಬಹುದು; ಕಾರ್‍ಯಕರ್ತರಿಗೆ, ಅಭಿಮಾನಿಗಳಿಗೆ ಸಂಮಾನ ಬೇಡ ಅಂದರೆ ಬೇಸರವಾಗಬಹುದು ಎಂದು. ಆದರೆ ನಾನೆಲ್ಲೂ ಸಂಮಾನ ಸ್ವೀಕರಿಸುವುದಿಲ್ಲ. ನೀವು ಗೆಲ್ಲಿಸಿರುವುದೇ ನನಗೆ ನೀಡಿದ ಬಹುದೊಡ್ಡ ಸಂಮಾನ. ಸಿಕ್ಕ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ ಬಳಿಕ ಬೇಕಾದರೆ ಸಂಮಾನಿಸಿ ಅಂತ ವಿನಯತೆಯಿಂದ, ಖಡಾ ಖಂಡಿತವಾಗಿ ಹೇಳಿದಾಗ ಎಂಥಾ ಅಭಿಮಾನಿ ಯೂ ಒಪ್ಪಿಕೊಂಡೇಕೊಳ್ಳುತ್ತಾನೆ. ಒಂದು ವೇಳೆ ಆಮೇಲೂ ಸಂಮಾನಿಸಿದರೆ ಅದು ಪ್ರೀತಿಯ ಅಭಿನಂದನೆ ಅಲ್ಲವೇ ಅಲ್ಲ, ಕೇವಲ ಸ್ವಾರ್ಥದ್ದು ಎಂದು ಬೇರೆ ವಿವರಿಸಿ ಹೇಳಬೇಕಿಲ್ಲ.
ಮೊದಲು ಸಮಸ್ಯೆಗಳ ಅಧ್ಯಯನ, ಯೋಜನೆಗಳ ಅನುಷ್ಟಾನ, ಕೆಲಸ, ಸಮಸ್ಯೆಗಳ ಪರಿಹಾರ, ಸಾಧನೆಗಳೆಲ್ಲ ಆದ ಮೇಲೆ ಜನ ಮತ್ತೆ ಹರಸುವ, ಸಂಮಾನಿಸುವ ಕಾರ್‍ಯ ಮಾಡೇ ಮಾಡುತ್ತಾರೆ.

2 comments:

ಮಲ್ಲಿಕಾರ್ಜುನ.ಡಿ.ಜಿ. said...

ಮನಸು ಅವರೆ,
ನಿಮ್ಮ ಲೆಕ್ಕಾಚಾರ ಸರಿ. ಯಾರೂ ಇದರ ಬಗ್ಗೆ ಯೋಚಿಸುವುದಿಲ್ಲ. ಈ ವಿಷಯ ಎಲ್ಲರ ಗಮನಕ್ಕೆ ಬರಬೇಕು. ಹಣ ಹಾಳುಮಾಡಬಾರದು ಸದ್ವಿನಿಯೋಗವಾಗಬೇಕಿದೆ.

shivu said...

ಮನಸು ಸರ್,

ಗೆದ್ದ ಮೇಲೆ ಏನು ಮಾಡಬೇಕೆಂದು ತುಂಬಾ ಅರ್ಥಗರ್ಭಿತವಾಗಿ ಹೇಳಿದ್ದೀರಿ...

ಒಟ್ಟಾರೆ ಸಾರ್ವಜನಿಕ ಹಣ ಸದ್ವಿನಿಯೋಗವಾಗಬೇಕು ಅಷ್ಟೆ...

ಧನ್ಯವಾದಗಳು...